ಆರು ತಿಂಗಳ ಕಾಲ ಮುಂಬಡ್ತಿ ಸ್ಥಗಿತಗೊಂಡ ಹಿನ್ನೆಲೆ | ನಾಗರಿಕ ಸೇವಾ ನಿಯಮ 32 ಬಳಸಿ ಪ್ರಭಾರಿ ಹುದ್ದೆ

ಬೆಂಗಳೂರು (ಏ.09): ರಾಜ್ಯ ಸರ್ಕಾರ ಮುಂಬಡ್ತಿ ಸ್ಥಗಿತಗೊಳಿಸಿರುವುದರಿಂದ ನಿವೃತ್ತಿ ಅಂಚಿನ ನೌಕರರು ಮುಂಬಡ್ತಿ ಪಡೆಯಲು ಪರ್ಯಾಯ ಮಾರ್ಗ ಕಲ್ಪಿಸಲಿದೆ.
ಬಡ್ತಿ ಮೀಸಲು ವಿವಾದದ ಹಿನ್ನೆಲೆಯಲ್ಲಿ ಸ್ಥಗಿತವಾಗಿ ರುವ ಸರ್ಕಾರಿ ನೌಕರರ ಸಾಮಾನ್ಯ ಮುಂಬಡ್ತಿಯಿಂದ ರಾಜ್ಯದಲ್ಲಿ 2,000ಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಮುಂಬಡ್ತಿ ಪಡೆಯಲು ಸಮಸ್ಯೆ ಆಗಿದ್ದು, ಇವರಿಗೆ ಬಡ್ತಿ ನೀಡದಿದ್ದರೆ ಅವರು ಬಡ್ತಿ ಸೌಲಭ್ಯದಿಂದಲೇ ವಂಚಿತರಾಗುವ ಸಾಧ್ಯತೆ ಇದೆ. ಸಮಸ್ಯೆ ಪರಿಹರಿಸಲು ಸರ್ಕಾರ ನಾಗರಿಕ ಸೇವಾ ನಿಮಯಗಳ ಅಡಿಯಲ್ಲೇ ಬದಲಿ ವ್ಯವಸ್ಥೆ ಮಾಡಲು ಮುಂದಾಗಿದೆ.
ಅದು- ನಾಗರಿಕ ಸೇವಾ ನಿಯಮ 32 (ಇದರಡಿ ನೌಕರರಿಗೆ ಉನ್ನತ ಹುದ್ದೆಗಳನ್ನು ಪ್ರಭಾರದ ಮೇಲೆ ವಹಿಸಬಹುದು, ಇದು ತಾತ್ಕಾಲಿಕವಾಗಿರುತ್ತದೆ) ಬಳಸಿಕೊಂಡು, ಕೆಲವು ಷರತ್ತುಗಳನ್ನು ವಿಧಿಸಿ ನಿವೃತ್ತಿ ಸಮೀಪಿಸಿರುವ ನೌಕರರಿಗೆ ಬಡ್ತಿ ನೀಡುವುದು.
ರಾಜ್ಯದಲ್ಲಿ 7.97 ಲಕ್ಷ ಸರ್ಕಾರಿ ನೌಕರರ ಮಂಜೂರು ಹುದ್ದೆಗಳಿಗೆ 5.49 ಲಕ್ಷ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2018ರ ಜೂನ್‌ವರೆಗೆ ಸುಮಾರು 15,000 ಸರ್ಕಾರಿ ನೌಕರರು ನಿವೃತ್ತಿಯಾಗಲಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ 15,000 ನೌಕರರ ಪೈಕಿ ಸುಮಾರು 2000ಕ್ಕೂ ಹೆಚ್ಚಿನ ನೌಕರರು ಮುಂಬಡ್ತಿ ಪಡೆಯವ ಅರ್ಹತೆ ಹೊಂದಿದ್ದಾರೆ.

ಆದರೆ, ಸರ್ಕಾರ ಬಡ್ತಿ ಮೀಸಲು ವಿವಾದದ ಹಿನ್ನೆಲೆಯಲ್ಲಿ ಸಾಮಾನ್ಯ ಮುಂಬಡ್ತಿ ಸ್ಥಗಿತಗೊಳಿಸಿದ್ದು, ನಿವೃತ್ತಿ ಅಂಚಿನ 2000 ಮಂದಿಗೆ ತೊಂದರೆಯಾಗುತ್ತಿದೆ. ಇದನ್ನು ನೌಕರರ ಸಂಘ ಸರ್ಕಾರದ ಗಮನಕ್ಕೆ ತಂದು ವಂಚನೆ ಸರಿಪಡಿಸುವಂತೆ ಮನವಿ ಮಾಡಿತ್ತು. ಹೀಗಾಗಿ, ಸರ್ಕಾರ ಕರ್ನಾಟಕ ನಾಗರಿಕ ಸೇವಾ ನಿಯಮಗಳಲ್ಲಿ ಬರುವ ನಿಯಮ 32 ಬಳಸಿಕೊಂಡು ಕೆಲವು ಷರತ್ತುಗಳನ್ನು ವಿಧಿಸಿ ಪ್ರಭಾರದ ಹೆಸರಿನಲ್ಲಿ ಮುಂಬಡ್ತಿ ನೀಡಲು ನಿರ್ಧರಿಸಿದೆ. ಈ ಮೂಲಕ ಸಾಮಾನ್ಯ ಕ್ರಮಬದ್ಧ ಮುಂಬಡ್ತಿ ಬದಲಿಗೆ ಪರ್ಯಾಯ ವ್ಯವಸ್ಥೆ ಮೂಲಕ ಬಡ್ತಿ ಕಲ್ಪಿಸಲಿದೆ. ನಾಗರೀಕ ಸೇವಾ ನಿಯಮ 32ರಡಿ ನೌಕರರು ಉನ್ನತ ಹುದ್ದೆಗಳನ್ನು ಪ್ರಭಾರದ ಮೇಲೆ ನಿರ್ವಹಿಸಬಹುದಾಗಿದ್ದು, ಅದು ತಾತ್ಕಾಲಿಕವಾಗಿರುತ್ತದೆ ಎಂದು ಹೇಳುತ್ತದೆ. ಈ ನಿಯಮ ಬಳಸಿಕೊಂಡು ಸರ್ಕಾರ ಬಡ್ತಿ ನೀಡುವಾಗ ‘ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಪುನರ್‌ ಪರಿಶೀಲನಾ ಅರ್ಜಿಯ ಅಂತಿನ ತೀರ್ಪಿಗೆ ಒಳಪಟ್ಟು' ಎಂದೂ ಹೇಳಲಿದೆ. ಈ ಷರತ್ತು ವಿಧಿಸುವುದರಿಂದ ಪ್ರಭಾರಿ ಹುದ್ದೆ ಪಡೆದ ನಿವೃತ್ತಿ ಸಮೀಪಿಸಿದ ನೌಕರನು ಸಂದರ್ಭ ಬಂದರೆ (ಸುಪ್ರೀಂಕೋರ್ಟ್‌ ತೀರ್ಪು ಬಂದುಬಿಟ್ಟರೆ) ಪ್ರಭಾರ ಹುದ್ದೆಯನ್ನು ಬಿಟ್ಟುಕೊಡಬೇಕಾಗುತ್ತದೆ.

ಮುಂಬಡ್ತಿ ಸ್ಥಗಿತ ಆಗಿದ್ದೇಕೆ?: ರಾಜ್ಯ ಸರ್ಕಾರ 2002ರಲ್ಲಿ ಪರಿಶಿಷ್ಟಜಾತಿ, ವರ್ಗಗಳ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ಕಲ್ಪಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ಬಡ್ತಿ ಮೀಸಲಾತಿಯನ್ನು ತಡೆಹಿಡಿದಿದೆ. ಅಷ್ಟೇ ಅಲ್ಲ, 3 ತಿಂಗಳಲ್ಲಿ ಹೊಸ ಬಡ್ತಿ ಪಟ್ಟಿಸಿದ್ಧಪಡಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದು, ಅದರಂತೆ ಸರ್ಕಾರ ವಿವಿಧ ಇಲಾಖೆಗಳಲ್ಲಿ ಮೀಸಲು ಸೌಲಭ್ಯದಿಂದ ಬಡ್ತಿ ಪಡೆದವರ ಪಟ್ಟಿಯನ್ನು ಸಿದ್ಧಪಡಿಸಿ ಅವರಿಗೆ ಹಿಂಬಡ್ತಿ ನೀಡುವ ಪ್ರಕ್ರಿಯೆ ಬಗ್ಗೆ ಚಿಂತನೆ ನಡೆಸಿದೆ. ಅದೇ ರೀತಿ ಹಿಂಬಡ್ತಿಯಿಂದ ತೆರವಾಗುವ ಸ್ಥಾನಗಳಿಗೆ ಸಾಮಾನ್ಯ ಬಡ್ತಿ ನೀಡಲು ಪದನ್ನೋತಿ ಪಟ್ಟಿತಯಾರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಿವಿಲ್‌ ಸೇವೆಗಳಲ್ಲಿನ ಎಲ್ಲಾ ವೃಂದಗಳ ಹುದ್ದೆಗಳಿಗೂ 6 ತಿಂಗಳ ಅವಧಿಗೆ ಮುಂಬಡ್ತಿ ಯನ್ನು ಸ್ಥಗಿತಗೊಳಿಸಿ ಮಾ.22ರಂದು ಆದೇಶ ಹೊರಡಿಸಿತ್ತು. ಇದರ ಪ್ರಕಾರ ಎಲ್ಲಾ ರೀತಿಯ ಮುಂಬಡ್ತಿ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಸರ್ಕಾರದ ವಿವಿಧ ಇಲಾಖೆÜಗಳಿಗೆ ಸೂಚಿಸಲಾಗಿತ್ತು.

(ಸಾಂದರ್ಭಿಕ ಚಿತ್ರ)