Asianet Suvarna News Asianet Suvarna News

ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಯಾರು?

ಯೋಗಿ ಆದಿತ್ಯನಾಥ್ ಪಕ್ಕಾ ಹಿಂದೂವಾದಿ. ಈ ವಿಚಾರದಲ್ಲಿ ಬಿಜೆಪಿ ಜೊತೆಯೂ ಸಾಕಷ್ಟು ಸಂದರ್ಭಗಳಲ್ಲಿ ಸಂಘರ್ಷ ನಡೆಸಿದ್ದಾರೆ.

profile of yogi adityanath
  • Facebook
  • Twitter
  • Whatsapp

ನವದೆಹಲಿ: ಉತ್ತರಪ್ರದೇಶದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಭಾರತೀಯ ಜನತಾ ಪಕ್ಷವು ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರನ್ನ ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಸಂಪೂರ್ಣ ಹಿಂದುತ್ವವಾದಿ ಮುಖಂಡರಾಗಿರುವ ಯೋಗಿ ಆದಿತ್ಯನಾಥ್ ಸಿಎಂ ರೇಸ್'ನಲ್ಲಿ ಕೇಶವಪ್ರಸಾದ್ ಮೌರ್ಯ, ಮನೋಜ್ ಸಿನ್ಹಾ, ದಿನೇಶ್ ಶರ್ಮಾ ಮೊದಲಾದವರನ್ನು ಹಿಂದಿಕ್ಕಿದ್ದಾರೆ.

ಯಾರು ಈ ಆದಿತ್ಯನಾಥ್?
1972ರ ಜೂನ್ 5ರಂದು ಉತ್ತರಾಖಂಡ್'ನ ಗಡ್ವಾಲ್ ಜಿಲ್ಲೆಯಲ್ಲಿ ಜನಿಸಿದ ಆದಿತ್ಯನಾಥ್ ಬಿಎಸ್ಸಿ ಪದವೀಧರ. ಕೇವಲ 26ನೇ ವಯಸ್ಸಿಗೇ ಲೋಕಸಭೆ ಪ್ರವೇಶಿಸಿದ ವಿಶಿಷ್ಟ ವ್ಯಕ್ತಿ. ಗೋರಖ್'ಪುರದಿಂದ ಸತತ ಐದು ಬಾರಿ ಸಂಸದರಾಗಿ ಚುನಾಯಿತರಾಗಿದ್ದಾರೆ.

ಹಿಂದೂ ಯುವ ವಾಹಿನಿಯ ಸಂಸ್ಥಾಪರಾಗಿರುವ ಆದಿತ್ಯನಾಥ್, ಹಲವು ಹಿಂದೂಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಗೋರಖ್'ನಾಥ್ ಮಂದಿರದ ಪೀಠಾಧೀಶರೂ ಅವರಾಗಿದ್ದಾರೆ.

ಬಿಜೆಪಿ ಜೊತೆ ಸಂಘರ್ಷ:
ಯೋಗಿ ಆದಿತ್ಯನಾಥ್ ಪಕ್ಕಾ ಹಿಂದೂವಾದಿ. ಈ ವಿಚಾರದಲ್ಲಿ ಬಿಜೆಪಿ ಜೊತೆಯೂ ಸಾಕಷ್ಟು ಸಂದರ್ಭಗಳಲ್ಲಿ ಸಂಘರ್ಷ ನಡೆಸಿದ್ದಾರೆ. 2006ರಲ್ಲಿ ಲಕ್ನೋದಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದಾಗಲೇ, ಆದಿತ್ಯನಾಥ್ ಅವರು ಮೂರು ದಿನಗಳ ಕಾಲ ವಿರಾಟ್ ಹಿಂದೂ ಮಹಾಸಮ್ಮೇಳನವನ್ನು ಆಯೋಜಿಸಿ ಬಿಜೆಪಿ ನಾಯಕತ್ವಕ್ಕೆ ಕಣ್ಣುರಿ ಉಂಟು ಮಾಡಿದ್ದರು.

ಉತ್ತರಪ್ರದೇಶದ ಪೂರ್ವ ಭಾಗದಲ್ಲಿ ತನ್ನ ಪ್ರಭಾವ ಹೆಚ್ಚಾಗುತ್ತಿರುವಂತೆಯೇ ಪಕ್ಷದಲ್ಲಿ ತನಗೆ ಹೆಚ್ಚು ಸ್ಥಾನಮಾನ ಸಿಗಬೇಕೆಂಬುದು ಅವರ ಅಣತಿ. 2007ರ ಉ.ಪ್ರ. ವಿಧಾನಸಭೆಯಲ್ಲಿ ಪೂರ್ವ ಉತ್ತರಪ್ರದೇಶ ಭಾಗದಲ್ಲಿನ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ತನ್ನ ಮಾತು ನಡೆಯಬೇಕೆಂದು ಹಠಕ್ಕೆ ಬಿದ್ದಿದ್ದರು. ಎಂಟು ಕ್ಷೇತ್ರಗಳಲ್ಲಿ ಇವರು ಸೂಚಿಸಿದ ವ್ಯಕ್ತಿಗಳಿಗೆ ಬಿಜೆಪಿ ಟಿಕೆಟ್ ಸಿಕ್ಕಿತ್ತು.

ವಿವಾದಗಳ ಸುತ್ತ:

ಮತಾಂತರ: 2005ರಲ್ಲಿ ಅನ್ಯಧರ್ಮಗಳಿಗೆ ಮತಾಂತರಗೊಂಡಿದ್ದ ಹಿಂದೂಗಳನ್ನು ಮತ್ತೆ ವಾಪಸ್(ಘರ್ ವಾಪ್ಸಿ) ಕರೆತರುವ ಕಾರ್ಯದಲ್ಲಿ ಯೋಗಿ ಆದಿತ್ಯನಾಥ್ ತೊಡಗಿಸಿಕೊಂಡಿದ್ದರು. ಅದರಂತೆ, ಉತ್ತರಪ್ರದೇಶದ ಇಟಾದಲ್ಲಿ 1,800 ಕ್ರೈಸ್ತರನ್ನು ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿದ್ದರು.

ಗೋರಖ್'ಪುರ ಗಲಭೆ: 2007ರಲ್ಲಿ ಗೋರಖಪುರ್'ನಲ್ಲಿ ಮೊಹರಂ ಮೆರವಣಿಗೆ ವೇಳೆ ನಡೆದ ಗಲಭೆಯಲ್ಲಿ ಓರ್ವ ಹಿಂದೂ ವ್ಯಕ್ತಿ ಗಾಯಗೊಂಡಿದ್ದ. ಆತನನ್ನು ಭೇಟಿಯಾಗಂದರೆ ಯೋಗಿ ಆದಿತ್ಯನಾಥ್'ಗೆ ನಿರ್ಬಂಧ ಹಾಕಲಾಗಿತ್ತು. ಆದರೆ, ಮ್ಯಾಜಿಸ್ಟ್ರೇಟ್ ಆದೇಶ ಮೀರಿ ಯೋಗಿ ಆದಿತ್ಯನಾಥ್, ಸ್ಥಳಕ್ಕೆ ಭೇಟಿ ಕೊಟ್ಟು ಧರಣಿ ಆರಂಭಿಸಿದರು. ಈ ವೇಳೆ ಪ್ರಚೋದನಕಾರಿ ಭಾಷಣದಿಂದ ಉದ್ರಿಕ್ತಗೊಂಡ ಜನರ ಗುಂಪೊಂದು ಸಮೀಪದ ಮುಸ್ಲಿಂ ಧಾರ್ಮಿಕ ಸ್ಥಳದ ಮೇಲೆ ದಾಳಿ ನಡೆಸಿತು. ಪೊಲೀಸರು ಕರ್ಫ್ಯೂ ಹೇರಿದರು. ನಿಷೇಧಾಜ್ಞೆ ಉಲ್ಲಂಘನೆ ಮಾಡಿದ ಆದಿತ್ಯನಾಥರನ್ನು ಪೊಲೀಸರು ಬಂಧಿಸಿದರು. ಇದರಿಂದ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ಸಿಟ್ಟಿಗೆದ್ದು ಮುಂಬೈ-ಗೋರಖ್'ಪುರ್ ಎಕ್ಸ್'ಪ್ರೆಸ್ ರೈಲಿನ ಹಲವು ಬೋಗಿಗಳನ್ನು ಸುಟ್ಟರು. ಬಳಿಕ, ವಾತಾವರಣ ಇನ್ನಷ್ಟು ಹದಗೆಟ್ಟು ಗೋರಖ್'ಪುರದಲ್ಲಿ ಮುಸ್ಲಿಮರ ಮಸೀದಿ, ಮನೆಗಳ ಮೇಲೆ ದಾಳಿಯಾದವು. ಬಸ್ಸು, ರೈಲುಗಳನ್ನು ಸುಡಲಾಯಿತು.

ಮಹಿಳಾ ಮೀಸಲಾತಿಗೆ ವಿರೋಧ: 2010ರಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸಮ್ಮತಿ ಸೂಚಿಸಬೇಕೆಂದು ಭಾರತೀಯ ಜನತಾ ಪಕ್ಷ ತನ್ನೆಲ್ಲಾ ಸಂಸದರಿಗೆ ಸೂಚನೆ ನೀಡಿತ್ತು. ಆದರೆ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ಸಂಸದರು ತಮ್ಮ ಪಕ್ಷದ ಕಟ್ಟಪ್ಪಣೆಯನ್ನು ಮೀರಿ ಮಸೂದೆಯನ್ನು ವಿರೋಧಿಸಿದರು.

ಮುಸ್ಲಿಂ ಮಹಿಳೆಯ ಶವಗಳನ್ನು ರೇಪ್ ಮಾಡಿರಿ:
2011ರಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣಕಾರರೊಬ್ಬರು ಉದ್ರೇಕಕಾರಿ ಭಾಷಣ ಮಾಡಿದ್ದರು. ಮುಸ್ಲಿಂ ಮಹಿಳೆಯರ ಗೋರಿಗಳನ್ನು ಅಗೆದು, ಶವಗಳನ್ನು ರೇಪ್ ಮಾಡುವಂತೆ ಆ ವ್ಯಕ್ತಿ ಕರೆಕೊಟ್ಟಿದ್ದು. ಆ ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆ ಯೋಗಿ ಆದಿತ್ಯನಾಥ್ ಕೂಡ ಇದ್ದರು. ಈ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬಿದೆ.

ಯೋಗ ವಿರೋಧಿಗಳೇ ದೇಶ ಬಿಟ್ಟುಹೋಗಿ:
ಸೂರ್ಯನಮಸ್ಕಾರವನ್ನು ಕಡ್ಡಾಯಗೊಳಿಸುವ ಸರಕಾರದ ನಿರ್ಧಾರಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. 2015ರಲ್ಲಿ ಆದಿತ್ಯನಾಥ್ ಅವರು ಸೂರ್ಯನಮಸ್ಕಾರ ವಿರೋಧಿಗಳ ರಣಕಹಳೆ ಮೊಳಗಿಸಿದ್ದರು. ದೇಶಬಿಟ್ಟು ಹೋಗುವಂತೆ ಆಗ್ರಹಿಸಿದ್ದರು. ಸೂರ್ಯದೇವನನ್ನು ಕೋಮುದೃಷ್ಟಿಯಿಂದ ನೋಡುವವರು ಸಮುದ್ರದಲ್ಲಿ ಮುಳುಗಿ ಸಾಯಬೇಕು, ಅಥವಾ ಜೀವನಪರ್ಯಂತ ಕತ್ತಲ ಕೋಣೆಯಲ್ಲಿ ಬದುಕಬೇಕು ಎಂದು ಟೀಕಿಸಿದರು.

ಶಾರುಖ್ ಒಬ್ಬ ಉಗ್ರ:
ಮಾಧ್ಯಮಗಳಲ್ಲಿ ಅಸಹಿಷ್ಣುತೆ ಕುರಿತ ಚರ್ಚೆಗಳು ನಡೆಯುತ್ತಿದ್ದ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಪಾಕ್ ಉಗ್ರ ಹಫೀಜ್ ಸಯೀದ್ ಅವರಿಗೆ ಆದಿತ್ಯನಾಥ್ ಹೋಲಿಕೆ ಮಾಡಿದರು. "ದೇಶದ ಬಹುಸಂಖ್ಯಾತರು ಶಾರುಕ್ ಖಾನ್ ಅವರನ್ನು ಸ್ಟಾರ್ ಮಾಡಿದರು. ಅವರೆಲ್ಲರೂ ಶಾರುಕ್'ರ ಚಿತ್ರಗಳನ್ನು ವೀಕ್ಷಿಸದೇಹೋದರೆ, ಅವರು ಬೀದಿಯಲ್ಲಿ ಭಿಕ್ಷೆ ಎತ್ತಬೇಕಾಗುತ್ತದೆ. ಹಫೀಜ್ ಸಯೀದ್ ರೀತಿಯಲ್ಲೇ ಶಾರುಕ್ ಮಾತನಾಡುತ್ತಿರುವುದು ದುರ್ದೈವ" ಎಂದು ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದರು.

Follow Us:
Download App:
  • android
  • ios