ಬೆಂಗಳೂರು(ಮಾ.10): ಸಾರ್ವತ್ರಿಕ ಚುನಾವಣೆಯನ್ನು ಭಾರತದ ರಾಷ್ಟ್ರೀಯ ಹಬ್ಬ ಎಂತಲೇ ಕರೆಯುತ್ತಾರೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕ ಜಾತಿ, ಲಿಂಗ, ಧರ್ಮದ ಹಂಗಿಲ್ಲದೇ ಒಟ್ಟಾಗಿ ಭಾಗವಹಿಸುವ ಲೋಕಸಭೆ ಚುನಾವಣೆ ಎಂಬ ರಾಷ್ಟ್ರೀಯ ಹಬ್ಬಕ್ಕೆ ಕ್ಷಣಗಣನೆ ಶುರುವಾಗಲಿದೆ. 

ಇನ್ನು ಯುವಪೀಳಿಗೆಯ ಒಂದು ದೊಡ್ಡ ಪಡೆಯನ್ನೇ ಹೊಂದಿರುವ ಭಾರತದಲ್ಲಿ, ಇದೇ ಮೊದಲ ಬಾರಿಗೆ ಮತದಾನ ಮಾಡಲು ಕೋಟ್ಯಂತರ ಯುವಕ, ಯುವತಿಯರು ಕುತೂಹಲದಿಂದ ಕಾಯುತ್ತಿದ್ದಾರೆ. 

ಆದರೆ ಬಹುತೇಕರಿಗೆ ಚುನಾವಣಾ ಆಯೋಗ ಪ್ರಕಟಿಸುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೋ ಎಂಬ ಬಗ್ಗೆ ಖಚಿತ ಮಾಹಿತಿ ಇರುವುದಿಲ್ಲ. ಇದೇ ಕಾರಣಕ್ಕೆ ಮತದಾನದ ದಿನದಂದು ತಮ್ಮ ಹೆಸರು ಇಲ್ಲದೇ ಕೆಲವರು ಮತದಾನದಿಂದ ವಂಚಿತರಾಗುತ್ತಾರೆ.

ಆದರೆ ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಕುರಿತು ಆನ್‌ಲೈನ್ ಮೂಲಕ ಖಾತ್ರಿಪಡಿಸಿಕೊಳ್ಳುವ ಅವಕಾಶ ನೀಡಿದೆ. ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಕುರಿತು ಮತದಾರ ಮಾಹಿತಿ ಪಡೆಯಬಹುದಾಗಿದೆ.

ವಿಧಾನ ಹೇಗೆ?:

1. ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
2. ನ್ಯಾಶನಲ್ ವೋಟರ್ಸ್ ಸರ್ವೀಸ್  ಪೋರ್ಟಲ್‌ಗೆ ಭೇಟಿ ನೀಡಿ
3. ಮೂಲಭೂತ ದಾಖಲೆಗಳ ಕುರಿತು ಮಾಹಿತಿ ನೀಡಿ
4. ಮತದಾರನ ಹೆಸರು, ವಿಳಾಸ, ರಾಜ್ಯ, ವಿಧಾನಸಭಾ ಕ್ಷೇತ್ರ, ತಂದೆ/ಪತಿಯ ಹೆಸರು ಕುರಿತಾದ ಕಾಲಂ ಭರ್ತಿ ಮಾಡಿ.
5. ವೆಬ್ ಸೈಟ್ ನಲ್ಲಿ ಕಾಣ ಸಿಗುವ ಕೋಡ್ ನ್ನು ಸರಿಯಾಗಿ ನಮೂದಿಸಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.