ನವದೆಹಲಿ(ಮಾ.09): ಸಾರ್ವತ್ರಿಕ ಚುನಾವಣೆಯನ್ನು ಭಾರತದ ರಾಷ್ಟ್ರೀಯ ಹಬ್ಬ ಎಂತಲೇ ಕರೆಯುತ್ತಾರೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕ ಜಾತಿ, ಲಿಂಗ, ಧರ್ಮದ ಹಂಗಿಲ್ಲದೇ ಒಟ್ಟಾಗಿ ಭಾಗವಹಿಸುವ ಲೋಕಸಭೆ ಚುನಾವಣೆ ಎಂಬ ರಾಷ್ಟ್ರೀಯ ಹಬ್ಬಕ್ಕೆ ಕ್ಷಣಗಣನೆ ಶುರುವಾಗಲಿದೆ. 

ಇನ್ನು ಯುವಪೀಳಿಗೆಯ ಒಂದು ದೊಡ್ಡ ಪಡೆಯನ್ನೇ ಹೊಂದಿರುವ ಭಾರತದಲ್ಲಿ, ಇದೇ ಮೊದಲ ಬಾರಿಗೆ ಮತದಾನ ಮಾಡಲು ಕೋಟ್ಯಂತರ ಯುವಕ, ಯುವತಿಯರು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಮತದಾನ ಮಾಡಲು ವೋಟರ್ ಐಡಿ ಕಡ್ಡಾಯವಾಗಿದ್ದು, ಇನ್ನೂ ಹಲವಾರು ಮಂದಿ ಚುನಾವಣಾ ಆಯೋಗದ ಗುರುತಿನ ಚೀಟಿಗಾಗಿ ಕಾಯುತ್ತಿದ್ದಾರೆ.

ನೀವು ವೋಟರ್  ಐಡಿಯನ್ನು  ಪಡೆಯದಿದ್ದರೆ ಚುನಾವಣಾ ಆಯೋಗಕ್ಕೆ ಅಲೆಯಬೇಕೆಂದೆನಿಲ್ಲ. ಆನ್‌ಲೈನ್ ಮೂಲಕವೇ ಮತದಾರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಒಂದು ಕ್ಷೇತ್ರ, ನಗರ, ಜಿಲ್ಲೆ, ಅಥವಾ ರಾಜ್ಯದಿಂದ ಮತ್ತೊಂದು ಕಡೆಗೆ ಹೋಗುವವರು ,ಮತದಾರ ಚೀಟಿ ಕಳೆದುಕೊಂಡಿರುವವರು, ಅಥವಾ ವೋಟರ್ ಐಡಿಯಲ್ಲಿ ಬದಲಾವಣೆ ಮಾಡಿಸುವವರು ಈಗ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ ಅರ್ಜಿ ಸಲ್ಲಿಕೆ  ವಿಧಾನ:
ಈ ಕೆಳಕಂಡ ವಿಧಾನದ ಮೂಲಕ ನೀವು ಆನ್‌ಲೈನ್ ಮೂಲಕ ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
1. ರಾಷ್ಟ್ರೀಯ ವೋಟರ್ ಸರ್ವೀಸಸ್ ಪೋರ್ಟಲ್ ಪೇಜ್  (NVSP)ಗೆ  ಭೇಟಿ ನೀಡಬೇಕು.
2. ಹೊಸ ವೋಟರ್ ಕಾರ್ಡ್ ನೋಂದಾಣಿಗಾಗಿ  ಇರುವ (Apply online for Registration) ಕ್ಲಿಕ್ ಮಾಡಬೇಕು.
3. ನಂತರ ಹಿಂದಿ ಭಾಷೆಯಲ್ಲಿರುವ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ನೀವು ಭಾಷೆಯನ್ನು ಬದಲಾಯಿಸಲು ಬಯಸಿದರೆ ಪುಟದ ಮೇಲಿನ ಬಲ ಭಾಗದಲ್ಲಿರುವ ಡ್ರಾಪ್ ಡೌನ್  ಆಯ್ಕೆಯನ್ನು ಕ್ಲಿಕ್ ಮಾಡಬೇಕು.
4. ಅಗತ್ಯವಾದ ಮಾಹಿತಿ ಭರ್ತಿ ಮಾಡಿ,  ಪೋಟೋ, ವಯಸ್ಸು, ವಿಳಾಸದ ಪುರಾವೆ ಮತ್ತಿತರ ಅಗತ್ಯ ದಾಖಲೆಗಳನ್ನು ಅರ್ಜಿಯಲ್ಲಿ ಸೇರಿಸಬೇಕು.  ನಂತರ ಪುಟದ ಕೆಳಭಾಗದಲ್ಲಿರುವ 'Submit' option  ಕ್ಲಿಕ್ ಮಾಡಬೇಕು.
5. ನೀವು  ಅರ್ಜಿಯನ್ನು ಸಲ್ಲಿಸಿದ ನಂತರ  ನಿಮ್ಮ ಇ-ಮೇಲ್‌ಗೆ ಅಧಿಕೃತ ಸಂದೇಶವೊಂದು ಬರುತ್ತದೆ. ನಂತರ ‘Track application status'  ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಗಮನಿಸಬಹುದಾಗಿದೆ. 

6. ಎಲ್ಲಾ ಪ್ರಕ್ರಿಯೆ ಮುಗಿಯಲು ಕನಿಷ್ಠ ಒಂದು ತಿಂಗಳ ಕಾಲಾವಧಿಯಾದರೂ ಬೇಕು. ಪರ್ಯಾಯವಾಗಿ NVSP website ಗೆ ಹೋಗಿ  'Track application status ಮೇಲೆ ಕ್ಲಿಕ್ ಮಾಡಬೇಕು. 

ಅನಿವಾಸಿ ಭಾರತೀಯರು ಅರ್ಜಿ ಸಲ್ಲಿಸುವ ವಿಧಾನ:
1. NVSP ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
2. ಇದರಲ್ಲಿನ ಎರಡನೇ ಆಯ್ಕೆಯಾದ ‘Apply online for registration of overseas voter Form 6A’ ಕ್ಲಿಕ್ ಮಾಡಬೇಕು.
3. ಅಗತ್ಯ ಮಾಹಿತಿ ಭರ್ತಿ ಮಾಡಿ , Submit.'  ಬಟನ್ ಕ್ಲಿಕ್ ಮಾಡಬೇಕು.

ವಿಶೇಷ ಸೂಚನೆ:
NVSP ವೆಬ್‌ಸೈಟ್‌ನಲ್ಲಿನ ವಿವಿಧ ಆಯ್ಕೆಗಳ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಬದಲಾವಣೆ, ಅಥವಾ ತಿದ್ದುಪಡಿ ಮಾಡಬಹುದಾಗಿದೆ. ಆದರೆ ಈ ಫಾರ್ಮ್ ನಂ6ನ್ನು ಚುನಾವಣೆ ದಿನಾಂಕ ಘೋಷಣೆಯಾದ ಮೇಲೆ ಭರ್ತಿ ಮಾಡಲು ಬರುವುದಿಲ್ಲ. 

ಕ್ಷೇತ್ರ ಬದಲಾವಣೆ ಹೇಗೆ?:

ಒಂದು ವೇಳೆ ನೀವು ಈಗಾಗಲೇ ವೋಟರ್ ಐಡಿ ಪಡೆದಿದ್ದು, ಈ ಮೊದಲಿನ ಲೋಕಸಭೆ ಕ್ಷೇತ್ರ ಬಿಟ್ಟು ಮತ್ತೊಂದು ಲೋಕಸಭೆ ಕ್ಷೇತ್ರಕ್ಕೆ ವಲಸೆ ಹೋಗಿದ್ದರೆ ಅವರೂ ಕೂಡ ಹೊಸ ಗುರುತಿನ ಚೀಟಿ ಪಡೆಯಬಹುದು. ಅದಕ್ಕಾಗಿ ನೀವು NVSP ವೆಬ್‌ಸೈಟ್‌ಗೆ ಭೇಟಿ ನೀಡಿ ಹಳೆಯ ಲೋಕಸಭೆ ಕ್ಷೇತ್ರದ ವೋಟರ್ ಐಡಿಯನ್ನು ರದ್ದುಗೊಳಿಸಬೇಕು. ನಂತರ ರದ್ದುಗೊಂಡ ವೋಟರ್ ಐಡಿ ಮಾಹಿತಿಯನ್ನು ಲಗತ್ತಿಸಿ ಹೊಸ ವೋಟರ್ ಐಡಿಗಾಗಿ ಮತ್ತೆ ಅರ್ಜಿ ಸಲ್ಲಿಸಬಹುದು. 

ಆನ್‌ಲೈನ್ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:
1. ಒಂದು ಪಾಸ್ ಪೋರ್ಟ್ ಸೈಜ್ ಪೋಟೋ
2. ಹುಟ್ಟಿದ ದಿನಾಂಕ, ಪಾಸ್‌ಪೋರ್ಟ್,  ಡ್ರೈವಿಂಗ್ ಲೈಸೆನ್ಸ್,  ಆಧಾರ್ ಮತ್ತು ಪ್ಯಾನ್ ಕಾರ್ಡ್  ಅಥವಾ 5, 8 ಅಥವಾ 10 ನೇ ತರಗತಿಯ ಅಂಕಪಟ್ಟಿ, ಮತ್ತಿತರ ಯಾವುದೇ ಗುರುತಿನ ಆಧಾರ.
3. ಯಾವುದೇ ರೀತಿಯ ವಿಳಾಸದ ಪುರಾವೆಗಳು- ಪಾಸ್‌ಪೋರ್ಟ್, ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ, ಆದಾಯ ತೆರಿಗೆಗೆ ಸಂಬಂಧಿಸಿದ ದಾಖಲೆಗಳು, ಬಾಡಿಗೆ ಒಪ್ಪಂದದ ಪತ್ರ, ಡ್ರೈವಿಂಗ್ ಲೈಸೆನ್ಸ್,  ಅಥವಾ ನೀರು, ದೂರಸಂಪರ್ಕ, ವಿದ್ಯುತ್, ಗ್ಯಾಸ್ ಸಂಪರ್ಕದ ಬಿಲ್ ಮತ್ತಿತರ ದಾಖಲೆಗಳು