ಸಾರಿಗೆ ನೌಕರರ ಅಂತರ್‌ ನಿಗಮ ವರ್ಗಾವಣೆಯ ಆನ್‌ಲೈನ್‌ ಅರ್ಜಿ ಸಲ್ಲಿಕೆ ಶನಿವಾರದಿಂದ (ಜೂ.24) ಆರಂಭವಾಗಿದೆ. ಆದರೆ, ವರ್ಗಾವಣೆಗೆ ರೂಪಿಸಿರುವ ನಿಯಮಾವಳಿ ದೋಷದಿಂದ ಕೂಡಿದೆ ಎಂದು ರಾಜ್ಯ ಸಾರಿಗೆ ನೌಕರರ ಫೆಡರೇಶನ್‌ ಆರೋಪಿಸಿದ್ದು, ಹೋರಾಟಕ್ಕೆ ನಿರ್ಧರಿಸಿದೆ.

ಬೆಂಗಳೂರು(ಜೂ.25): ಸಾರಿಗೆ ನೌಕರರ ಅಂತರ್‌ ನಿಗಮ ವರ್ಗಾವಣೆಯ ಆನ್‌ಲೈನ್‌ ಅರ್ಜಿ ಸಲ್ಲಿಕೆ ಶನಿವಾರದಿಂದ (ಜೂ.24) ಆರಂಭವಾಗಿದೆ. ಆದರೆ, ವರ್ಗಾವಣೆಗೆ ರೂಪಿಸಿರುವ ನಿಯಮಾವಳಿ ದೋಷದಿಂದ ಕೂಡಿದೆ ಎಂದು ರಾಜ್ಯ ಸಾರಿಗೆ ನೌಕರರ ಫೆಡರೇಶನ್‌ ಆರೋಪಿಸಿದ್ದು, ಹೋರಾಟಕ್ಕೆ ನಿರ್ಧರಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಎನ್‌ಇಕೆಆರ್‌ಟಿಸಿ) ಹಾಗೂ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ (ಎನ್‌ಡಬ್ಲ್ಯೂಕೆಆರ್‌ಟಿಸಿ) ಕಾರ್ಯ ನಿರ್ವಹಿಸುತ್ತಿರುವ ದರ್ಜೆ 3ರ ಮೇಲ್ವಿಚಾರಕೇತರ ಸಿಬ್ಬಂದಿ ಮತ್ತು ದರ್ಜೆ 4ರ ಸಿಬ್ಬಂದಿಗೆ ಒಂದೇ ಒಂದು ಬಾರಿ ಅಂತರ್‌ ನಿಗಮ ವರ್ಗಾವಣೆಗೆ ಸಾರಿಗೆ ಇಲಾಖೆ ಅವಕಾಶ ಕಲ್ಪಿಸಿದೆ. ಅದರಂತೆ ಜೂ.24ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಆರಂಭವಾಗಿದೆ.

\ಸಾರಿಗೆ ನೌಕರರರ ಅಂತರ್‌ ನಿಗಮ ವರ್ಗಾವಣೆಗೆ ನಿಯಮಾವಳಿ ರೂಪಿಸಲು ನಾಲ್ಕು ಸಾರಿಗೆ ನಿಗಮಗಳ ವ್ಯವಸ್ಥಾಪಕರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಹಲವು ಸುತ್ತಿನ ಸಭೆಗಳನ್ನು ನಡೆಸಿ ಚರ್ಚಿಸಿ ವರ್ಗಾವಣೆ ನಿಯಮಾವಳಿ ರೂಪಿಸಿತ್ತು. ಇದರ ಆಧಾರದ ಮೇಲೆ ನೌಕರರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಈ ವರ್ಗಾವಣೆ ನಿಯಾಮಾವಳಿ ದೋಷದಿಂದ ಕೂಡಿವೆ. ಇದರಿಂದ ಹಲವು ನೌಕರರಿಗೆ ಅನ್ಯಾಯವಾಗಲಿದೆ ಎಂದು ಸಾರಿಗೆ ನೌಕರರ ಸಂಘ ಆರೋಪಿಸಿದೆ.

ಏನಿದು ದೋಷ?: ಒಂದೇ ಒಂದು ಬಾರಿ ಕಾಯಂ ನೌಕರರಿಗೆ ಮಾತ್ರ ಈ ವರ್ಗಾವಣೆ ಅನ್ವಯ ಎಂದು ನಿಯಮಾವಳಿಯಲ್ಲಿ ಹೇಳಲಾಗಿದೆ. ಆದರೆ ಪ್ರೊಬೇಷನರಿ ಹಾಗೂ ಟ್ರೈನಿ ನೌಕರರು ಏನು ಮಾಡಬೇಕು? ಜತೆಗೆ ನಿಯಮಾವಳಿಯಲ್ಲಿ ಅಂಗವಿಕಲ ನೌಕರರನ್ನು ಪರಿಗಣಿಸಿಲ್ಲ ಹಾಗೂ ಮ್ಯುಚ್ಯುವಲ್‌ಗೂ ಅವಕಾಶ ನೀಡಿಲ್ಲ. ಹಾಗಾಗಿ ಈ ದೋಷಪೂರಿತ ನಿಯಮಾವಳಿಯಿಂದ ಈ ಎಲ್ಲ ನೌಕರರಿಗೆ ಅನ್ಯಾಯವಾಗಲಿದೆ ಎಂದು ರಾಜ್ಯ ಸಾರಿಗೆ ನೌಕರರ ಫೆಡರೇಷನ್‌ ಜಂಟಿ ಕಾರ್ಯದರ್ಶಿ ಆನಂದ್‌ ಹೇಳುತ್ತಾರೆ.

ತರಾತುರಿಯಲ್ಲಿ ವರ್ಗಾವಣೆ: ಸಾರಿಗೆ ನೌಕರರ ಅಂತರ್‌ ನಿಗಮ ವರ್ಗಾವಣೆ ಸಂಬಂಧ ನೌಕರರ ಸಂಘದ ಪದಾಧಿಕಾರಿಗಳ ಜತೆಗೆ ಸಾರಿಗೆ ಸಚಿವರು, ನಿಗಮದ ಅಧ್ಯಕ್ಷರು ಜೊತೆ ಈ ಹಿಂದೆ ಹಲವಾರು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ವರ್ಗಾವಣೆಯಲ್ಲಿ ಅಂಗವಿಕಲ ನೌಕರರು, ಪ್ರೊಬೇಷನರಿ ಹಾಗೂ ಟ್ರೈನಿ ನೌಕರರನ್ನು ಪರಿಗಣಿಸಿ ನಿಯಮ ರೂಪಿಸಬೇಕು ಎಂದು ಮನವಿ ಮಾಡಲಾಗಿತ್ತು. ಆಗ ಸಮ್ಮತಿ ಸೂಚಿಸಿ ಈಗ ನೌಕರರ ವಿರೋಧಿ ನಿಯಮಾವಳಿ ರೂಪಿಸಿ ತರಾತುರಿಯಲ್ಲಿ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದಕ್ಕೆ ನಮ್ಮ ವಿರೋಧವಿದ್ದು, ಹೋರಾಟ ಮಾಡುವುದು ಅನಿವಾರ್ಯ ಎಂದು ಆನಂದ್‌ ಹೇಳುತ್ತಾರೆ.