ನಾಡಹಬ್ಬ ದಸರಾ ಮಹೋತ್ಸವದಲ್ಲಿ ಆಯೋಜಿಸಿರುವ ಹೆಲಿಕಾಪ್ಟರ್‌ ಜಾಲಿ ರೈಡ್‌ ನಿಂದ ಸಂಕಷ್ಟ ಎದುರಾಗಿದೆ . ಪ್ರವಾಸಿಗರ ಆಕರ್ಷಣೆಗಾಗಿ ನಡೆಸುತ್ತಿರುವ ಈ ಕಾರ್ಯಕ್ರಮ ಜಂಬೂ ಸವಾರಿ ಮೇಲೆಯೇ ಪರಿಣಾಮ ಬೀರುತ್ತದೆ ಎನ್ನುವ ಆತಂಕ ಮೂಡಿದೆ. ಹಾಗಾದರೆ ಏನದು ಸಂಕಷ್ಟ? ಜಂಬೂಸವಾರಿಗೂ ಇದಕ್ಕು ಏನು ಸಂಬಂಧ. ಬನ್ನಿ ನೋಡೋಣ.

ಮೈಸೂರು(ಸೆ.24): ಈ ಬಾರಿಯ ದಸರಾ ಆಕರ್ಷಣೆಗೆ ಪ್ರವಾಸಿಗರಿಗಾಗಿ ಹೆಲಿ ರೈಡ್ ಆಯೋಜಿಸಲಾಗಿದೆ. ಇದರಿಂದ ಜನರು ಕೂಡ ಫುಲ್ ಎಂಜಾಯ್ ಮಾಡ್ತಿದ್ದಾರೆ. ಆದ್ರೆ ಇದೇ ಹೆಲಿ ರೈಡ್ ನಿಂದ ಈಗ ಸಂಕಷ್ಟ ಉಂಟಾಗಿದೆ. ಯೆಸ್, ಹೆಲಿ ರೈಡ್ ದಸರಾ ಜಂಬೂಸವಾರಿ ಆನೆಗಳಿಗೆ ಗಾಬರಿ ಹಾಗೂ ಆತಂಕವನ್ನು ತಂದೊಡ್ಡುತ್ತಿದೆ. ನಿತ್ಯ 2 ಕಾಪ್ಟರ್‌ಗಳು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಹಾರಾಟ ನಡೆಸಿ ಜನರಿಗೆ ಖುಷಿ ನೀಡುತ್ತಿವೆಯಾದರೂ, ಅರಮನೆ ಬಳಿ ಬಂದಾಗ ಅವು ಮಾಡುವ ಜೋರು ಶಬ್ದದಿಂದಾಗಿ, ಆನೆಗಳು ಗಾಬರಿ ಭೀಳುತ್ತಿವೆ. ಇದರಿಂದ ಜಂಬೂ ಸವಾರಿ ಮೇಲೂ ಪರಿಣಾಮ ಭಿರುತ್ತದೆ ಎನ್ನುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಹೆಲಿರೈಡ್‌ ಮಾರ್ಪಾಡಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ದಸರಾ ಉದ್ಘಾಟನೆಗೆ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ ಮಾಡಲು ಆರಂಭಿಸಿದ್ದಾಗ, ಜಂಬೂ ಸವಾರಿಯ ಆನೆಗಳೆಲ್ಲ ಬೆದರಿ ಎಲ್ಲೆಂದರಲ್ಲಿ ಓಡಲು ಆರಂಭಿಸಿದ್ದವು. ಹೀಗಾಗಿ ಅಪರಿಚಿತ ಶಬ್ದವನ್ನು ಆನೆಗಳು ಸಹಿಸಿಕೊಳ್ಳುವುದಿಲ್ಲವಾದ್ದರಿಂದ, ಸೂಕ್ತ ತರಬೇತಿಯ ಅವಶ್ಯಕತೆ ಇದೆ. ಹೀಗಾಗಿ ಹೆಲಿರೈಡ್‌ ನಿಲ್ಲಿಸುವುದು ಒಳಿತು ಎನ್ನುವುದು ಆನೆಗಳ ವೈದ್ಯ ನಾಗರಾಜ್ ಆಗ್ರಹಿಸಿದ್ದಾರೆ.

ಒಟ್ಟಾರೆ ಆನೆಗಳು ಅತಿ ಸೂಕ್ಷ್ಮ ಜೀವಿಗಳಾಗಿದ್ದು, ಹೊಸದಾಗಿ ಉಂಟಾಗುವ ಶಬ್ಧಗಳಿಗೆ ಅವು ಬೇಗನೇ ರಿಯಾಕ್ಟ್ ಮಾಡುತ್ತವೆ. ಜಂಬೂ ಸವಾರಿಯಲ್ಲಿ ಲಕ್ಷಾಂತರ ಜನರ ನಡುವೆ ಆನೆಗಳು ಸಾಗಬೇಕಾಗಿರುವುದರಿಂದ ಅಧಿಕಾರಿಗಳು ಹೆಲಿ ರೈಡ್ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.