ನವದೆಹಲಿ[ಜ.06]: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರ ಆಪ್ತ ಎನ್ನಲಾದ ಮನೋಜ್‌ ಅರೋರಾ ವಿರುದ್ಧ ಕಾಲ ಮಿತಿಯಿಲ್ಲದ ಜಾಮೀನು ರಹಿತ ವಾರೆಂಟ್‌ ಹೊರಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ದೆಹಲಿ ಕೋರ್ಟ್‌ ಮೊರೆ ಹೋಗಿದೆ. ಆದರೆ, ಈ ಅರ್ಜಿ ವಿಚಾರಣೆಯನ್ನು ಕೋರ್ಟ್‌ ಸೋಮವಾರಕ್ಕೆ ಮುಂದೂಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆ ಹಾಜರಾಗುವಂತೆ ನೀಡಲಾದ ಸಮನ್ಸ್‌ಗಳನ್ನು ಮನೋಜ್‌ ಅರೋರಾ ನಿರ್ಲಕ್ಷಿಸಿದ್ದಾರೆ. ಹೀಗಾಗಿ, ಮನೋಜ್‌ ಅರೋರಾ ವಿರುದ್ಧ ಕಾಲ ಮಿತಿಯಿಲ್ಲದ ಜಾಮೀನು ರಹಿತ ವಾರೆಂಟ್‌ ಹೊರಡಿಸಬೇಕು ಎಂದು ಇಡಿ ಮನವಿ ಮಾಡಿದೆ.

ಅಲ್ಲದೆ, ಈ ಪ್ರಕರಣದ ಮುಖ್ಯ ಆರೋಪಿಯಾಗಿರುವ ಅರೋರಾಗೆ, ವಿದೇಶದಲ್ಲಿ ವಾದ್ರಾ ಹೊಂದಿರುವ ಘೋಷಣೆ ಮಾಡಿಕೊಳ್ಳದ ಆಸ್ತಿಗಳ ಕುರಿತಾದ ಎಲ್ಲ ಮಾಹಿತಿಗಳು ತಿಳಿದಿವೆ ಎಂದು ಜಾರಿ ನಿರ್ದೇಶನಾಲಯ ಪ್ರತಿಪಾದಿಸಿದೆ.