ನಟ ಚೇತನ್ ವಿರುದ್ಧ ನಟಿ ಪ್ರಿಯಾಂಕ ಉಪೇಂದ್ರ ಗರಂ ಆಗಿದ್ದಾರೆ.  ‘ಫೈರ್‌’ ಸಂಸ್ಥೆಯನ್ನು ದೃಢವಾಗಿ ಮುನ್ನಡೆಸುವುದಕ್ಕೆ ತಮಗೆ ಧೈರ್ಯ, ಸಾಮರ್ಥ್ಯ ಹಾಗೂ ಜವಾಬ್ದಾರಿ ಇಲ್ಲ ಎಂದು ನಟ ಚೇತನ್‌ ಹೇಳಿರುವುದನ್ನು ನಟಿ ಪ್ರಿಯಾಂಕಾ ಉಪೇಂದ್ರ ಖಂಡಿಸಿದ್ದಾರೆ.

ಬೆಂಗಳೂರು :  ಅಧ್ಯಕ್ಷ ಸ್ಥಾನದಲ್ಲಿ ಕೂತು ‘ಫೈರ್‌’ ಸಂಸ್ಥೆಯನ್ನು ದೃಢವಾಗಿ ಮುನ್ನಡೆಸುವುದಕ್ಕೆ ತಮಗೆ ಧೈರ್ಯ, ಸಾಮರ್ಥ್ಯ ಹಾಗೂ ಜವಾಬ್ದಾರಿ ಇಲ್ಲ ಎಂದು ನಟ ಚೇತನ್‌ ಹೇಳಿರುವುದನ್ನು ನಟಿ ಪ್ರಿಯಾಂಕಾ ಉಪೇಂದ್ರ ಖಂಡಿಸಿದ್ದಾರೆ.

ತಮ್ಮನ್ನು ಅಸಮರ್ಥರು ಎಂದು ಬಣ್ಣಿಸಿರುವ ಚೇತನ್‌ ಅವರ ವಾದಕ್ಕೆ ತಿರುಗೇಟು ನೀಡಿರುವ ನಟಿ ಪ್ರಿಯಾಂಕಾ ಈ ಕುರಿತು ಸುದೀರ್ಘವಾದ ಸ್ಪಷ್ಟೀಕರಣ ನೀಡಿದ್ದಾರೆ. ಚಿತ್ರರಂಗದ ಸಮಸ್ಯೆಗಳನ್ನು ಚಿತ್ರರಂಗದ ಒಳಗೆಯೇ ಬಗೆಹರಿಸುವ ಮೂಲಕ ಇಲ್ಲಿ ಶೋಷಣೆಗೆ ಒಳಗಾಗುತ್ತಿರುವವರ ಪರವಾಗಿ ನಿಲ್ಲಬೇಕು ಎಂಬ ಉದ್ದೇಶದಿಂದ ಫೈರ್‌ ಸಂಸ್ಥೆ ಕಟ್ಟಲಾಗಿತ್ತು. ಆದರೆ, ಕೆಲವು ವಿಚಾರಗಳಲ್ಲಿ ಹಿಂದೆ ಮುಂದೆ ತಿಳಿಯದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ನಟ ಚೇತನ್‌ ಒತ್ತಾಯಿಸುತ್ತಿದ್ದರು. 

ಅದರಲ್ಲೂ ನಟಿಯೊಬ್ಬಳ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದ ನಟ ದಿಲೀಪ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ಚಿತ್ರರಂಗದಿಂದ ಅವರನ್ನು ದೂರ ಇಡಬೇಕೆಂಬ ಅಲ್ಲಿನ ಕೆಲವರ ಬೇಡಿಕೆಗೆ ನಮ್ಮ ಫೈರ್‌ ಸಂಸ್ಥೆ ಬೆಂಬಲ ಸೂಚಿಸಬೇಕೆಂಬ ವಿಚಾರದಲ್ಲಿ ನನ್ನ ಮತ್ತು ಚೇತನ್‌ ನಡುವೆ ಭಿನ್ನಾಭಿಪ್ರಾಯ ಬಂದಿತ್ತು.

ಫೈರ್‌ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಅವರು ಸಂಸ್ಥೆಯ ಉದ್ದೇಶಗಳನ್ನು ದಾರಿ ತಪ್ಪಿಸುತ್ತಿದ್ದರು. ಇಂಥ ಸಂಸ್ಥೆಯಲ್ಲಿ ನಾನು ಇರುವುದು ಸೂಕ್ತವಲ್ಲ ಎಂದು ಫೈರ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಯೇ ಹೊರತು ಧೈರ್ಯ ಅಥವಾ ಕಾರ್ಯದಕ್ಷತೆ ಇಲ್ಲ ಎನ್ನುವ ಕಾರಣಕ್ಕಲ್ಲ ಎಂದಿದ್ದಾರೆ.