ಮಹಿಳಾ ಕಲ್ಯಾಣಕ್ಕೆ ಪ್ರಿಯಾಂಕಾ ಉಪೇಂದ್ರ ಹೇಳಿದ ಐದು ಐಡಿಯಾಗಳು

1. ಮಹಿಳೆಯರಿಗಾಗಿ ಆಗಬೇಕಾಗಿರುವ ಬದಲಾವಣೆಗಳು ಸಾಕಷ್ಟಿವೆ. ನನ್ನ ಪ್ರಕಾರ
ಮೊದಲು ಸುರಕ್ಷತೆಗೆ ಹೆಚ್ಚು ಒತ್ತು ಕೊಡಬೇಕು. ಮಹಿಳೆಯರು ಎಲ್ಲಾ ಕಡೆ ಭಯ ಮುಕ್ತವಾಗಿ ಓಡಾಡಬೇಕು. ಅದಕ್ಕಾಗಿ  ಪ್ರಾಥಮಿಕ ಶಾಲೆಗಳ ಮಟ್ಟದಲ್ಲೇ ಸ್ವ ರಕ್ಷಣೆ ಮಾಡಿಕೊಳ್ಳುವುದರ ಬಗ್ಗೆ ವಿಶೇಷ ಕೋರ್ಸ್
ಪ್ರಾರಂಭ ಮಾಡುತ್ತೇನೆ.

2.  ನಾನು ಮೊದಲಿನಿಂದಲೂ ಬೇರೆ ಬೇರೆ ದೇಶಗಳನ್ನು ಕಂಡಿದ್ದೇನೆ. ಅಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯಗಳಿವೆ. ಅವೆಲ್ಲವನ್ನೂ ರಾಜ್ಯದಲ್ಲಿ ಜಾರಿಗೆ ತರುತ್ತೇನೆ. ಈಗ ಕಾನೂನುಗಳು ಇಲ್ಲವೆಂದಲ್ಲ. ಆದರೆ ಅವ್ಯಾವುಗಳೂ ಸರಿಯಾಗಿ ಜಾರಿಗೆ ಬರುತ್ತಿಲ್ಲ. ನಾನು ಮೊದಲಿಗೆ ಇರುವ ಕಾನೂನುಗಳ ಜೊತೆಗೆ ಮತ್ತಷ್ಟು ಕಠಿಣ ಕಾನೂನುಗಳನ್ನು  ತಂದು ಪ್ರತಿ ಹೆಣ್ಣಿಗೂ ಸೌಲಭ್ಯ ತಲುಪುವಂತೆ ಮಾಡುತ್ತೇನೆ.

3.  ಹೆಣ್ಣು ಭ್ರೂಣ ಹತ್ಯೆ ಇಂದಿಗೂ ನಡೆಯುತ್ತಲೇ ಇದೆ. ಇದರ ಬಗ್ಗೆ ಇರುವ ಕಾನೂನು ಇನ್ನೂ ಬಿಗಿಯಾಗಬೇಕು. ಹೆಣ್ಣು ಮಗು ಎನ್ನುವ ಕಾರಣಕ್ಕೆ ರಸ್ತೆ ಬದಿಯಲ್ಲಿ ಹೆಣ್ಣು ಮಗುವನ್ನು  ಬಿಸಾಕಿ ಹೋಗುವುದನ್ನೂ ನಾನು ಕಂಡಿದ್ದೇನೆ. ಅದೆಲ್ಲಕ್ಕೂ ಕಡಿವಾಣ ಹಾಕುತ್ತೇನೆ. ಮಹಿಳೆಯರಿಗೆ ಮನೆ, ಉಚಿತ ವೈದ್ಯಕೀಯ  ಸೌಲಭ್ಯ ನೀಡಲು ಎಲ್ಲಾ ಕ್ರಮ  ಕೈಗೊಳ್ಳುತ್ತೇನೆ.

4.  ಮಹಿಳೆಯರಿಗೆ ಆರ್ಥಿಕ ಭದ್ರತೆ,  ಶೈಕ್ಷಣಿಕವಾಗಿ ಮುಂದೆ ತರುವಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಇಂದಿಗೂ ಸಾಕಷ್ಟು ಶಾಲೆಗಳಲ್ಲಿ ವ್ಯವಸ್ಥಿತವಾದ ಶೌಚಾಲಯಗಳಿಲ್ಲ. ಇದರಿಂದ
ಮಕ್ಕಳು ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಈ ರೀತಿಯ ಮೂಲ ಸಮಸ್ಯೆಗಳನ್ನು ಇಟ್ಟುಕೊಂಡು ಮಹಿಳಾ ಸಬಲೀಕರಣವನ್ನು ಬೇರು ಮಟ್ಟದಿಂದಲೇ ಪ್ರಾರಂಭಿಸುತ್ತೇನೆ.

5.  ಇನ್ನು ನಮ್ಮ ಸಮಾಜದಲ್ಲಿ  ಸಾಮಾನ್ಯವಾಗಿರುವ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ ಎಲ್ಲವನ್ನೂ ಸಂಪೂರ್ಣವಾಗಿ ತೊಡೆದುಹಾಕುತ್ತೇನೆ. ನನ್ನ ಪ್ರಕಾರ ನಮ್ಮ ಮಹಿಳೆಯರಿಗೆ ಏನು ಬೇಕು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಂತರ ಕಾಲಕ್ಕೆ  ತಕ್ಕಂತೆ ಸೌಲಭ್ಯಗಳನ್ನು ಕಲ್ಪಿಸುತ್ತಾ ಸಾಗಬಹುದು.