ವಾರಾಣಸಿ ರಹಸ್ಯ ಬಹಿರಂಗ | ಮೋದಿ ವಿರುದ್ಧ ಕಣಕ್ಕೆ ಇಳಿಯದ್ದಕ್ಕೆ ಕಾರಣ ತಿಳಿಸಿದ ಪ್ರಿಯಾಂಕಾ | ನಾನಾಗಿಯೇ ಹಿಂದೆ ಸರಿಯಲಿಲ್ಲ, ಸ್ಪರ್ಧೆ ಮಾಡದಕ್ಕೆ ಕಾರಣವಿತ್ತು ಎಂದ ಪ್ರಿಯಾಂಕ ಗಾಂಧಿ  

ಅಮೇಠಿ (ಮೇ. 01): ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸದೇ ಇರುವ ಬಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಾವು ಪೂರ್ವ ಉತ್ತರ ಪ್ರದೇಶ ಉಸ್ತುವಾರಿಯಾಗಿ 41 ಕ್ಷೇತ್ರಗಳನ್ನು ನೋಡಿಕೊಳ್ಳುವ ಹೊಣೆಯನ್ನು ಹೊಂದಿದ್ದ ವೇಳೆ, ಕೇವಲ ಒಂದು ಕೇತ್ರದ ಮೇಲೆ ಗಮನಹರಿಸಲು ಸಾಧ್ಯವಿರಲಿಲ್ಲ. ಹೀಗಾಗಿಯೇ ವಾರಾಣಸಿಯಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೇಠಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪ್ರಿಯಾಂಕಾ, ‘ನಾನಾಗಿಯೇ ಸ್ಪರ್ಧೆಯಿಂದ ಹಿಂದೆ ಸರಿಯಲಿಲ್ಲ. ಪಕ್ಷದ ಹಿರಿಯ ನಾಯಕರು ಮತ್ತು ಉತ್ತರ ಪ್ರದೇಶದ ನನ್ನ ಸಹೋದ್ಯೋಗಿಗಳ ಸಲಹೆಯಂತೆ ನಡೆದುಕೊಂಡಿದ್ದೇನೆ. ನಿಮಗೆ 41 ಕ್ಷೇತ್ರಗಳ ಹೊಣೆಗಾರಿಕೆ ಇದೆ ಎಂದು ಅವರೆಲ್ಲಾ ತಿಳಿಸಿದ್ದರು.

ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಅಭ್ಯರ್ಥಿಗಳು ಕೇಳಿಕೊಳ್ಳುತ್ತಿದ್ದಾರೆ. ಒಂದು ವೇಳೆ ನಾನು ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾದರೆ ಅವರೆಲ್ಲಾ ನಿರಾಶರಾಗುತ್ತಿದ್ದರು’ ಎಂದು ಹೇಳಿದ್ದಾರೆ. ಇನ್ನೇನು ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧೆ ಮಾಡಿಯೇ ಬಿಟ್ಟರು ಎನ್ನುವ ಹಂತದಲ್ಲಿ ಅಜಯ್‌ ರಾಯ್‌ ಅವರ ಹೆಸರನ್ನು ಕಾಂಗ್ರೆಸ್‌ ಪ್ರಕಟಿಸಿತ್ತು.