ಮೈತ್ರಿಗೆ ಪ್ರಿಯಾಂಕಾ ಗಾಂಧಿ, ಡಿಂಪಲ್ ಯಾದವ್ ಮುನ್ನುಡಿ | ಮೈತ್ರಿಯಲ್ಲಿ ಕಾಂಗ್ರೆಸ್'ಗೆ 100 ಸ್ಥಾನ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್‌ ಬಣ ಹಾಗೂ ಕಾಂಗ್ರೆಸ್‌ ನಡುವೆ ಮೈತ್ರಿ ಏರ್ಪ​ಡುವ ಸಂಭ​ವ​ವಿದೆ. 403 ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ 100 ಸ್ಥಾನಗಳನ್ನು ಬಿಟ್ಟುಕೊಡುವ ಬಗ್ಗೆ ಒಮ್ಮತವೂ ಮೂಡಿದೆ. 

ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಮತ್ತು ಅಖಿಲೇಶ್‌ ಬಣದ ನಾಯಕರಾಗಿರುವ ರಾಮ್‌ಗೋಪಾಲ್‌ ಯಾದವ್‌ ಮಾತುಕತೆಯಲ್ಲಿ ಭಾಗ​ವಹಿಸಿ​ದ್ದರು. ಗಮನಾರ್ಹ ಅಂಶವೆಂದರೆ, ಈ ಮಾತು​ಕತೆ ಬಗ್ಗೆ ಮೊದಲು ಮಾತನಾಡಿದ್ದೇ ಅಖಿ​ಲೇಶ್‌ ಪತ್ನಿ ಹಾಗೂ ಸಂಸದೆ ಡಿಂಪಲ್‌ ಯಾದವ್‌. ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ ಪ್ರಿಯಾಂಕಾ ವಾದ್ರಾರನ್ನು ಭೇಟಿಯಾಗಿದ್ದ ಡಿಂಪಲ್‌ ಯಾದವ್‌ ಮೈತ್ರಿ ಪ್ರಸ್ತಾಪ ಮುಂದಿಟ್ಟಿದ್ದರು ಎಂದು ಹೇಳ​ಲಾಗಿದೆ. ಕಾಂಗ್ರೆಸ್‌ನಲ್ಲಿ ಪ್ರಿಯಾಂಕಾ ಯಾವುದೇ ಹುದ್ದೆ ಹೊಂದಿಲ್ಲದಿದ್ದರೂ ಅವರ ಮಾತುಗಳನ್ನು ಪಕ್ಷದ ನಾಯಕರು ಯಾರೂ ತಳ್ಳಿ ಹಾಕುವುದಿಲ್ಲ. ಹೀಗಾಗಿಯೇ ಮೈತ್ರಿ ಕುದು​ರಿದೆ ಎನ್ನ​ಲಾ​ಗಿದೆ. 

‘‘ಮಾತುಕತೆಗಳು ಪ್ರಗತಿಯಲ್ಲಿವೆ. ಪಕ್ಷದ ಚಿಹ್ನೆ ಬಗ್ಗೆ ಚುನಾವಣಾ ಆಯೋಗದಲ್ಲಿ ನಮ್ಮ ಪರ (ಅಖಿ​ಲೇಶ್‌ ಬಣ​) ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ವಾದ ಮಂಡಿಸಲು ಆಗಮಿಸಿದ್ದು ಕೂಡ ಅದಕ್ಕೆ ಸಾಕ್ಷಿ,'' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಾಯಕ​ರೊಬ್ಬರು ಹೇಳಿದ್ದಾರೆ. ಮೂಲಗಳ ಪ್ರಕಾರ ಮುಖ್ಯ​ಮಂತ್ರಿ ಅಖಿಲೇಶ್‌ ಯಾದವ್‌ ಕಾಂಗ್ರೆಸ್‌ಗೆ 100 ಸ್ಥಾನಗಳನ್ನು ನೀಡಿದ್ದೇ ಆದಲ್ಲಿ ಕಾಂಗ್ರೆಸ್‌ಗೆ ಅದರಿಂದ ಅನುಕೂಲವೇ ಹೆಚ್ಚು ಎಂದು ಹೇಳಲಾಗುತ್ತಿದೆ. 

ಮುಂಚೂಣಿಯಲ್ಲಿ ಡಿಂಪಲ್‌ ಯಾದವ್‌: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆ​ಲೆ​ಯಲ್ಲಿ ಸಿಎಂ ಅಖಿಲೇಶ್‌ ಪತ್ನಿ, ಸಂಸದೆ ಡಿಂಪಲ್‌ ಯಾದವ್‌ ರಾಜ್ಯ ರಾಜಕಾರಣದಲ್ಲಿ ಮುಂಚೂಣಿಗೆ ಬಂದಿದ್ದಾರೆ. ಕಾಂಗ್ರೆಸ್‌ ಜೊತೆ ಎಸ್ಪಿ ಮೈತ್ರಿ ಸಾಧಿಸುವುದರಲ್ಲಿ ಡಿಂಪಲ್‌ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದ ಹಿರಿಯರೇ ರಾಜಕೀಯ ಮುಂಚೂಣಿಯಲ್ಲಿ​ದ್ದುದ​ರಿಂದ, ಡಿಂಪಲ್‌ ಪಾತ್ರ ಪಕ್ಷದೊಳಗೆ ಎದ್ದುಕಾಣುತಿ​್ತ​ರಲಿಲ್ಲ. ಇದೀಗ ಯಾದವ ಕುಟುಂಬ ಕಲಹ ತಾರಕಕ್ಕೇರಿರುವ ನಡುವೆ, ಡಿಂಪಲ್‌ ಎರಡು ಪಕ್ಷಗಳ ನಡುವಿನ ಮೈತ್ರಿ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 

ಮೈತ್ರಿ ವಿಚಾರದಲ್ಲಿ ಎಸ್ಪಿಯಿಂದ ಡಿಂಪಲ್‌ ಮತ್ತು ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ನಡುವೆ ಒಂದು ಹಂತದ ಮಾತುಕತೆ ನಡೆದಿದೆ ಎಂದೂ ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದ್ದಾರೆ.

ರಾಹುಲ್ ವಿರುದ್ಧ ಬಿಜೆಪಿ ದೂರು:
ಕಾಂಗ್ರೆಸ್‌ನ ಚಿಹ್ನೆ ಹಸ್ತವನ್ನು ಧಾರ್ಮಿಕ ವಿಚಾರಗಳಿಗೆ ಹೋಲಿಕೆ ಮಾಡಿ ರಾಹುಲ್‌ ಗಾಂಧಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, ರಾಹುಲ್‌ ವಿರುದ್ಧ ಉತ್ತರ ಪ್ರದೇಶ ಮುಖ್ಯ ಚುನಾ​ವಣಾ​ಧಿಕಾರಿಗೆ ಶುಕ್ರವಾರ ದೂರು ನೀಡಿದ್ದು, ಕಾಂಗ್ರೆಸ್‌ನ ಚಿಹ್ನೆಯನ್ನು ಹಿಂಪಡೆದುಕೊಳ್ಳಬೇಕೆಂದು ಅದು ಒತ್ತಾಯಿಸಿದೆ. ಡಿ.11ರಂದು ‘ಜನವೇದನಾ' ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್‌ ‘‘ಕಾಂಗ್ರೆಸ್‌ನ ಚಿಹ್ನೆ ಹಸ್ತವು ಶಿವಾಜಿ, ಗುರುನಾನಕ್‌, ಬುದ್ಧ, ಮಹಾವೀರನ ಚಿತ್ರಗಳಲ್ಲಿವೆ,'' ಎಂದಿದ್ದರು.

ಪ್ರಿಯಾಂಕಾ-ಡಿಂಪಲ್ ಜುಗಲ್'ಬಂದಿ:
ಮತ್ತೊಂದು ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಮತ್ತು ಸಿಎಂ ಅಖಿಲೇಶ್‌ ಯಾದವ್‌ ಪತ್ನಿ ಸಂಸದೆ ಡಿಂಪಲ್‌ ಯಾದವ್‌'ರ ಫೋಟೋಗಳು ಒಂದೇ ಬ್ಯಾನರ್‌ನಲ್ಲಿ ಕಾಣಿಸಿಕೊಂಡಿವೆ. ಈ ಅಂಶ ಕೂಡ ಮೈತ್ರಿ ಮಾತುಗಳ ಬಗೆಗಿನ ವದಂತಿಗೆ ಪುಷ್ಟಿನೀಡಿವೆ. ಅಲಹಾಬಾದ್‌ ಜಿಲ್ಲಾ ಸಮಾಜವಾದಿ ಪಕ್ಷದ ಘಟಕದ ನಾಯಕ ಅನಿಲ್‌ ದ್ವಿವೇದಿ ಪ್ರಕಾರ ‘‘ಮೈತ್ರಿ ವಿಚಾರ ನಮಗೇನೂ ಗೊತ್ತಿಲ್ಲ. ಆದರೆ ಎರಡೂ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅನುಕೂಲ​ವಾಗ​ಲಿದೆ ಎನ್ನುವುದು ನಮ್ಮ ವಿಶ್ವಾಸ,'' ಎಂದಿದ್ದಾರೆ.

(epaper.kannadaprabha.in)