ವಾದ್ರಾ ಅವರ ಪುತ್ರನ ಬಲ ಅಥವಾ ಎಡಗಣ್ಣಿಗೆ ಗಾಯವಾಗಿತ್ತೇ ಎಂಬುದರ ಮಾಹಿತಿ ನೀಡಲು ಆಸ್ಪತ್ರೆ ನಿರಾಕರಿಸಿದೆ.

ಹೈದರಾಬಾದ್(ಫೆ.18): ಉತ್ತರಪ್ರದೇಶದ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಪತಿ ರಾಬರ್ಟ್ ವಾದ್ರಾ ಇಂದು ಹೈದರಾಬಾದ್‌'ಗೆ ಆಗಮಿಸಿ ಗಾಯಗೊಂಡಿದ್ದ ತಮ್ಮ ಪುತ್ರನ ಕಣ್ಣಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಕಳೆದ ವಾರ ಶಾಲೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಪ್ರಿಯಾಂಕಾ ವಾದ್ರಾ ಅವರ ಪುತ್ರ ರೈಹಾನ್(16) ಕಣ್ಣಿಗೆ ಗಾಯ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮೊದಲಿಗೆ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ರೈಹಾನ್‌'ರನ್ನು ಇಲ್ಲಿನ ಎಲ್.ವಿ.ಪ್ರಸಾದ್ ಕಣ್ಣಾಸ್ಪತ್ರೆಗೆ ಕರೆತರಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ವಕ್ತಾರ ಬಾಲಸುಬ್ರಹ್ಮಣಿಯಂ, ‘ಹೌದು, ಪ್ರಿಯಾಂಕಾ ವಾದ್ರಾ ಮತ್ತು ರಾಬರ್ಟ್ ವಾದ್ರಾ ನಮ್ಮ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಅವರ ಪುತ್ರನ ಕಣ್ಣಿನ ಪರಿಶೀಲನೆ ನಡೆಸಲಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ,’ ಎಂದು ಹೇಳಿದ್ದಾರೆ.

ಆದರೆ, ವಾದ್ರಾ ಅವರ ಪುತ್ರನ ಬಲ ಅಥವಾ ಎಡಗಣ್ಣಿಗೆ ಗಾಯವಾಗಿತ್ತೇ ಎಂಬುದರ ಮಾಹಿತಿ ನೀಡಲು ಆಸ್ಪತ್ರೆ ನಿರಾಕರಿಸಿದೆ. ಆಸ್ಪತ್ರೆಯ ಅಧ್ಯಕ್ಷ ಡಾ.ಗುಲ್ಲಪಲ್ಲಿ ಎನ್ ರಾವ್ ಗಾಂಧಿ ಕುಟುಂಬಕ್ಕೆ ತೀರಾ ಹತ್ತಿರದವರಾಗಿದ್ದಾರೆ. ನಗರಕ್ಕೆ ಪ್ರಿಯಾಂಕಾ ವಾದ್ರಾ ಭೇಟಿ ಹಿನ್ನೆಲೆಯಲ್ಲಿ ಆಸ್ಪತ್ರೆಯಿರುವ ಬಂಜಾರಾ ಹಿಲ್ಸ್‌ನಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.