ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಕೇವಲ ಮಾಹಿತಿ ನೀಡಿದರೆ ಸಾಲದು, ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ. ಲಕ್ಷಾಂತರ ಸ್ವಯಂಸೇವಕರು ಭಾಗವಹಿಸುವುದರಿಂದ ಭದ್ರತೆ ಮತ್ತು ಸಂಪನ್ಮೂಲಗಳ ನಿರ್ವಹಣೆಗೆ ಮುಂಚಿತವಾಗಿ ಅನುಮತಿ ಕಡ್ಡಾಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಅ.20): ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಾಂಪ್ರದಾಯಿಕ ಪಥ ಸಂಚಲನದ ಬಗ್ಗೆ ಗೃಹ ಇಲಾಖೆಗೆ ಕೇವಲ ‘ಮಾಹಿತಿ ನೀಡುವುದು’ ಅಥವಾ ‘ವ್ಯವಸ್ಥೆ ಮಾಡಿ’ ಎಂದು ಹೇಳುವುದು ಅಧಿಕೃತ ಅನುಮತಿ ಎನಿಸಿಕೊಳ್ಳುವುದಿಲ್ಲ. ಕಾನೂನಿನ ಪ್ರಕಾರ ಅರ್ಜಿ ಸಲ್ಲಿಸಿ, ಅಧಿಕೃತ ಅನುಮತಿ ಸಿಗುವವರೆಗೂ ಕಾಯಿರಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಈ ಮೂಲಕ ಆರ್‌ಎಸ್‌ಎಸ್ ಮತ್ತು ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಮತ್ತೆ ತಾರಕಕ್ಕೇರಿದೆ.

ಈ ಕುರಿತು ಸಾಮಾಜಿಕಜಾಲತಾಣದ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ದಸರಾ ಮತ್ತು ವಿಜಯದಶಮಿ ಪ್ರಯುಕ್ತ ರಾಜ್ಯಾದ್ಯಂತ ಆರ್‌ಎಸ್‌ಎಸ್ ನಡೆಸಲು ಉದ್ದೇಶಿಸಿರುವ ಸಾಂಪ್ರದಾಯಿಕ ಪಥ ಸಂಚಲನಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಗೆ ಕೇವಲ ‘ಮಾಹಿತಿ ನೀಡುವುದು’ ಅಥವಾ ‘ವ್ಯವಸ್ಥೆ ಮಾಡಿ’ ಎಂದು ಹೇಳುವುದು ಅಧಿಕೃತ ಅನುಮತಿ ಎನಿಸಿಕೊಳ್ಳುವುದಿಲ್ಲ. ಕಾನೂನಿನ ಪ್ರಕಾರ ಅರ್ಜಿ ಸಲ್ಲಿಸಿ, ಅಧಿಕೃತ ಅನುಮತಿ ಸಿಗುವವರೆಗೂ ಕಾಯಿರಿ' ಸೂಚನೆ ನೀಡಿದ್ದಾರೆ.

'ನನ್ನ ಪ್ರೀತಿಯ ಸ್ವಯಂಸೇವಕರೇ...' ಎಂದು ವ್ಯಂಗ್ಯವಾಡಿದ ಸಚಿವರು:

ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, 'ಆರ್‌ಎಸ್‌ಎಸ್‌ನ ನನ್ನ ಅತ್ಯಂತ ಪ್ರೀತಿಯ ಸ್ವಯಂಸೇವಕರೇ, ನಿಮ್ಮ ದಸರಾ ಹಬ್ಬದ ಸಂಭ್ರಮಾಚರಣೆಗೆ ಅಡ್ಡಿಪಡಿಸುವ ಉದ್ದೇಶ ನನಗಿಲ್ಲ. ಆದರೆ ಒಂದು ಸಣ್ಣ ಕಾನೂನಾತ್ಮಕ ವಿಷಯವನ್ನು ನೆನಪಿಸಲು ಬಯಸುತ್ತೇನೆ. ಪೊಲೀಸ್ ಇಲಾಖೆಗೆ ಕೇವಲ 'ಸಹಕರಿಸಿ', 'ಅಗತ್ಯ ವ್ಯವಸ್ಥೆಗಳನ್ನು ಮಾಡಿ' ಎಂದು ಸೂಚಿಸುವುದು ಅಧಿಕೃತ ಅನುಮತಿ ಪಡೆದಂತಾಗುವುದಿಲ್ಲ. ಉಳಿದೆಲ್ಲ ಸಂಘಟನೆಗಳಂತೆ ನೀವೂ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರಗಳಿಂದ ಅಧಿಕೃತ ಅನುಮತಿ ಬರುವವರೆಗೂ ಕಾಯಬೇಕು' ಎಂದಿದ್ದಾರೆ.

ಆರ್‌ಎಸ್‌ಎಸ್‌ನ ವಾರ್ಷಿಕ ವರದಿಯ ಅಂಕಿಅಂಶ ಮುಂದಿಟ್ಟ ಖರ್ಗೆ!

ಆರ್‌ಎಸ್‌ಎಸ್‌ನದ್ದೇ ಅಧಿಕೃತ ದಾಖಲೆಯನ್ನು ಪ್ರಸ್ತಾಪಿಸಿ ಆಡಳಿತಾತ್ಮಕ ಸವಾಲುಗಳನ್ನು ಬಿಚ್ಚಿಟ್ಟರು. 'ನಿಮ್ಮದೇ ಸಂಘಟನೆಯಾದ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ವಾರ್ಷಿಕ ವರದಿಯ ಪ್ರಕಾರ, ಕರ್ನಾಟಕದಾದ್ಯಂತ ಒಟ್ಟು 562 ಪಥಸಂಚಲನಗಳು ನಡೆದಿದ್ದು, 2,21,963 ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಿದ್ದಾರೆ. ಲಕ್ಷಾಂತರ ಸ್ವಯಂಸೇವಕರು ರಾಜ್ಯದ ಪ್ರಮುಖ ರಸ್ತೆಗಳಲ್ಲಿ ಒಂದೇ ದಿನ, ಒಂದೇ ಸಮಯದಲ್ಲಿ ಪಥಸಂಚಲನ ನಡೆಸುವಾಗ ಪೊಲೀಸ್ ಇಲಾಖೆಯು ಬೃಹತ್ ಭದ್ರತಾ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಸಿಬ್ಬಂದಿ ನಿಯೋಜನೆ, ಟ್ರಾಫಿಕ್ ಕಂಟ್ರೋಲ್, ಸಾರಿಗೆ, ಆಹಾರ ಮತ್ತು ಭದ್ರತೆಗೆ ಅಪಾರ ಪ್ರಮಾಣದ ಮಾನವ ಸಂಪನ್ಮೂಲ ಹಾಗೂ ಸಾರ್ವಜನಿಕರ ತೆರಿಗೆ ಹಣ (ಸಂಪನ್ಮೂಲ) ಬಳಕೆಯಾಗುತ್ತದೆ. ಹೀಗಿರುವಾಗ ಮುನ್ಸೂಚನೆ ಇಲ್ಲದೆ ಏಕಾಏಕಿ ರಸ್ತೆಗಿಳಿಯಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.

ನಿಯಮ ಪಾಲಿಸಿ, ದಸರಾ ಹಬ್ಬದ ಶುಭಾಶಯಗಳು:

'ಆದ್ದರಿಂದ, ದಯವಿಟ್ಟು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯವಿರುವ ಸಂಪೂರ್ಣ ವಿವರಗಳನ್ನು ಒದಗಿಸಿ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಅಧಿಕೃತ ಅನುಮತಿ ಸಿಗುವವರೆಗೆ ಕಾಯಿರಿ. ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು' ಎಂದು ಹೇಳುವ ಮೂಲಕ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ಗೆ ಪರೋಕ್ಷವಾಗಿ ನಿಯಮಗಳ ಪಾಠ ಕಲಿಸಿದ್ದಾರೆ. ದಸರಾ ಸಂದರ್ಭದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನದ ಅನುಮತಿ ವಿಚಾರವಾಗಿ ಸಚಿವರು ನೀಡಿರುವ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಇದೀಗ ಭಾರೀ ಸಂಚಲನಕ್ಕೆ ಕಾರಣವಾಗಿದೆ.