ಬೆಂಗಳೂರು (ಜೂ. 04): ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಮನೆಗೆಲಸ (ಹೋಂವರ್ಕ್) ನೀಡಬಾರದು ಹಾಗೂ ವಿದ್ಯಾರ್ಥಿಗಳ ಬ್ಯಾಗ್‌ ತೂಕ ವಿದ್ಯಾರ್ಥಿಗಳ ತೂಕದ ಶೇ.10 ರಷ್ಟುಮೀರಬಾರದು ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ.

ಮಕ್ಕಳಿಗೆ ಹೋಂವರ್ಕ್ ನೀಡಬಾರದು ಎಂಬ ಸರ್ಕಾರದ ಕ್ರಮವೇ ಅವೈಜ್ಞಾನಿಕವಾಗಿದೆ. ಶಾಲೆಯಲ್ಲಿ ಹೇಳಿಕೊಟ್ಟಪಾಠವನ್ನು ಮನೆಯಲ್ಲಿ ಮತ್ತೊಮ್ಮೆ ಮೆಲುಕು ಹಾಕುವುದರಿಂದ ಮಕ್ಕಳಿಗೆ ಜ್ಞಾಪಕವಿರುತ್ತದೆ. ಹೋಂವರ್ಕ್ ನೀಡದಿರುವ ಕ್ರಮವನ್ನು ಪೋಷಕರೇ ಒಪ್ಪುವುದಿಲ್ಲ ಎಂದು ಖಾಸಗಿ ಶಾಲೆಗಳು ಹೇಳುತ್ತಿವೆ.

ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಡಿಎಸ್‌ಇಆರ್‌ಟಿ) ನಡೆಸಿದ ಅಧ್ಯಯನವು ಒಂದು ಮತ್ತು ಎರಡನೇ ತರಗತಿಯ ಮಕ್ಕಳು ಆಟವಾಡುತ್ತಾ ಪಾಠ ಕಲಿಯಬೇಕು, ಬಾಲ್ಯದಲ್ಲಿಯೇ ಪಾಠದ ಹೊರೆ ಬೀಳಬಾರದು ಎಂದು ಹೇಳುತ್ತದೆ. ಆದರೆ, ಈ ಸಂಶೋಧನೆಯನ್ನು ಒಪ್ಪಲು ಸಾಧ್ಯವಿಲ್ಲ ಎನ್ನುತ್ತಿವೆ ಖಾಸಗಿ ಶಾಲೆಗಳು.

ಈ ಕುರಿತು ಮಾತನಾಡಿದ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌, ಶಾಲೆಗೆ ಬರುವ ಮಕ್ಕಳಿಗೆ ಮನೆಗೆಲಸ ನೀಡಬೇಡಿ ಎನ್ನುವುದು ಅರ್ಥಹೀನವಾಗಿದೆ. ಮಕ್ಕಳು ಮನೆಯಲ್ಲಿ ಒಮ್ಮೆ ಶಾಲೆಯಲ್ಲಿನ ಪಾಠಗಳನ್ನು ಮನನ ಮಾಡಿದರೆ ಜ್ಞಾಪಕದಲ್ಲಿರುತ್ತದೆ. ಆದರೆ, ಸರ್ಕಾರ ಯಾವ ಮಾನದಂಡದ ಆಧಾರದಲ್ಲಿ ಮನೆಗೆಲಸ ನೀಡಬೇಡಿ ಎಂದು ಹೇಳುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಪೋಷಕರ ಸರ್ವೆ ನಡೆಸಿ ನಿರ್ಧಾರ:

ಸರ್ಕಾರ ನಿಯಮಗಳನ್ನು ರೂಪಿಸಿದ್ದರೂ ಕೂಡ ವಾಸ್ತವವಾಗಿ ಪೋಷಕರು ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂಬುದನ್ನು ತಿಳಿಯುವುದಕ್ಕಾಗಿ ಖಾಸಗಿ ಶಾಲೆಗಳ ವತಿಯಿಂದ ಸರ್ವೆ ಮಾಡಲಾಗುತ್ತದೆ. ಹೆಚ್ಚಿನ ಪೋಷಕರು ವ್ಯಕ್ತಪಡಿಸುವ ಅಭಿಪ್ರಾಯದ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತದೆ.

ಹೋಂವರ್ಕ್ ನೀಡುವುದನ್ನು ಸರಿಯಲ್ಲ ಎಂದು ಯಾವೊಬ್ಬ ಪೋಷಕರೂ ಹೇಳುತ್ತಿಲ್ಲ. ಹೋಂವರ್ಕ್ ಕೊಡಿ ಎಂತಲೇ ಎಲ್ಲರೂ ಹೇಳುತ್ತಿರುವುದರಿಂದ ಸರ್ಕಾರದ ನಿಯಮ ಅನುಷ್ಠಾನ ಕಷ್ಟಸಾಧ್ಯ. ಅಲ್ಲದೆ, ಹೋಂವರ್ಕ್ ನೀಡುವ ಶಾಲೆಗಳ ಮಾನ್ಯತೆ ರದ್ದುಪಡಿಸುವ ಎಚ್ಚರಿಕೆ ನೀಡಿರುವ ಸರ್ಕಾರದ ವಿರುದ್ಧ ಹೋರಾಟಕ್ಕೂ ಸಿದ್ಧವಿದ್ದೇವೆ ಎಂದು ತಿಳಿಸಿದರು.

ಬ್ಯಾಗ್‌ ತೂಕ ಇಳಿಯೋದು ಡೌಟು

ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ 1.5ರಿಂದ 2 ಕಿ.ಗ್ರಾಂ., ಮೂರರಿಂದ ಐದನೇ ತರಗತಿ 2ರಿಂದ3 ಕಿ.ಗ್ರಾಂ., ಆರರಿಂದ ಎಂಟನೇ ತರಗತಿ 3ರಿಂದ 4 ಕಿ.ಗ್ರಾಂ., 9ರಿಂದ 10ನೇ ತರಗತಿಗೆ ನಾಲ್ಕರಿಂದ ಐದು ಕಿ.ಗ್ರಾಂ. ಇರಬೇಕು. ಬ್ಯಾಗ್‌ ತೂಕವು ವಿದ್ಯಾರ್ಥಿಗಳ ದೇಹ ತೂಕಕ್ಕಿಂತ ಸರಾಸರಿ ಶೇ.10ರಷ್ಟುಎಂಬ ಸರ್ಕಾರದ ನಿಯಮ ಅನುಷ್ಠಾನ ಮಾಡುವುದಕ್ಕೂ ಖಾಸಗಿ ಶಾಲೆಗಳು ಹಿಂದೇಟು ಹಾಕುತ್ತಿವೆ.

ಶಾಲೆಯ ಖಾಲಿ ಬ್ಯಾಗ್‌ ತೂಕವೇ ಅರ್ಧ ಕೆ.ಜಿ.ಗಿಂತ ಹೆಚ್ಚಾಗಿರುತ್ತದೆ. ಒಂದೆರಡು ಪುಸ್ತಕಗಳನ್ನು ನೀಡಿದರೆ ಒಂದು ಕೆ.ಜಿ.ಯಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವು ಯಾವ ಲೆಕ್ಕದಲ್ಲಿ ಪುಸ್ತಕಗಳು ಹಾಗೂ ಪಠ್ಯಪುಸ್ತಕಗಳನ್ನು ನೀಡಬೇಕು? ಕೆಲವರ ಪ್ರತಿಷ್ಠೆಗಾಗಿ ಹಾಗೂ ತೂಕದ ಆಧಾರದಲ್ಲಿ ಪುಸ್ತಕ ನೀಡಲು ಹೋದರೆ, ಯಾವುದೇ ತರಗತಿಯ ಮಕ್ಕಳಿಗೂ ಹೋಂವರ್ಕ್ ನೀಡಲು ಸಾಧ್ಯವಾಗುವುದಿಲ್ಲ. ಶೇ.10ರಷ್ಟುತೂಕದ ಮಾನದಂಡ ಅನುಷ್ಠಾನ ಸಾಧ್ಯವೇ ಇಲ್ಲ. ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ವಿದ್ಯಾರ್ಥಿಯ ತೂಕದ ಕನಿಷ್ಠ ಶೇ.15ರಿಂದ 20ರಷ್ಟುಬ್ಯಾಗ್‌ ತೂಕ ಇರಬೇಕು. ಈ ಮಾನದಂಡವೇ ಸೂಕ್ತವಾಗಿದೆ ಎಂದು ಶಶಿಕುಮಾರ್‌ ಹೇಳುತ್ತಾರೆ.