ಬೆಂಗಳೂರು (ಜೂ. 05): ಕೆಲವರ ಪ್ರತಿಷ್ಠೆಗಾಗಿ ರಾಜ್ಯ ಸರ್ಕಾರವು ಶಾಲಾ ಬ್ಯಾಗ್‌ ತೂಕ ನಿಗದಿ ಮತ್ತು ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಮನೆಗೆಲಸ (ಹೋಮ್‌ ವರ್ಕ್) ನೀಡಬಾರದೆಂಬ ಆದೇಶ ಹೊರಡಿಸಿದೆ ಎಂದು ಖಾಸಗಿ ಶಾಲೆಗಳು ಆರೋಪಿಸಿವೆ.

ಕ್ಯಾಮ್ಸ್‌, ಮಿಕ್ಸಾ ಮತ್ತು ಮ್ಯಾಸ್‌ ಸೇರಿದಂತೆ ಖಾಸಗಿ ಶಾಲೆಗಳ ಒಕ್ಕೂಟ  ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌, ಶಾಲಾ ಬ್ಯಾಗ್‌ ತೂಕ ನಿಗದಿ ಮಾಡುವ ವೇಳೆ ಮತ್ತು ಈ ಕುರಿತ ಸಮೀಕ್ಷೆಯಲ್ಲಿ ಖಾಸಗಿ ಶಾಲೆಗಳು ನೀಡಿರುವ ಯಾವುದೊಂದು ಸಲಹೆಗಳನ್ನೂ ಸ್ವೀಕರಿಸಿಲ್ಲ. ಅಲ್ಲದೆ, ಯಾವ ಮಾನದಂಡಗಳ ಆಧಾರದಲ್ಲಿ ತೂಕ ನಿಗದಿ ಮಾಡಲಾಗಿದೆ ಎಂಬುದನ್ನು ಸಹ ನಿಖರವಾಗಿ ಹೇಳದೆ ಕೆಲವರ ಪ್ರತಿಷ್ಠೆಗಾಗಿ ಅವೈಜ್ಞಾನಿಕವಾಗಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಒಂದು ಮತ್ತು ಎರಡನೇ ತರಗತಿಗೆ ಬ್ಯಾಗ್‌ 1.5 ಕೆ.ಜಿ. ಇರಬೇಕು ಎಂದು ಸರ್ಕಾರದ ನಿಯಮ ಹೇಳುತ್ತದೆ. ಆದರೆ, ಎರಡು ಪುಸ್ತಕ, ಜಾಮಿಟ್ರಿ ಬಾಕ್ಸ್‌ ಸೇರಿದರೆ ಶಾಲಾ ಬ್ಯಾಗ್‌ ಸೇರಿದಂತೆ ಕನಿಷ್ಠ ಎರಡೂವರೆ ಕೆ.ಜಿ. ತೂಕ ಬರುತ್ತದೆ. ಆದ್ದರಿಂದ ಸರ್ಕಾರ ವೈಜ್ಞಾನಿಕವಾಗಿ ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನು ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೋಮ್‌ವರ್ಕ್ ನೀಡದಿದ್ದರೆ ಮಕ್ಕಳ ಕಲಿಕೆ ಮೇಲೆ ಪರಿಣಾಮ ಉಂಟಾಗಲಿದೆ. ಮುಂದಿನ ತರಗತಿಗಳಲ್ಲಿ ಕಲಿಕೆಗೆ ಕುಂಠಿತವಾಗುವ ಸಾಧ್ಯತೆಗಳಿದೆ. ಆದ್ದರಿಂದ ಹೋಮ್‌ ವರ್ಕ್ ಕೂಡ ನೀಡಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.

ಶೇ.30 ರಷ್ಟುಪಠ್ಯಪುಸ್ತಕ ತಲುಪಿಲ್ಲ:

ಶಾಲೆಗಳು ಆರಂಭವಾಗಿ ಒಂದು ವಾರ ಕಳೆದಿದೆ. ಆದರೂ ಖಾಸಗಿ ಶಾಲೆಗಳಿಗೆ ಶೇ.30ರಷ್ಟುಪಠ್ಯಪುಸ್ತಕ ತಲುಪಿಲ್ಲ. ಅಲ್ಲದೆ, ಆರ್‌ಟಿಇ ಮಕ್ಕಳಿಗೆ ತಡವಾಗಿ ಪುಸ್ತಕಗಳನ್ನು ನೀಡುವುದಾಗಿ ತಿಳಿಸುತ್ತಾರೆ. ಆರ್‌ಟಿಇ ಮಕ್ಕಳು ಎಂಬ ತಾರತಮ್ಯವನ್ನು ಏಕೆ ಅನುಸರಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.

ಪ್ರತಿ ವರ್ಷ ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ತಡವಾಗಿಯೇ ಪುಸ್ತಕಗಳನ್ನು ನೀಡಲಾಗುತ್ತದೆ. ಆದ್ದರಿಂದ ಪುಸ್ತಕ ಖರೀದಿಯನ್ನು ಆನ್‌ಲೈನ್‌ ಮೂಲಕ ಖಾಸಗಿಯಾಗಿ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.

ಆರ್‌ಟಿಇ ಮರುಪಾವತಿ ಮಾಡಿ:

ಖಾಸಗಿ ಶಾಲೆಗಳಿಗೆ ಶೇ.25ರಷ್ಟುಮಕ್ಕಳ ಪ್ರವೇಶಕ್ಕಾಗಿ ರಾಜ್ಯ ಸರ್ಕಾರವು ಕನಿಷ್ಠ ಸಾವಿರ ಕೋಟಿಗೂ ಅಧಿಕ ಆರ್‌ಟಿಇ ಹಣ ಮರು ಪಾವತಿಯಾಗಬೇಕಿದೆ. ಸರ್ಕಾರವು ಮರು ಪಾವತಿ ಬಾಕಿ ಉಳಿಸಿಕೊಂಡಿರುವುದರಿಂದ ಶಾಲೆಗಳ ನಿರ್ವಹಣೆ ಕಷ್ಟವಾಗುತ್ತಿದೆ.

ಒಂದು ತಿಂಗಳೊಳಗೆ ಸಂಪೂರ್ಣ ಹಣವನ್ನು ಮರುಪಾವತಿ ಮಾಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಸರ್ಕಾರ ಮರು ಪಾವತಿ ಮಾಡದಿದ್ದರೆ, ವಿದ್ಯಾರ್ಥಿಗಳ ಪೋಷಕರಿಂದ ನೇರವಾಗಿ ಶುಲ್ಕ ಪಡೆಯುತ್ತೇವೆ. ಸರ್ಕಾರ ತಮಗೆ ಅನುಕೂಲವಾದ ಸಮಯದಲ್ಲಿ ಪೋಷಕರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಲಿ. ಇಲ್ಲವೇ, ಶಾಲಾ ಸಿಬ್ಬಂದಿಗಳ ಪಿಎಫ್‌, ಇಎಸ್‌ಐನಂತಹ ಯೋಜನೆಗಳನ್ನು ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.