ರಾಜ್ಯದಲ್ಲಿ ಕೇಂದ್ರೀಯ ಪಠ್ಯಕ್ರಮ ಬೋಧಿಸುವ ಸಿಬಿಎಸ್‌'ಇ ಮತ್ತು ಐಸಿಎಸ್‌'ಇ ಸೇರಿದಂತೆ ರಾಜ್ಯದ ಪ್ರತಿ ಶಾಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೂ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಸಡ್ಡು ಹೊಡೆದಿದ್ದು, ಕಾನೂನು ಸಂಘರ್ಷ ನಡೆಸಲು ಅಣಿಯಾಗಿವೆ.

ಬೆಂಗಳೂರು(ಅ.24): ರಾಜ್ಯದಲ್ಲಿ ಕೇಂದ್ರೀಯ ಪಠ್ಯಕ್ರಮ ಬೋಧಿಸುವ ಸಿಬಿಎಸ್‌'ಇ ಮತ್ತು ಐಸಿಎಸ್‌'ಇ ಸೇರಿದಂತೆ ರಾಜ್ಯದ ಪ್ರತಿ ಶಾಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೂ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಸಡ್ಡು ಹೊಡೆದಿದ್ದು, ಕಾನೂನು ಸಂಘರ್ಷ ನಡೆಸಲು ಅಣಿಯಾಗಿವೆ.

ಕಲಿಕಾ ಮಾಧ್ಯಮ ಆಯ್ಕೆ ಪೋಷಕರ ವಿವೇಚನೆಗೆ ಬಿಟ್ಟ ವಿಚಾರ ಎಂಬ ಸುಪ್ರೀಂಕೋರ್ಟ್ ಆದೇಶವನ್ನೇ ಮುಂದಿಟ್ಟುಕೊಂಡು ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು ಎಂಬ ಸರ್ಕಾರದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ತೀರ್ಮಾನಿಸಿವೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಕಾರ ಸರ್ಕಾರದ ಈ ಆದೇಶದಿಂದ ಗೊಂದಲ ನಿರ್ಮಾಣವಾಗಿದೆ. ಕಲಿಕಾ ಮಾಧ್ಯಮ ಪೋಷಕರ ವಿವೇಚನೆ ಎಂಬ ಸುಪ್ರೀಂಕೋರ್ಟ್‌ನ ಆದೇಶದಂತೆ ನಡೆದುಕೊಳ್ಳಬೇಕೋ, ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ ಸೂಚನೆಯಂತೆ ಹಿಂದಿಗೆ ಪ್ರಾಧಾನ್ಯತೆ ನೀಡಬೇಕೋ ಅಥವಾ ರಾಜ್ಯ ಸರ್ಕಾರದ ಸೂಚನೆಯಂತೆ ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕೋ ಎಂಬುದೇ ಈ ಗೊಂದಲ. ಈ ಗೊಂದಲ ನಿವಾರಿಸಿಕೊಳ್ಳುವ ನೆಪದಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸುವ ಮೂಲಕ ಈ ಸಂಘಟನೆಗಳು ಸರ್ಕಾರಕ್ಕೆ ಸಡ್ಡು ಹೊಡೆಯಲು ತಯಾರಾಗಿವೆ.

ಖಾಸಗಿ ಶಾಲೆಗಳ ವಾದವೇನು?:

ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪ್ರಕಾರ ಹಿಂದಿಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು.

ಇನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷನ್ನು ಸಹ ಪ್ರಥಮ ಅಥವಾ ದ್ವಿತೀಯ ಮಾಧ್ಯಮವಾಗಿ ಕಲಿಸಬೇಕಿದೆ. ಇದರ ನಡುವೆಯೇ ರಾಜ್ಯ ಸರ್ಕಾರ ಕೂಡ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಮಾಧ್ಯಮವಾಗಿ ಕಲಿಸಬೇಕು ಎಂಬ ಆದೇಶ ಹೊರಡಿಸಿದೆ. ಇದರಲ್ಲಿ ಯಾವ ಆದೇಶವನ್ನು ಪಾಲಿಸಬೇಕು ಎಂಬುದರಲ್ಲಿ ಖಾಸಗಿ ಶಾಲೆಗಳು ದ್ವಂದ್ವಕ್ಕೆ ಸಿಲುಕಿವೆ ಎನ್ನುತ್ತಾರೆ ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್. ಕನ್ನಡ, ಇಂಗ್ಲಿಷ್, ಹಿಂದಿಯಷ್ಟೇ ಅಲ್ಲದೆ, ರಾಜ್ಯದಲ್ಲಿ ತಮಿಳು, ತೆಲುಗು, ಮರಾಠಿ, ಉರ್ದು ಸೇರಿದಂತೆ ವಿವಿಧ ಭಾಷೆಗಳನ್ನು ಕಲಿಯುವ ವಿದ್ಯಾರ್ಥಿಗಳಿದ್ದಾರೆ.

ಇಂತಹ ಶಾಲೆಗಳಲ್ಲಿ ನಾವು ಯಾವ ರೀತಿಯಲ್ಲಿ ಕನ್ನಡ ಭಾಷೆಯನ್ನು ಕಲಿಸಬೇಕು ಎಂಬುದು ತಿಳಿಯದಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮಾಧ್ಯಮವಾಗಿ ಎರಡು ಭಾಷೆಗಳನ್ನು ಮಾತ್ರ ಕಲಿಸಬೇಕು. ತೃತೀಯ ಭಾಷೆಯನ್ನು ಕೈಬಿಡಬೇಕು ಎಂಬ ಚಿಂತನೆ ನಡೆಯುತ್ತಿದೆ. ಒಂದು ವೇಳೆ ತೃತೀಯ ಭಾಷೆ ಕೈಬಿಡಬೇಕು ಎಂಬ ಆದೇಶ ಹೊರಬಿದ್ದರೆ, ಸಿಬಿಎಸ್‌'ಇ ಆದೇಶದ ಪ್ರಕಾರ ಹಿಂದಿ ಮತ್ತು ಇಂಗ್ಲಿಷ್ ಅಷ್ಟೇ ಕಲಿಸಲು ಸಾಧ್ಯವಾಗುತ್ತದೆ. ಕನ್ನಡ ಕಲಿಕೆ ಕಷ್ಟವಾಗುತ್ತದೆ.

ಆಗ ಸರ್ಕಾರದ ಆದೇಶವನ್ನು ಹೇಗೆ ಪಾಲಿಸಬೇಕು ಎಂದು ಅವರು ಪ್ರಶ್ನಿಸುತ್ತಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸರ್ಕಾರದ ಈ ಆದೇಶ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನ, ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ ಸೂಚನೆ ಇವುಗಳ ಪೈಕಿ ನಾವು ಯಾವುದನ್ನು ಪಾಲಿಸಬೇಕು ಎಂಬುದನ್ನು ಅವರು ಕೋರ್ಟ್‌ನಲ್ಲಿ ಪ್ರಶ್ನಿಸಲು ನಿ‘ರ್ರಿಸಿದ್ದಾರೆ.

ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?:

ರಾಜ್ಯದಲ್ಲಿ ಕನ್ನಡದ ಸಮಗ್ರ ಅನುಷ್ಠಾನದಲ್ಲಿ ಶಿಕ್ಷಣ ಇಲಾಖೆ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡ ‘ಾಷಾ ಕಲಿಕಾ ಅಧಿನಿಯಮ-2015ರ ಪ್ರಕಾರ 1ರಿಂದ 10ನೇ ತರಗತಿವರೆಗೆ ಹಂತ ಹಂತವಾಗಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯ ವಾಗಿ ಬೋಧಿಸಬೇಕು ಎಂದು ಅ.11ರಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

2017-18ನೇ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕೇಂದ್ರೀಯ ಪಠ್ಯಕ್ರಮ ಶಾಲೆಗಳಾದ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿಯೂ ಕಡ್ಡಾಯವಾಗಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೇಕು. ಹೀಗಾಗಿ ಖಾಸಗಿ ಶಾಲೆಗಳಲ್ಲಿ ಕನ್ನಡ ಬೋಧಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಮೇ ೧೦ರಂದು ಪ್ರಾಧಿಕಾರಗಳನ್ನು ನೇಮಕ ಮಾಡಲಾಗಿದೆ. ಕನ್ನಡ ಬೋಧಿಸದ ಶಾಲೆಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

ರಾಜ್ಯದಲ್ಲಿ ಕನ್ನಡ ಅನುಷ್ಠಾನ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರಡಿ 2016ರ ಜೂನ್ 7ರಂದು ಕನ್ನಡ ಭಾಷಾ ಕಲಿಕಾ ನಿಯಮ-2017 ಕರಡು ಪ್ರಕಟಿಸಿದೆ. ಈ ಕರಡಿನಲ್ಲಿ ಕನ್ನಡ ಬೋಧನೆ ಕುರಿತು ತಿಳಿಸಿದೆ. ಅದರನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.