ನವದೆಹಲಿ[ಮಾ.02]: ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕ್ ನಿಂದ ಮರಳಿ ಭಾರತಕ್ಕೆ ಬಂದಿದ್ದಾರೆ. ದೇಶದಾದ್ಯಂತ ಸಂಭ್ರಮ ಮನೆ ಮಾಡಿದ್ದು, ಭಾರತೀಯರೆಲ್ಲಾ ಅವರ ಸಾಹಸಗಾಥೆಯನ್ನು ಹಾಡಿ ಹೊಗಳುತ್ತಿದ್ದಾರೆ. ಹೀಗಿರುವಾಗಲೇ ಶನಿವಾರದಂದು ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಈ ಹಿಂದೆ ಅಭಿನಂದನ್ ಅಂದರೆ ಸ್ವಾಗತ ಎಂಬ ಅರ್ಥವಿತ್ತು. ಆದರೀಗ ಈ ಅರ್ಥವೇ ಬದಲಾಗಲಿದೆ. 

ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನರೇಂದ್ರ ಮೋದಿ 'ಹಿಂದೂಸ್ಥಾನ ಏನೇ ಮಾಡಿದ್ರು, ಜಗತ್ತು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಕಳೆದ ದಿನಗಳಲ್ಲಿ ಏನೇನು ಆಗಿದೆಯೋ ಅದರಿಂದ ಸಂಸ್ಕೃತ ಪದ 'ಅಭಿನಂದನ್' ಶಬ್ಧದ ಅರ್ಥವೇ ಬದಲಾಗಿದೆ. ಭಾರತಕ್ಕೆ ಶಬ್ಧಕೋಶದಲ್ಲಿರುವ ಪದಗಳ ಅರ್ಥವನ್ನೇ ಬದಲಾಯಿಸುವ ತಾಕತ್ತಿದೆ. ಈ ಹಿಂದೆ ಅಭಿನಂದನ್ ಅಂದರೆ ಸ್ವಾಗತ ಎಂಬ ಅರ್ಥವಿತ್ತು. ಆದರೆ ಈಗ ಅದು ಬದಲಾಗಿದೆ' ಎಂದಿದ್ದಾರೆ.

ಶುಕ್ರವಾರದಂದು ಪಾಕಿಸ್ತಾನವು ತಾನು ಬಂಧಿಸಿದ್ದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ರನ್ನು ವಾಘಾ ಬಾರ್ಡರ್ ನಲ್ಲಿ ಭಾರತಕ್ಕೆ ಹಸ್ತಾಂತರಿಸಿದ್ದರು. ಈ ಸಂದರ್ಭದಲ್ಲಿ ವಾಯುಸೇನೆಯ ಉನ್ನತ ಅಧಿಕಾರಿಗಳು ಸೇರಿದಂತೆ ಅವರ ತಂದೆ ತಾಯಿ ವಾಘಾ ಬಾರ್ಡರ್ ನಲ್ಲಿ ಉಪಸ್ಥಿತರಿದ್ದರು. ಈ ವೇಳೆ ಗಡಿ ಭಾಗದಲ್ಲಿ ನೆರೆದಿದ್ದ ಭಾರತೀಯರು ಡೋಲು ಬಾರಿಸಿ, ತ್ರಿವರ್ಣ ಧ್ವಜ ಹಾರಿಸಿ ದೇಶದ ವೀರ ಯೋಧನನ್ನು ಸ್ವಾಗತಿಸಿದ್ದರು. ಈ ಸಂದರ್ಭದಲ್ಲಿ ಭಾರತ್ ಮಾತಾ ಕೀ ಜೈ ಎಂಬ ಕೂಗು ಕೂಡಾ ಮೊಳಗಿತ್ತು.