ಬೆಂಗಳೂರು[ಅ.11]: ಸಮ್ಮಿಶ್ರ ಸರ್ಕಾರದ  ಮೊದಲ ವಿಕೇಟ್ ಪತನವಾಗಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ಪತ್ರವನ್ನು ಸಿಎಂ ಹಾಗೂ ರಾಜ್ಯಪಾಲರಿಗೆ ರವಾನಿಸಿದ್ದಾರೆ. ಕೆಲವು ದಿನಗಳಿಂದ ಮತ್ತೊರ್ವ ಸಚಿವರಾದ ಪುಟ್ಟರಂಗಶೆಟ್ಟಿ ಅವರು ಮಹೇಶ್ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಇದು ಕೂಡ ರಾಜೀನಾಮೆಗೆ ಕಾರಣವಾಗಿರಬಹುದಾ ಎನ್ನುತ್ತಿವೆ ಮೂಲಗಳು.

ಬಿಎಸ್ ಪಿ ಪಕ್ಷದಿಂದ ಕೊಳ್ಳೆಗಾಲ ಕ್ಷೇತ್ರದಿಂದ ಆಯ್ಕೆಯಾಗಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದರು. ಬಿಎಸ್ ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಅವರ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆಗೆ ತಯಾರಿ ನಡೆಸುವ ಸಲುವಾಗಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ತಮ್ಮ ಪಕ್ಷ ಮುಂದಿನ ದಿನಗಳಲ್ಲಿ  ಜೆಡಿಎಸ್'ಗೆ ಬೆಂಬಲಿಸಿದೆ ಎಂದು ವಿವರಿಸಿದ್ದಾರೆ.

ಪಕ್ಷಕ್ಕಾಗಿ ರಾಜೀನಾಮೆ

ಸಚಿವನಾಗಿ ಮುಂದುವರಿದರೆ ಪಕ್ಷದ ಚಟುವಟಿಗೆ ನಡೆಸಲು ಅಸಾಧ್ಯ. 4 ತಿಂಗಳಿಂದ ಪಕ್ಷದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಖಾತೆಯನ್ನು ಅರ್ಥ ಮಾಡಿಕೊಳ್ಳಲು ನನಗೆ 4 ತಿಂಗಳುಗಳು ಬೇಕಾಯಿತು. 20 ವರ್ಷಗಳ ಸತತ ಪರಿಶ್ರಮದ ಮೂಲಕ ನಾನು ಗೆದ್ದು ಬಂದಿದ್ದೇನೆ. ಇವೆಲ್ಲ ಕಾರಣಗಳಿಂದ ರಾಜೀನಾಮೆ ನೀಡುತ್ತಿರುವುದಾಗಿ ಸುವರ್ಣ ನ್ಯೂಸ್ .ಕಾಂ ಸೋದರ ಮಾಧ್ಯಮ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಾಯಾವತಿ ಸೂಚನೆ
ಬಿಎಸ್ ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರೇ ರಾಜೀನಾಮೆ ನೀಡಲು ಸೂಚಿಸಿದ್ದು ವಿಕಾಸಸೌಧಕ್ಕೆ ಆಗಮಿಸಿದ್ದ ಬಿಎಸ್ ಪಿ ರಾಜ್ಯಸಭೆ ಸದಸ್ಯ ಡಾ.ಅಶೋಕ್ ಸಿದ್ಧಾರ್ಥ್ ಅವರ ಜೊತೆ ಚರ್ಚಿಸಿ  ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಜತೆ ಅಧಿಕಾರ ಹಂಚಿಕೊಳ್ಳಲು ಮಾಯಾವತಿ ನಿರಾಸಕ್ತಿ ಹೊಂದಿದ್ದು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೂ ಮೈತ್ರಿ ಮಾಡಿಕೊಂಡಿಲ್ಲ.