ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ನಿಗದಿ | ಜೂ.12 ರಿಂದ ಆ.10 ರವರೆಗೆ ವರ್ಗಾವಣೆ ಪ್ರಕ್ರಿಯೆಗಳು ನಡೆಯಲಿವೆ

ಬೆಂಗಳೂರು (ಜೂ. 02): ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಜೂ.12 ರಿಂದ ಆ.10 ರವರೆಗೆ ವರ್ಗಾವಣೆ ಪ್ರಕ್ರಿಯೆಗಳು ನಡೆಯಲಿವೆ.

ವರ್ಗಾವಣೆ ಸಂಬಂಧ ಮಾರ್ಗಸೂಚಿ, ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಕಳೆದ ಫೆಬ್ರವರಿಯಂದು ನಡೆದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅಂಗೀಕಾರವಾಗಿರುವ ಕರ್ನಾಟಕ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ-2019 ರಂತೆಯೇ ವರ್ಗಾವಣೆ ಮಾಡಲಾಗುತ್ತಿದೆ. ಕಾಯ್ದೆ ತಿದ್ದುಪಡಿ ಹಾಗೂ ವಿಧಾನಸಭೆ ಚುನಾವಣೆ ಸೇರಿದಂತೆ ಹಲವು ಕಾರಣಗಳಿಂದಾಗಿ ಇಲ್ಲಿಯವರೆಗೂ ಆರು ಬಾರಿ ವರ್ಗಾವಣೆ ನಿರ್ಧಾರವನ್ನು ಮುಂದೂಡಲಾಗಿದೆ.

ಈಗ ಏಳನೇ ಬಾರಿ ವರ್ಗಾವಣೆ ಪ್ರಕ್ರಿಯೆ ಜಾರಿ ಮಾಡಲಾಗುತ್ತಿದೆ. ಜೂ.12 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದಕ್ಕಾಗಿ ಶಿಕ್ಷಕರ ಮಾಹಿತಿ ತಂತ್ರಾಂಶ (ಟಿಡಿಎಸ್)ನಲ್ಲಿ ಸೇವಾ ಮತ್ತಿತರ ಅಗತ್ಯ ವಿವರಗಳನ್ನು ಅಪ್ ಲೋಡ್ ಮಾಡಲು ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ.

ಅರ್ಜಿಗಳೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಇಲಾಖೆಯ ಶಿಕ್ಷಕರ ವರ್ಗಾವಣೆ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ದಾಖಲೆಗಳು ಸ್ಪಷ್ಟವಾಗಿ ಕಾಣುವಂತಿರಬೇಕು. ವರ್ಗಾವಣೆ ಪ್ರಕ್ರಿಯೆ ಹಾಗೂ ದಾಖಲೆಗಳನ್ನು ಸಲ್ಲಿಸುವ ಕುರಿತ ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್ schooleducation.kar.nic.com ನೋಡುವಂತೆ ಶಿಕ್ಷಣ ಇಲಾಖೆ ತಿಳಿಸಿದೆ.

2018 ರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸ್ಥಳ ಆಯ್ಕೆ ಮಾಡಿಕೊಂಡಿರುವ ಶಿಕ್ಷಕರಿಗೆ ಪ್ರಸ್ತುತ ವರ್ಗಾವಣೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಕಳೆದ ಬಾರಿ ಅರ್ಜಿ ಸಲ್ಲಿಸಿದ್ದ ಸುಮಾರು 72 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಜಿಗಳನ್ನು ಹೊಸ ನಿಯಮದಂತೆ ಪರಿಗಣಿಸುವುದರಿಂದ ತಿದ್ದುಪಡಿ ಮಾಡಿಕೊಳ್ಳುವಂತೆ ತಿಳಿಸಿದೆ. ಶಿಕ್ಷಕರ ವರ್ಗಾವಣೆಯಲ್ಲಿ ‘ಜ್ಯೇಷ್ಠತಾ ಘಟಕ’ದ ಆಧಾರದಲ್ಲಿ
ವರ್ಗಾವಣೆ ಮಾಡಲಾಗುತ್ತದೆ. ಹೆಚ್ಚುವರಿ ಶಿಕ್ಷಕರು, ಕೋರಿಕೆ ವರ್ಗಾವಣೆ, ಕಡ್ಡಾಯ ವರ್ಗಾವಣೆಗಳನ್ನು ಶೇ.5 ರಷ್ಟು ಮತ್ತು ಶೇ.3 ರಷ್ಟು ಅಂತರ ಘಟಕ ಕೋರಿಕೆ ವರ್ಗಾವಣೆ ಮಾಡಲಾಗುತ್ತದೆ.