ರಾಷ್ಟ್ರಪತಿಗಳ ವೇತನ, ಸರ್ಕಾರಿ ಅಧಿಕಾರಿಗಳಿಗಿಂಗಲೂ ಕಡಿಮೆ ಇದೆ. ರಾಷ್ಟ್ರಪತಿಗಳ ಜೊತೆಗೆ ಉಪರಾಷ್ಟ್ರಪತಿ, ರಾಜ್ಯಪಾಲರ ವೇತನ ಕೂಡಾ ಅಧಿಕಾರಿಗಳಿಗಿಂತ ಕಡಿಮೆಯೇ ಇದೆ !

ನವದೆಹಲಿ(ನ.20): ರಾಷ್ಟ್ರಪತಿ, ದೇಶದ ಪ್ರಥಮ ಪ್ರಜೆ. ಅವರದ್ದು ಸಾಂವಿಧಾನಿಕ ಹುದ್ದೆ. ದೆಹಲಿಯಲ್ಲಿ ಅತ್ಯಂತ ಐಷಾರಾಮಿ ಬಂಗಲೆಯಲ್ಲಿ ಅವರು ವಾಸ ಮಾಡುತ್ತಾರೆ. ಸಹಜವಾಗಿಯೇ ಅವರ ವೇತನವೂ ದೇಶದಲ್ಲಿ ಎಲ್ಲರಿಗಿಂತ ಹೆಚ್ಚು ಎಂಬುದು ಎಲ್ಲರ ಊಹೆ. ಆದರೆ ಅಚ್ಚರಿ ಎಂದರೆ ರಾಷ್ಟ್ರಪತಿಗಳ ವೇತನ, ಸರ್ಕಾರಿ ಅಧಿಕಾರಿಗಳಿಗಿಂಗಲೂ ಕಡಿಮೆ ಇದೆ. ರಾಷ್ಟ್ರಪತಿಗಳ ಜೊತೆಗೆ ಉಪರಾಷ್ಟ್ರಪತಿ, ರಾಜ್ಯಪಾಲರ ವೇತನ ಕೂಡಾ ಅಧಿಕಾರಿಗಳಿಗಿಂತ ಕಡಿಮೆಯೇ ಇದೆ!

2008 ರವರೆಗೂ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕ್ರಮವಾಗಿ ಮಾಸಿಕ 50,000ರು.,40,000 ರು. ಮತ್ತು 36,000 ರು. ವೇತನ ನೀಡಲಾಗುತ್ತಿತ್ತು. ಆದರೆ 2008ರಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನವನ್ನು ಕ್ರಮವಾಗಿ ಮಾಸಿಕ 1.50 ಲಕ್ಷ ರು., 1.25 ಲಕ್ಷ ರು. ಮತ್ತು 1.10 ಲಕ್ಷ ರು.ಗೆ ಏರಿಸಲಾಯಿತು.

ಆದರೆ 2016ರ ಜ.1ರಿಂದ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದ ಬಳಿಕ ಮತ್ತೆ ಈ ಮೂರು ಗಣ್ಯ ಹುದ್ದೆಗಳ ವೇತನ, ಸರ್ಕಾರಿ ಅಧಿಕಾರಿಗಳ ವೇತನಕ್ಕಿಂತ ಕಡಿಮೆಯಾಯಿತು. ಕಾರಣ, ದೇಶದಲ್ಲಿ ನಂ.1 ಸರ್ಕಾರಿ ಹುದ್ದೆಯಾಗಿರುವ ಕೇಂದ್ರ ಸಂಪುಟ ಕಾರ್ಯದರ್ಶಿಗಳ ವೇತನ 2.50ಲಕ್ಷ ರು.ಗೆ ಮತ್ತು ಕೇಂದ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿ ವೇತನ 2.25 ಲಕ್ಷ ರು.ಗೆ ಏರಿಕೆಯಾಯಿತು. ಸೇನಾ ಮುಖ್ಯಸ್ಥರ ವೇತನ ಕೂಡಾ 2.50 ಲಕ್ಷ ರು.ಗೆಏರಿಕೆಯಾಯಿತು.

ಹೀಗಾಗಿ ಮತ್ತೊಮ್ಮೆ ರಾಷ್ಟ್ರಪತಿ, ಉಪರಾಷ್ಟ್ರಪತಿ,ರಾಜ್ಯಪಾಲರ ವೇತನ ಏರಿಕೆ ಮಾಡಬೇಕೆಂದು ಕೇಂದ್ರ ಗೃಹ ಸಚಿವಾಲಯ ಪ್ರಸ್ತಾಪ ಮುಂದಿಟ್ಟು, ಅದನ್ನು ಸಂಪುಟ ಕಾರ್ಯದರ್ಶಿಗೆ ಕಳುಹಿಸಿಕೊಟ್ಟಿದೆ. ಆದರೆ ಪ್ರಸ್ತಾಪ ಸಲ್ಲಿಕೆಯಾಗಿ 1 ವರ್ಷವಾದರೂ, ಇದುವರೆಗೆ ವೇತನ ಏರಿಕೆ ಸುಳಿವು ಹೊರಬಿದ್ದಿಲ್ಲ. ಪ್ರಸ್ತಾಪವನ್ನು ಕೇಂದ್ರ ಅಂಗೀಕರಿಸಿದ್ದೇ ಆದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ವೇತನ ಕ್ರಮವಾಗಿ 5 ಲಕ್ಷ ರು. 3.50 ಲಕ್ಷ ಮತ್ತು 3 ಲಕ್ಷ ರು.ಗೆ ಏರಿಕೆಯಾಗಲಿದೆ.