ಉದ್ಯಾನನಗರಿಗೆ `ಬ್ರ್ಯಾಂಡ್ ಬೆಂಗಳೂರು' ಅಡಿ  ಜಾಗತಿಕ ಮಟ್ಟದಲ್ಲಿ ಪ್ರತ್ಯೇಕ ಗುರುತು ತಂದುಕೊಡುವ ಸಲುವಾಗಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು (ಡಿ.22): ಉದ್ಯಾನನಗರಿಗೆ `ಬ್ರ್ಯಾಂಡ್ ಬೆಂಗಳೂರು' ಅಡಿ ಜಾಗತಿಕ ಮಟ್ಟದಲ್ಲಿ ಪ್ರತ್ಯೇಕ ಗುರುತು ತಂದುಕೊಡುವ ಸಲುವಾಗಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇದರ ಮೊದಲ ಭಾಗವಾಗಿ ಡಿ.24 ರಂದು ಭಾನುವಾರ ವಿಧಾನಸೌಧದ ಮುಂಭಾಗ ನಡೆಯಲಿರುವ ಕಾರ್ಯಕ್ರಮದಲ್ಲಿ `ಬ್ರ್ಯಾಂಡ್ ಬೆಂಗಳೂರು' ಪ್ರತ್ಯೇಕ ಲಾಂಛನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ದೇಶದಲ್ಲೇ

ಮೊದಲ ಬಾರಿಗೆ ನಗರವೊಂದರ ಬ್ರ್ಯಾಂಡಿಂಗ್’ಗಾಗಿ ಲಾಂಛನ ಬಿಡುಗಡೆಗೊಳಿಸಿದ ಖ್ಯಾತಿಗೆ ಸಿಲಿಕಾನ್ ಸಿಟಿ ಪಾತ್ರವಾಗಲಿದೆ. ಜತೆಗೆ ಬೆಂಗಳೂರಿಗೆ ಆಗಮಿಸುವ ಪ್ರವಾಸಿಗರಿಗೆ ಎಲ್ಲಾ ರೀತಿಯಲ್ಲೂ ನೆರವಾಗಬಲ್ಲ `ಮೊಬೈಲ್ ಆ್ಯಪ್' ಕೂಡ ಬಿಡುಗಡೆಗೊಳ್ಳಲಿದೆ. ಅಲ್ಲದೇ ವಿಧಾನಸೌಧದ ಮುಂಭಾಗ `ನಮ್ಮ ಬೆಂಗಳೂರು ಹಬ್ಬ' ಆಚರಣೆಗೆ ಪ್ರವಾಸೋದ್ಯಮ ಇಲಾಖೆ ಸಿದ್ಧತೆ ನಡೆಸಿದೆ ಎಂದು ಐಟಿ-ಬಿಟಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಇದೆಲ್ಲದಕ್ಕೂ ಮುಖ್ಯವಾಗಿ ಡಿ.24ರಂದು ಭಾನುವಾರ ವಿಧಾನಸೌಧದ ಮುಂಭಾಗ `ಓಪನ್ ಸ್ಟ್ರೀಟ್' ಮಾಡಲಾಗುವುದು. ಈ ಹಿಂದೆ ಎಂ.ಜಿ. ರಸ್ತೆ, ಕೋರಮಂಗಲದಲ್ಲಿ ಆಯೋಜಿಸಿದ್ದ ಮಾದರಿಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಸಾರ್ವಜನಿಕರ ಮನರಂಜನೆಗೆ ವೇದಿಕೆ ಕಲ್ಪಿಸಿಕೊಡಲಾಗುವುದು. ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಬೀದಿಯಲ್ಲಿ ಸ್ಥಳೀಯ ಕಲೆಗಳ ಪ್ರದರ್ಶನ, ಫುಡ್’ಕೋರ್ಟ್ ಫ್ಯಾಬ್ ಡ್ಯಾನ್ಸ್ ಸೇರಿದಂತೆ ನಗರ ನಾಗರೀಕರು ಖುಷಿಯಿಂದ ಭಾಗವಹಿಸಲು ಅಗತ್ಯವಾದ ಎಲ್ಲಾ ಅವಕಾಶಗಳನ್ನು ಸೃಷ್ಟಿಸಲಾಗುವುದು ಎಂದು ಅವರು ತಿಳಿಸಿದರು.

ವಿಧಾನಸೌಧಕ್ಕೆ ಅವಕಾಶ: ವಜ್ರಮಹೋತ್ಸವ ಸೇರಿದಂತೆ ಪ್ರತಿ ಕಾರ್ಯಕ್ರಮದಲ್ಲೂ ವಿಧಾನಸೌಧ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗುತ್ತದೆ. ಈ ಮೊದಲು ಸಾರ್ವಜನಿಕರು ವಿಧಾನಸೌಧದ ಮುಂಬಾಗಿಲ್ಲಿರುವ ಮೆಟ್ಟಿಲವರೆಗೂ ಹೋಗಬಹುದಿತ್ತು. ಆದರೆ ಪ್ರಸ್ತುತ ಭದ್ರತಾ ಕಾರಣಗಳಿಗಾಗಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಭಾನುವಾರ ಒಂದು ದಿನವಾದರೂ ಸಾರ್ವಜನಿಕರಿಗೆ ವಿಧಾನಸೌಧದ ಮೆಟ್ಟಿಲುವರೆಗೆ ಮುಕ್ತ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಮುಕ್ತವಾಗಿ ಆಗಮಿಸಿ ಬ್ರ್ಯಾಂಡ್ ಬೆಂಗಳೂರು ಹಬ್ಬದಲ್ಲಿ ಭಾಗವಹಿಸಬಹುದು ಎಂದು ಕರೆ ನೀಡಿದರು.