ವಿಜಯಪುರ :  ಓಮ್ನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಯೊಬ್ಬರು ಸ್ಥಳದಲ್ಲೇ ಮೃತಪಟ್ಟದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣ ಸಮೀಪ ಶುಕ್ರವಾರ ಸಂಜೆ ನಡೆದಿದೆ. ಕಲಾವತಿ(30) ಮೃತಪಟ್ಟಮಹಿಳೆಯಾಗಿದ್ದು ದ್ವಿಚಕ್ರವಾಹನ ಚಲಾಯಿಸುತ್ತಿದ್ದ ಅವರ ಪತಿ ಪೂಜಯ್ಯ ಗಂಭೀರ ಗಾಯಗೊಂಡಿದ್ದಾರೆ.

ಪೂಜಯ್ಯ ಅವರು ಸಂಜೆ 5 ಗಂಟೆ ತಮ್ಮ ಪತ್ನಿ ಕಲಾವತಿ ಜೊತೆ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ಕಡೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಓಮ್ನಿ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ಅವರನ್ನು ಟಿವಿಎಸ್‌ ಮೋಪೆಡ್‌ನಲ್ಲಿ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ತಪಾಸಣೆಗಾಗಿ ಹೋಗಲಾಗುತ್ತಿತ್ತು.

ಅಪಘಾತದ ರಭಸಕ್ಕೆ ಹೊಟ್ಟೆಯಲ್ಲಿದ್ದ ಶಿಶು ಕೂಡ ಮೃತಪಟ್ಟಿದೆ. ದ್ವಿಚಕ್ರ ವಾಹ​ನ ಚಲಾಯಿಸುತ್ತಿದ್ದ ಪತಿ ಪೂಜಯ್ಯ ಅವರೂ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಅವರಿಗೆ ಇನ್ನೊಂದು ಮಗು ಇದೆ. ವಿಜಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.