Asianet Suvarna News Asianet Suvarna News

ಮುಂದಿನ 20 ವರ್ಷ ಬಿಜೆಪಿಯದ್ದೇ ಸರ್ಕಾರ!

17 ನೇ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಜಯಭೇರಿ ಬಾರಿಸಿದ್ದಾರೆ. ಇಡೀ ದೇಶ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದೆ. ಬಿಜೆಪಿ ಈ ಗೆಲುವಿನ ಬಗ್ಗೆ ಒಂದು ವಿಮರ್ಶೆ ಇಲ್ಲಿದೆ ಓದಿ. 

Predictions says next 20 years BJP will be in Power
Author
Bengaluru, First Published May 26, 2019, 9:23 AM IST

ನವದೆಹಲಿ (ಮೇ. 26):  ಪ್ರಚಂಡವೆನಿಸುವಂಥ ಎಕ್ಸಿಟ್‌ ಪೋಲ್ಸ್‌, ಅವರಿಗೆ ಹತ್ತಿರವಾಗಿದ್ದ ಒಮ್ಮತಾಭಿಪ್ರಾಯದ ನಿರೀಕ್ಷೆಗಳು ಮತ್ತು ಪೆಲೆಟ್‌ ಬಾಂಬ್‌ಗಳಂತೆ ಸಿಡಿದ ಅಂತಿಮ ಅಂಕಿಗಳು- ಅದರ ಅಗಾಧತೆಯಲ್ಲಿ ಎಲ್ಲವೂ ಮುಳುಗಿರುವಾಗ- ಸೋತವರ ಮೌನದಲ್ಲಿ ನಾನೂ ಒಬ್ಬನಾಗಿ ಬಿಟ್ಟಕಣ್ಣು ಮುಚ್ಚದವನಂತೆ ಇದ್ದುಬಿಟ್ಟೆ.

ಪ್ರಾಮಾಣಿಕವಾಗಿರುವುದು ಅತ್ಯಂತ ಒಳ್ಳೆಯ ನೀತಿ. ಬಿಜೆಪಿಯು ವಿಭಾಜಕ ಮತ್ತು ಅಮಿತ್‌ ಶಾ ನಂಬುವುದಕ್ಕೆ ಯೋಗ್ಯರಾದ ವ್ಯಕ್ತಿಯಲ್ಲ ಎಂದು ಪರಿಗಣಿಸುವವರ ಜೊತೆಯಲ್ಲಿ ನಾನೂ ಇದ್ದೆ. ಈ ಕಾರಣಕ್ಕೆ ಶಾ ಅವರ ಗೆಲುವು ನನ್ನನ್ನು ಆಘಾತಗೊಳಿಸಿತ್ತು.

ನಾನು ಕಲ್ಪನೆ ಮಾಡಿದ್ದಕ್ಕಿಂತ ನಾಲ್ಕು ಅಂಶಗಳು ಹೆಚ್ಚು ಪರಿಣಾಮಕಾರಿಯಾಗಿದ್ದವು: ಸಾರ್ವಜನಿಕ ಭಾಷಣಕಾರರಾಗಿ ನರೇಂದ್ರ ಮೋದಿಯವರ ಬಲ, ಬೂತ್‌ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸುವುದರಲ್ಲಿ ಅಮಿತ್‌ ಶಾ ಅವರ ಅಸಾಧಾರಣ ಶಕ್ತಿ, ಉಳಿದಾವ ಪಕ್ಷಕ್ಕೂ ಸರಿಸಾಟಿಯಿಲ್ಲದ ರೀತಿಯಲ್ಲಿ ಬಿಜೆಪಿಯ ನಿಧಿ ಒದಗಿಸುವ ಸಾಮರ್ಥ್ಯ ಮತ್ತು ಬಿಜೆಪಿಗೆ ಸರಿಸಮನಾಗಿ ಎದ್ದುನಿಲ್ಲುವ ಒಂದು ಪ್ರತಿಪಕ್ಷದ ಗೈರು.

ರಾಹುಲ್‌ ಗಾಂಧಿ ಒಬ್ಬ ಪಕ್ವ ರಾಜಕಾರಣಿಯಾಗಿ ಬದಲಾಗಿದ್ದರು ಮತ್ತು ಇತ್ತೀಚಿನ ತಿಂಗಳುಗಳಲ್ಲಿ ಉತ್ಸಾಹದೊಂದಿಗೆ ಪ್ರಚಾರವನ್ನೂ ಮಾಡಿದ್ದರು. ಆದರೆ ಅವರೆದುರಿಗಿದ್ದ ಪರ್ವತವನ್ನು ಸರಿಸುವುದಕ್ಕೆ ಅದು ಸಾಕಾಗಲಿಲ್ಲ.

ಪರ್ವತಕ್ಕೆ ಅದರ ಮಾನ ಕೊಡೋಣ. ಉತ್ತರದಲ್ಲಿ ಅದು ಜಾತಿಯನ್ನು ಒಂದು ವಿಷಯವಾಗಿ ಮಾಡುವುದಕ್ಕೆ ಬಿಡಲಿಲ್ಲ. ಆ ಮೂಲಕ ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ ಅವರ ಆಸೆಗೆ ತಣ್ಣೀರು ಎರಚಿತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಕೋಟೆ ಅಲುಗಾಡಿ ಹೋಯಿತು. ಅಲ್ಲಿ ಬಿಜೆಪಿ 18 ಸ್ಥಾನ ಗಳಿಸಿದರೆ ತೃಣಮೂಲ ಗಳಿಸಿದ್ದು 23.

ಕಮ್ಯುನಿಸ್ಟರದ್ದು ಶೂನ್ಯ ಸಂಪಾದನೆ. ಕರ್ನಾಟಕದಲ್ಲಿ ಅಧಿಕಾರದಲ್ಲಿಲ್ಲದ ಬಿಜೆಪಿ ಕೂಟ 28ರಲ್ಲಿ 25 ಸ್ಥಾನಗಳನ್ನು ಗೆದ್ದುಕೊಂಡಿತು. ವಿವಾದಕ್ಕೀಡಾಗಿದ್ದ ಪ್ರಜ್ಞಾ ಠಾಕೂರ್‌ ಕೂಡ ಬಿಜೆಪಿ ಅಲೆಯಲ್ಲಿ ವಿಜಯದ ದಡ ಸೇರಿದರು. ತಮ್ಮ ಪಕ್ಷ 300ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವುದೆಂದು ಅಮಿತ್‌ ಶಾ ಹೇಳುತ್ತಲೇ ಇದ್ದರು. ಆ ಅಂಕಿಯನ್ನೂ ಅವರು ಪಡೆದು ತೋರಿಸಿದರು. ಅವರಿಗೆ ದೀರ್ಘಕಾಲದ ಕರತಾಡನದ ಸ್ವಾಗತ ಸಿಗಲೇಬೇಕು.

ಇಷ್ಟೊಂದು ಲೆಕ್ಕಾಚಾರದೊಂದಿಗೆ ಯೋಜನೆ ರೂಪಿಸಿ ಮತ್ತು ಗಳಿಸಿದ ಅಧಿಕಾರವು ಅಲ್ಪಾವಧಿಯದು ಆಗಬಾರದು. ಸದ್ಯದ ಬಿಜೆಪಿ ನಾಯಕತ್ವವು ಇನ್ನೂ 20 ವರ್ಷ, ಬಹುಶಃ ಇನ್ನೂ ಹೆಚ್ಚು ಅಧಿಕಾರದಲ್ಲಿರುತ್ತದೆ ಎಂದು ನಿರೀಕ್ಷೆ ಮಾಡುವುದು ಸುರಕ್ಷಿತ. ಏಕೆ? ಇಲ್ಲಿದೆ ವಿಶ್ಲೇಷಣೆ. ಮೋದಿಯವರು ತಮ್ಮ ಎರಡನೆ ಅವಧಿಯನ್ನು 2024ರಲ್ಲಿ ಮುಗಿಸುತ್ತಾರೆ.

ಆ ವರ್ಷ ಅವರು 74 ವರ್ಷದವರಾಗಿರುತ್ತಾರೆ. ಮತ್ತು ಅಮಿತ್‌ ಶಾಗೆ 60 ವರ್ಷ. ಅಮಿತ್‌ ಶಾ ಮೋದಿಯವರ ಉತ್ತರಾಧಿಕಾರಿಯಾಗಿ ಎರಡು ಅವಧಿಯನ್ನು ಮುಗಿಸುತ್ತಾರೆ. ಅದು 2034ಕ್ಕೆ ಮುಗಿದಾಗ ಅವರಿಗೆ 70 ವರ್ಷ. ಅವರು ಪ್ರಧಾನಿಯಾಗಿ ಮೂರನೆ ಅವಧಿಗೂ ತಮ್ಮ 75ನೆ ವಯಸ್ಸಿನವರೆಗೆ ಮುಂದುವರಿಯಬಹುದು.

75 ಬಿಜೆಪಿಯ ಅಧಿಕೃತ ವಯೋಮಿತಿ. ಆ ಹೊತ್ತಿಗೆ ಒಂದು ಕಸಬರಿಗೆಯನ್ನು ನಿಲ್ಲಿಸಿದರೂ ಅದು ಗೆದ್ದುಬರುತ್ತದೆ ಎನ್ನುವ ರೀತಿಯಲ್ಲಿ ಪಕ್ಷದ ಲಂಗರುಗಳು ಬಲವಾಗಿರುತ್ತವೆ. ಒಂದು ಕಾಲದಲ್ಲಿ ಕಾಂಗ್ರೆಸ್‌ ಕುರಿತೂ ಹೀಗೇ ಹೇಳಲಾಗುತ್ತಿತ್ತು.

ಏನೇ ಆದರೂ ಅದರ ಜೊತೆಯಲ್ಲೇ ಇತರ ಲಕ್ಷಣಗಳೂ ಬೆಳೆಯುತ್ತವೆ. ರಾಷ್ಟ್ರೀಯತೆ ಎಂಬ ಪದವು ಪ್ರಜಾಪ್ರಭುತ್ವವನ್ನು ಹೇಗೆ ರೂಪುಗೊಳಿಸುತ್ತದೆ ಎಂಬುದರ ಮೇಲೆ ಹೆಚ್ಚಿನವು ಅವಲಂಬಿಸಿರುತ್ತವೆ. ಅದು ಧ್ವನಿಸುವ ರೀತಿಯಲ್ಲಿರುವಷ್ಟುಸರಳವಾಗಿಲ್ಲ. ಲೂಯಿಸ್‌ ಲ್ಯಾಪ್ಹಾಮ್‌ ಅವರು ತಮ್ಮ ಆ್ಯಕ್ಟ್ ಆಫ್‌ ಫಾಲಿ ಕೃತಿಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ‘ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಕಡೆಗಣಿಸುವಲ್ಲಿ ಬಿಚ್ಚುಮನಸ್ಸಿನವರು ಮತ್ತು ನಿರಂಕುಶ ವ್ಯಕ್ತಿಯಾಗಿದ್ದರು’ ಎಂಬುದನ್ನು ತೋರಿಸಲು 369 ಪುಟಗಳನ್ನು ವಿನಿಯೋಗಿಸಿದ್ದಾರೆ.

ಇಟಲಿಯ ಕಾದಂಬರಿಕಾರ ತತ್ವಜ್ಞಾನಿ ಅಂಬೆರ್ಟೋ ಎಕೋ ಅವರ, ‘ನಿರಂಕುಶಾಧಿಕಾರ ಎಂಬುದು ಮೂಲತಃ ನಿಷ್ಠೆಯನ್ನು ಆಧರಿಸಿರುವುದು. ನಿಷ್ಠೆ ಎಂಬುದು ಸ್ವತಃಸಿದ್ಧವಾದ ಪ್ರಮಾಣ. ಸಿದ್ಧಾಂತಗಳು ಕಾರಣಗಳನ್ನು ತಳ್ಳಿಹಾಕುತ್ತವೆ, ವಿಜ್ಞಾನವನ್ನು ಅನುಮಾನಿಸಲಾಗುತ್ತದೆ, ವಾದಿಸುವುದು ರಾಷ್ಟ್ರವಿರೋಧಕ್ಕೆ ಸಮನಾಗುತ್ತದೆ’ ಎಂಬ ಹೇಳಿಕೆಯನ್ನು ಉಲ್ಲೇಖಿಸುತ್ತಾರೆ.

ಅಂಬೆರ್ಟೋ ಎಕೋ ಅವರು ಮುಸೋಲಿನಿಯವರ ನ್ಯಾಷನಲ್‌ ಫ್ಯಾಸಿಸ್ಟ್‌ ಪಾರ್ಟಿಯಿಂದ ದಬ್ಬಾಳಿಕೆಗೊಳಗಾಗುತ್ತಿದ್ದ ತಮ್ಮ ದೇಶದಿಂದ ಪ್ರಭಾವಿತರಾಗಿದ್ದರು. ಆ ಹೆಸರನ್ನು ಗಮನಿಸಿ. ನ್ಯಾಷನಲ್‌ ಫ್ಯಾಸಿಸ್ಟ್‌. ಹಿಟ್ಲರನ ಪಕ್ಷವನ್ನು ನ್ಯಾಷನಲ್‌ ಸೋಷಿಯಲಿಸ್ಟ್‌ ಜರ್ಮನ್‌ ವರ್ಕರ್ಸ್‌ ಪಾರ್ಟಿ ಎಂದು ಕರೆಯಲಾಗಿತ್ತು.

ಮಹಾತ್ಮ ಗಾಂಧಿಯವರು ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ಗಾಗಿ ಕೆಲಸ ಮಾಡಿದರು. ರಾಷ್ಟ್ರೀಯ (ನ್ಯಾಷನಲ್‌) ಎಂಬುದು ಹಲವು ಅಳತೆಗಳಿಗೆ ಹೊಂದಿಕೊಳ್ಳುವ ಒಂದು ಜಾಕೆಟ್‌ ಆಗಿತ್ತು. ಇವತ್ತಿನ ಭಾರತದಲ್ಲಿ ಅದು ಒಂದೇ ಅಳತೆಗೆ ಮತ್ತು ಒಂದೇ ಬಣ್ಣಕ್ಕೆ ಹೊಂದಿಕೊಳ್ಳುತ್ತದೆ. ಉಳಿದ ಎಲ್ಲರೂ ರಾಷ್ಟ್ರವಿರೋಧಿಗಳು.

ತಾನು ಸೋಲುವುದಿಲ್ಲ ಎಂಬ ಭರವಸೆಯನ್ನು ಕೊಡುವ ಅಧಿಕಾರ ಇದ್ದಾಗ ರಾಷ್ಟ್ರೀಯತೆ ಗೆಲ್ಲುತ್ತದೆ. ಚುನಾವಣಾ ವಿಶ್ಲೇಷಕರಾಗಿದ್ದು ರಾಜಕಾರಣಿಯಾಗಿ ಬದಲಾಗಿರುವ ಯೋಗೇಂದ್ರ ಯಾದವ್‌ ಅವರು ಎಕ್ಸಿಟ್‌ ಪೋಲ್‌ಗೆ ಮೊದಲೇ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ್ದರು. ‘ಯೋಜಿಸಿದ ರೀತಿಯಲ್ಲೇ ಚುನಾವಣೆಗಳು ನಡೆದರೆ ಮತದಾರರ ಸರ್ವಾಧಿಕಾರತ್ವ ಇರುತ್ತದೆ. ಆದರೆ ಪ್ರತಿಯೊಂದೂ ಭಿನ್ನವಾದಾಗ ಪ್ರಜಾಪ್ರಭುತ್ವವು ಅಲ್ಲಿರುವುದಿಲ್ಲ’ ಎಂಬ ಮುಂಗಾಣ್ಕೆಯನ್ನು ಅವರು ಕಂಡಿದ್ದರು. ಹೀಗೆ ಹೇಳುವಾಗ ಅವರು ಬಹಳ ಸ್ಪಷ್ಟವಾಗಿ: ‘ಈ ಚುನಾವಣೆಯು ನಮ್ಮ ಗಣತಂತ್ರವು ಬೆತ್ತಲೆಗೊಳ್ಳುವುದು ಆರಂಭವಾಗುವುದಕ್ಕೆ ಕೊಡುಗೆಯನ್ನು ನೀಡುತ್ತದೆ ಎಂದು ನನಗೆ ಭಾಸವಾಗುತ್ತಿದೆ’ ಎಂದು ಹೇಳಿದ್ದರು.

ಇವಿಎಂಗಳ ಕುರಿತ ವರದಿಗಳ ನುಗ್ಗಲು ನಂತರ ಬಂತು. ಇದು ನಿಲುಕದ ದ್ರಾಕ್ಷಿ ಹುಳಿ ಎಂದಂತೆ ಎಂದು ಇಂಥ ವರದಿಗಳ ಬಗ್ಗೆ ಉತ್ತಮ ನಾಗರಿಕರು ಬಹಳಷ್ಟುಮಹತ್ವವನ್ನು ಕೊಡಲು ಬಯಸಲಿಲ್ಲ. ಆದರೆ ಹಿಂದಿನ ಮುಖ್ಯ ಚುನಾವಣಾ ಆಯುಕ್ತ ಯು.ಪಿ.ರಾವತ್‌ ಹೇಳಿರುವುದು ಗಮನಾರ್ಹ.

‘ಮತದಾನದ ಮರುದಿನ ಅನೇಕ ಕೇಂದ್ರಗಳಲ್ಲಿ ಇವಿಎಂಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಲಾರಿಗಳನ್ನು ನಾನು ನೋಡಿದೆ. ಇದು ಗಾಬರಿಪಡಿಸುವ ಸಂಗತಿಯಾಗಿದೆ. ಚುನಾವಣೆ ಸಮಯದಲ್ಲಿ ಕಾಯ್ದಿರಿಸಿದ ಇವಿಎಂಗಳನ್ನು ಸಾಗಾಟ ಮಾಡುವ ಸಂಗತಿಯೇ ಬರುವುದಿಲ್ಲ. ಅವು ಎಲ್ಲಿಂದ ಬಂದವು, ಅವನ್ನು ಎಲ್ಲಿಗೆ ಸಾಗಿಸಿದರು, ಏಕೆ ಅವನ್ನು ಸಾಗಿಸಿದರು. ಅವನ್ನು ಎಲ್ಲಿ ಸಂಗ್ರಹಿಸಿಡಲಾಗಿತ್ತೋ ಅವು ಅಲ್ಲಿಯೇ ಇರಬೇಕು.’

ಆದರೆ, ಅವು ಅಲ್ಲಿರಲಿಲ್ಲ. ನಾನು ಸೋಲಿನ ಮೌನದೊಳಗೆ ಸೇರಿಕೊಂಡೆ. ನೆರವು ಬೇಕೆನಿಸಿತು. ನನ್ನ ಡೆಸ್ಕಿನ ಮೇಲಿದ್ದ ಭಗವದ್ಗೀತೆಯ ಕಡೆ ತಿರುಗಿದೆ. ನನಗೆ ಮತ್ತೊಮ್ಮೆ ತಿಳಿಯಿತು: ಜ್ಞಾನಿಯಾದವನು ಬದುಕಿದ್ದವರಿಗಾಗಿಯಾಗಲಿ ಸತ್ತವರಿಗಾಗಿಯಾಗಲಿ ದುಃಖಿಸುವುದಿಲ್ಲ.  ಯಾರು ತನ್ನನ್ನು ಹಂತಕ ಎಂದು ಪರಿಗಣಿಸಿಕೊಳ್ಳುತ್ತಾನೋ ಮತ್ತು ಯಾರು ತನ್ನನ್ನು ಹತ್ಯೆಗೀಡಾದೆ ಎಂದು ಅಂದುಕೊಳ್ಳುತ್ತಾನೋ ಅವರಿಬ್ಬರೂ ಅಜ್ಞಾನಿಗಳು.

ಅವನು ಹುಟ್ಟಿಲ್ಲದ, ಅವಿನಾಶಿ, ಅನಂತ ಮತ್ತು ಅನಾದಿ... ಶರೀರವನ್ನು ಕೊಚ್ಚಿಹಾಕಿದರೂ ಅವನು ಸಾಯುವುದಿಲ್ಲ... ಹುಟ್ಟಿದವನಿಗೆ ಸಾವು ನಿಶ್ಚಿತ ಮತ್ತು ಸತ್ತವನಿಗೆ ಹುಟ್ಟು ನಿಶ್ಚಿತ; ಆದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದುದಕ್ಕೆ ಯಾಕೆ ದುಃಖಿಸಬೇಕು.

- ಟಿಜೆಎಸ್ ಜಾರ್ಜ್ 

Follow Us:
Download App:
  • android
  • ios