ಟಿಪ್ಪು ಜಯಂತಿ ಹಿನ್ನೆಲೆ ಶುಕ್ರವಾರ ನಗರದಲ್ಲಿ ಸಂಘ ಸಂಸ್ಥೆಗಳು ಆಚರಣೆ ಪರ ಮತ್ತು ವಿರೋಧ ಸೇರಿದಂತೆ ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ.
ಬೆಂಗಳೂರು: ಟಿಪ್ಪು ಜಯಂತಿ ಹಿನ್ನೆಲೆ ಶುಕ್ರವಾರ ನಗರದಲ್ಲಿ ಸಂಘ ಸಂಸ್ಥೆಗಳು ಆಚರಣೆ ಪರ ಮತ್ತು ವಿರೋಧ ಸೇರಿದಂತೆ ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು, ಟಿಪ್ಪು ಜಯಂತಿ ದಿನ ನಗರದಲ್ಲಿ ಯಾರಿಗೂ ಮೆರವಣಿಗೆ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಯಂತಿ ಆಚರಣೆ ವೇಳೆ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸಿದಂತೆ ಎಚ್ಚರಿಕೆ ವಹಿಸಲಾಗಿದ್ದು, ನಗರ ವ್ಯಾಪ್ತಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುತ್ತದೆ. ಅಂದು ಭದ್ರತೆಯಲ್ಲಿ 13 ಸಾವಿರ ಪೊಲೀಸರು, 30 ರಾಜ್ಯ ಸಶಸ್ತ್ರ ಮೀಸಲು ಪಡೆ, 20 ನಗರ ಸಶಸ್ತ್ರ ಮೀಸಲು ಪಡೆ ತುಕಡಿಗಳು ಹಾಗೂ ಗರುಡಾ ಪಡೆ ನಿಯೋಜಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಟಿಪ್ಪು ಜಯಂತಿ ಕಾರ್ಯಕ್ರಮಗಳು ಒಳಾಂಗಣ ಸಭಾಂಗಣಗಳಲ್ಲಿ ನಡೆಸಬೇಕು ಹಾಗೂ ಕಾರ್ಯಕ್ರಮ ನಿಮಿತ್ತ ಸಾರ್ವಜನಿ ಕವಾಗಿ ಮೆರವಣಿಗೆಗಳು ಆಯೋಜಿಸದಂತೆ ಕಾರ್ಯಕ್ರಮ ಸಂಘಟಕರಿಗೆ ಸೂಚಿಸಲಾಗಿದೆ.
ಹಾಗೆ ಈ ಜಯಂತಿ ವಿರೋಧಿ ಸುವರಿಗೆ ಕೂಡಾ ಪ್ರತಿಭಟನೆ ಮಾಡಲು ಸ್ಥಳ ನಿಗದಿತ ಮಾಡಲಾಗಿದೆ. ಈ ನಿಗದಿತ ಜಾಗದಲ್ಲಿ ಹೊರತು ಬೇರೆಡೆ ಪ್ರತಿಭಟನೆ ನಡೆಸಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಅದೇ ಮೆರವಣಿಗೆ ಆಯೋಜಿಸಿದರೂ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಬಾರಿ ನಡೆದ ಟಿಪ್ಪು ಜಯಂತಿ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಧಕ್ಕೆ ತಂದ ಆರೋಪದಡಿ ಕೆಲವರು ಬಂಧಿತರಾಗಿದ್ದವರನ್ನು ಮುಂಜಾಗ್ರತೆ ಕ್ರಮವಾಗಿ ವಶಕ್ಕೆ ಪಡೆಯುವಂತೆ ಆದೇಶಿಸಿದ್ದೇನೆ. ಗುರುವಾರ ರಾತ್ರಿ ವೇಳೆಗೆ ಹಳೆ ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗುತ್ತದೆ. ಅವರಲ್ಲಿ ಯಾರಾದರೂ ಮತ್ತೆ ಕಾನೂನು ಭಂಗ ಕೃತ್ಯಗಳಲ್ಲಿ ಪಾಲ್ಗೊಂಡಿದ್ದರೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ಆಯುಕ್ತರು ಹೇಳಿದರು.
ಹಿರಿಯ ಅಧಿಕಾರಿಗಳ ಸಭೆ: ಟಿಪ್ಪು ಜಯಂತಿ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುನ್ನಚ್ಚರಿಕೆ ಕ್ರಮಗಳ ಜಾರಿಗೊಳಿಸಿರುವ ಆಯುಕ್ತರು, ಈ ಸಂಬಂಧ ಬುಧವಾರ ಹಿರಿಯ ಅಧಿಕಾರಿಗಳ ಜತೆ ಸಭೆ ಕೂಡಾ ನಡೆಸಿದರು. ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ನಗರದ ಎಲ್ಲ ವಿಭಾಗದ ಡಿಸಿಪಿಗಳು ಪಾಲ್ಗೊಂಡಿದ್ದರು.
