ರಾಷ್ಟ್ರ ರಾಜಕಾರಣದಲ್ಲೂ ಕುತೂಹಲ ಮೂಡಿಸಿರುವ ಮುಂಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ನಿಚ್ಚಳ ಬಹುಮತ ಸಿಗದೆ ಅತಂತ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ಸಂಖ್ಯೆ 113ನ್ನು ಯಾವ ಪಕ್ಷವೂ ಗಳಿಸುವ ಸಾಧ್ಯತೆ ಇಲ್ಲ.
ಬೆಂಗಳೂರು(ಡಿ.8) ರಾಷ್ಟ್ರ ರಾಜಕಾರಣದಲ್ಲೂ ಕುತೂಹಲ ಮೂಡಿಸಿರುವ ಮುಂಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ನಿಚ್ಚಳ ಬಹುಮತ ಸಿಗದೆ ಅತಂತ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ಸಂಖ್ಯೆ 113ನ್ನು ಯಾವ ಪಕ್ಷವೂ ಗಳಿಸುವ ಸಾಧ್ಯತೆ ಇಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸ್ಥಾನ ಪಡೆದುಕೊಂಡರೂ ಸರಳ ಬಹುಮತದ ಗುರಿ ತಲುಪುವಲ್ಲಿ ವಿಫಲವಾಗಲಿದೆ. ಕಡಿಮೆ ಅಂತರದಲ್ಲಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಪರಿಣಾಮ, ಜೆಡಿಎಸ್ ಈ ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಕಡಿಮೆ ಸ್ಥಾನ ಗಳಿಸಿದರೂ `ಕಿಂಗ್ ಮೇಕರ್' ಆಗಲಿದೆ.

ಕನ್ನಡಪ್ರಭ-ಸುವರ್ಣ ನ್ಯೂಸ್ ಸಂಸ್ಥೆಗಳಿಗಾಗಿ ಎಝಡ್ ರೀಸರ್ಚ್ ಸಂಸ್ಥೆಯು ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಈ ಅಂಶ ಹೊರಬಿದ್ದಿದೆ. ರಾಜ್ಯವನ್ನು ಪ್ರದೇಶವಾರು ಹೈದ್ರಾಬಾದ್ ಕರ್ನಾಟಕ, ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ, ಹಳೆ ಮೈಸೂರು ಹಾಗೂ ರಾಜಧಾನಿ ಬೆಂಗಳೂರು ಎಂಬುದಾಗಿ ಆರು ವಿಭಾಗಗಳನ್ನಾಗಿ ವಿಂಗಡಿಸಿ ನಡೆಸಿರುವ ಸಮೀಕ್ಷೆಯಿಂದ ಹೊರಬಂದಿರುವ ಅಂಕಿ ಅಂಶಗಳ ಪ್ರಕಾರ, ಒಟ್ಟಾರೆ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 88 ಸ್ಥಾನಗಳನ್ನು ಗಳಿಸಲಿದೆ. ಬಿಜೆಪಿ 82 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಜೆಡಿಎಸ್ 43 ಸ್ಥಾನಗಳನ್ನು ಪಡೆಯಲಿದೆ. ಇತರರು 11 ಸ್ಥಾನಗಳನ್ನು ಗಳಿಸಲಿದ್ದಾರೆ. ಇದು ನವೆಂಬರ್ ತಿಂಗಳಲ್ಲಿ ನಡೆಸಿರುವ ಸಮೀಕ್ಷೆ. ಗುಜರಾತ್
ವಿಧಾನಸಭಾ ಚುನಾವಣೆ ನಂತರ ಹೊಸ ವರ್ಷದಲ್ಲಿ ಕರ್ನಾಟಕ ರಾಜಕಾರಣದ ಲೆಕ್ಕಾಚಾರಗಳೂ ಬದಲಾಗುವ ಸಂಭವವಿದೆ. ಚುನಾವಣೆಗೆ ಇನ್ನೂ ಐದು ತಿಂಗಳು ಬಾಕಿ ಇದೆ. ರಾಜಕೀಯ ಪಕ್ಷಗಳು ಹೊಸ ರಣತಂತ್ರ ರೂಪಿಸಿಕೊಳ್ಳಲು ಹಾಗೂ ಇರುವ ತಂತ್ರವನ್ನು ಬದಲಿಸಿಕೊಳ್ಳಲು ಕಾಲಾವಕಾಶವೂ ಇದೆ. ಹೀಗಾಗಿ, ಆ ವೇಳೆ ಪಕ್ಷವಾರು ಗಳಿಸಬಹುದಾದ ಸ್ಥಾನಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜತೆಗೆ ಶೇ.6ರಷ್ಟು ಮತದಾರರು ಇನ್ನೂ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದನ್ನು ನಿರ್ಧರಿಸಿಲ್ಲ. ಆ ಮತಗಳು ಯಾವ ಕಡೆ ವಾಲುತ್ತವೆ ಎಂಬುದೂ ಮಹತ್ವ ಪಡೆದುಕೊಳ್ಳಲಿದೆ. ಆದರೆ, ಈಗಿನ ಸಮೀಕ್ಷೆ ಪ್ರಕಾರ ಅಂತಿಮವಾಗಿ ಕರ್ನಾಟಕದಲ್ಲಿ ಯಾವ ಸರ್ಕಾರ ರಚನೆಯಾಗುತ್ತದೆ ಎಂಬುದು ಜೆಡಿಎಸ್ ನಿಲುವಿನ ಮೇಲೆ ನಿರ್ಧಾರವಾಗಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಪೈಕಿ ಒಂದರ ಜತೆ ಕೈಜೋಡಿಸುವ ಮೂಲಕ ಅಕಾರ ಹಂಚಿಕೊಳ್ಳುವ ಅವಕಾಶ ಜೆಡಿಎಸ್ಗೆ ಬಂದೊದಗಲಿದೆ.

ಯಾವ ಪಕ್ಷದ ಜತೆ ಅಕಾರ ಹಂಚಿಕೊಳ್ಳಬೇಕು ಎಂಬುದು ಅಪ್ಪ-ಮಗನ (ಜೆಡಿಎಸ್ ವರಿಷ್ಠರಾದಎಚ್.ಡಿ.ದೇವೇಗೌಡಮತ್ತು ಎಚ್.ಡಿ.ಕುಮಾರಸ್ವಾಮಿ) ತೀರ್ಮಾನವನ್ನು ಅವಲಂಬಿಸಿದೆ. ಹಿಂದೆ 2004ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಅದಾದ ನಂತರ ಈಗ 2018ರಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎನ್ನುವ ಭವಿಷ್ಯವಾಣಿಯನ್ನು ಸಮೀಕ್ಷೆ ನುಡಿದಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕಳೆದ ಬಾರಿ 122 ಸ್ಥಾನ ಗಳಿಸುವ ಮೂಲಕ ಭರ್ಜರಿ ಜಯಭೇರಿ ಬಾರಿಸಿತ್ತು.
ಆದರೆ, ಈ ಬಾರಿ ಆಗಿನ ಜಯಭೇರಿ ಸಿಗುವುದಿಲ್ಲ. ಸುಮಾರು 34 ಸ್ಥಾನಗಳನ್ನು ಕಳೆದುಕೊಳ್ಳಬೇಕಾಗಿ ಬರಬಹುದು. ಹೈದ್ರಾಬಾದ್ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ತನ್ನ ಪ್ರಾಬಲ್ಯ ಮುಂದುವರೆಸುವ ಕಾಂಗ್ರೆಸ್ ಇತರ ಪ್ರದೇಶಗಳಲ್ಲಿ ಒಂದಿಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ರೈತರ ಸಾಲಮನ್ನಾ, ಅಹಿಂದ ವರ್ಗಗಳಿಗೆ ಕೈಗೊಂಡಿರುವ ಅನೇಕ ಕಲ್ಯಾಣ ಕಾರ್ಯಕ್ರಮಗಳು, ಚುನಾವಣಾ ವರ್ಷವಾದ ಈ ವರ್ಷ ಮಳೆ ಕೈಕೊಡದೆ ತುಸು ವಿಳಂಬವಾದರೂ ಸಾಕಷ್ಟು ಸುರಿದಿದ್ದು, ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ಕುರಿತ ಬೇಡಿಕೆಗೆ ಇಂಬು ಕೊಟ್ಟಿದ್ದು, ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಪ್ರಸ್ತಾಪ ಮತ್ತಿತರ ಅಂಶಗಳು ಕಾಂಗ್ರೆಸ್ ಪಕ್ಷವನ್ನು ಪ್ರತಿಪಕ್ಷಗಳ ನಿರೀಕ್ಷೆಯಷ್ಟು ಕುಸಿಯಲು ಬಿಡದೆ ಎತ್ತಿ ಹಿಡಿಯುವುದು ಸ್ಪಷ್ಟವಾಗಿದೆ.
ಇದೇ ವೇಳೆ ಕಾಂಗ್ರೆಸ್ ಪಕ್ಷ ಕಳೆದುಕೊಳ್ಳುವ ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಕಳೆದ ಚುನಾವಣೆಯಲ್ಲಿ ಪಕ್ಷದಿಂದ ದೂರವಾಗಿದ್ದ ಬಿ.ಎಸ್.ಯಡಿಯೂರಪ್ಪ (ಕೆಜೆಪಿ) ಮತ್ತು ಬಿ.ಶ್ರೀರಾಮುಲು (ಬಿಎಸ್ಸಾರ್ ಕಾಂಗ್ರೆಸ್) ಅವರ `ಘರ್ ವಾಪಸಿ' ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ. ಎಲ್ಲ ಮತಗಳು ಧ್ರುವೀಕರಣಗೊಂಡಿರುವುದರಿಂದ 40 ಸ್ಥಾನಗಳ ಸಾಮರ್ಥ್ಯ ಹೊಂದಿದ್ದ ಬಿಜೆಪಿ ಈ ಬಾರಿ 82ಕ್ಕೆ ಜಿಗಿಯಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮೂರು ಹೋಳಾಗಿದ್ದರಿಂದಲೇ ತೀರಾ ಕೆಳಮಟ್ಟಕ್ಕೆ ಕುಸಿದಿತ್ತು. ಸುಮಾರು 30ರಿಂದ 35 ಕ್ಷೇತ್ರಗಳಲ್ಲಿ ಕೆಜೆಪಿ ಮತ್ತು ಬಿಜೆಪಿ ಅಭ್ಯರ್ಥಿಗಳು ಬಿಜೆಪಿಗಿಂತ ಹೆಚ್ಚು ಮತ ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದಿದ್ದರು.
ಇದೆಲ್ಲದರ ಜತೆಗೆ ಇದೀಗ ರಾಜ್ಯ ಬಿಜೆಪಿಗೆ ಪ್ರಬಲವಾಗಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಮೋದಿ ಅವರ ವರ್ಚಸ್ಸು ಹಾಗೂ ಅವರ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಕೂಡ ರಾಜ್ಯ ಬಿಜೆಪಿಯ ಬೆಂಬಲಕ್ಕೆ ಬರಲಿವೆ. ಹೀಗಾಗಿ, ಬಿಜೆಪಿಯ ಬಲ ವೃದ್ಧಿಸಲಿದೆ. ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗಳಿಸಿದರೂ ಏಕಾಂಗಿಯಾಗಿ ಅಧಿಕಾರದ ಗದ್ದುಗೆ ಏರುವುದಕ್ಕೆ ಸಾಧ್ಯವಾಗುವುದಿಲ್ಲ. ಜೆಡಿಎಸ್ ಬೆಂಬಲ ಪಡೆದರೆ ಮಾತ್ರ ಅಧಿಕಾರ. ಇಲ್ಲದಿದ್ದರೆ ಕಷ್ಟ ಎಂಬಂತಿದೆ.
ಇನ್ನು ಜೆಡಿಎಸ್ 2004ರಲ್ಲಿ ಆದಂತೆ ಕಿಂಗ್ ಮೇಕರ್ ಆಗಲಿದೆ. ಆ ಪಕ್ಷದ ಸ್ಥಾನ ಗಳಿಕೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬರುವುದಿಲ್ಲ. ಕಳೆದ ಚುನಾವಣೆಯಲ್ಲಿ 40 ಸ್ಥಾನ ಗಳಿಸಿದ್ದ ಜೆಡಿಎಸ್ ಈ ಬಾರಿ 43 ಸ್ಥಾನ ಪಡೆಯಲಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳಲಿದೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಪರಿಶ್ರಮದ -ಲವಾಗಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಲಿದೆ ಎಂಬುದು ಸಮೀಕ್ಷೆಯಲ್ಲಿ ಹೊರಬಿದ್ದಿರುವ ಅಂಶ. ಜತೆಗೆ ಈ ಬಾರಿ ಸುಮಾರು 11 ಸ್ಥಾನಗಳು ಇತರರ ಪಾಲಾಗಲಿವೆ. ಕಳೆದ ಬಾರಿ ಕೆಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳು ಇದ್ದುದರಿಂದ ಇತರರ ಸಂಖ್ಯೆ 22ಕ್ಕೆ ಏರಿತ್ತು.
