ಬೆಂಗಳೂರು [ಜು.16] :  ಹಲವು ರೀತಿಯಲ್ಲಿ ಸುಳ್ಳುಗಳನ್ನು ಹೇಳಿ ಮೋಸ ಹಾಗೂ ವಂಚನೆ ಮಾಡಿದ ಆರೋಪ ಹೊತ್ತಿರುವ ಟಗರು ಸಿನಿಮಾದ ನಟ ವೈ.ಕೆ.ದೇವನಾಥ್‌ ಅಲಿಯಾಸ್‌ ಬೇಬಿ ಕೃಷ್ಣ ಎಂಬುವವರ ವಿರುದ್ಧದ ಕಾನೂನು ಹೋರಾಟದಲ್ಲಿ ಒಂದು ಹಂತದ ಜಯ ಗಳಿಸಿರುವ ಸಾಮಾಜಿಕ ಹೋರಾಟಗಾರ ಹಾಗೂ ಉದ್ಯಮಿ ಪ್ರಶಾಂತ್‌ ಸಂಬರಗಿ ಅವರು ಮತ್ತೊಂದು ಸುತ್ತಿನ ಕಾನೂನು ಹೋರಾಟ ಮುಂದುವರೆಸಿದ್ದಾರೆ.

ಈಗಾಗಲೇ ಒಂದಿಷ್ಟುಸಿನಿಮಾಗಳಲ್ಲಿ ನಟಿಸಿ ಬೇಬಿ ಕೃಷ್ಣ ಎಂದೇ ಗುರುತಿಸಿಕೊಂಡಿರುವ ವೈ.ಕೆ.ದೇವನಾಥ್‌ ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸೈಟ್‌ ಮಾರಾಟದ ವಿಚಾರದಲ್ಲಿ ತಮಗೆ 1.5 ಕೋಟಿ ರು. ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರಶಾಂತ್‌ ಸಂಬರಗಿ ದಾಖಲಿಸಿರುವ ದೂರು ಸ್ಥಳೀಯ ನ್ಯಾಯಾಲದಲ್ಲಿ ವಿಚಾರಣೆ ನಡೆಯುತ್ತಿದೆ.

ಸಿನಿಮಾ, ರಾಜಕಾರಣಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಗಳ ಜತೆಗೆ ಫೋಟೋಗಳನ್ನು ತೆಗೆಸಿಕೊಂಡು ಸಮಾಜದಲ್ಲಿ ತಾನೊಬ್ಬ ಗಣ್ಯ ವ್ಯಕ್ತಿ ಎಂದು ತೋರಿಸಿಕೊಳ್ಳುತ್ತಿರುವ ಬೇಬಿ ಕೃಷ್ಣ ಎಂಬುವವರು ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದಾರೆ. ಅದೇ ರೀತಿ ತಮಗೂ ಸೈಟ್‌ ಮಾರಾಟ ಮಾಡುವ ವಿಚಾರದಲ್ಲಿ ಸುಳ್ಳು ದಾಖಲೆಗಳನ್ನು ತೋರಿಸಿ 1.5 ಕೋಟಿ ರು. ವಂಚನೆ ಮಾಡಿದ್ದರು. ಈ ಬಗ್ಗೆ ದೂರು ನೀಡಿದ ಮೇಲೆ ಕೇಸು ದಾಖಲಿಸಿಕೊಂಡು ಬೇಬಿ ಕೃಷ್ಣ ಅವರನ್ನು ಬಂಧಿಸಲಾಯಿತು.

ಆದರೆ, ತಾನು ಯಾವುದೇ ತಪ್ಪು ಮಾಡಿಲ್ಲ. ತಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆಂದು ಸುಪ್ರೀಂಕೋರ್ಟ್‌ನಲ್ಲಿ ಬೇಬಿ ಕೃಷ್ಣ ಅರ್ಜಿ ಸಲ್ಲಿದ್ದರು. ದೂರುದಾರ ಸಲ್ಲಿಸಿದ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್‌ ಮತ್ತೆ ದೂರನ್ನು ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಹೀಗಾಗಿ ಬೇಬಿ ಕೃಷ್ಣ ವಂಚಕ ಎಂಬುದು ಸದ್ಯದಲ್ಲೇ ಸಾಬೀತು ಆಗಲಿದ್ದು, ಸದರಿ ವ್ಯಕ್ತಿಯ ಮೇಲಿನ ಅರೋಪ ವಿಚಾರಣೆ ನಡೆಯುತ್ತಿದೆ ಎಂದು ಪ್ರಶಾಂತ್‌ ಸಂಬರಗಿ ತಿಳಿಸಿದ್ದಾರೆ.

ತಮಗೆ ಜಾಗ ಮಾರಾಟ ಮಾಡುವ ವಿಚಾರದಲ್ಲಿ ವಂಚನೆ ಮಾಡಿದಂತೆ, ಚಿತ್ರರಂಗದಲ್ಲಿಯೂ ತಾನು ದೊಡ್ಡ ನಿರ್ಮಾಪಕ, ನಟ ಎಂದು ಹೇಳಿಕೊಂಡು ಸಿನಿಮಾ ಅವಕಾಶ ಕೊಡಿಸುತ್ತೇನೆ, ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಹೇಳಿ ಚಿತ್ರರಂಗಕ್ಕೆ ಹೊಸದಾಗಿ ಬರುತ್ತಿರುವವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಸದ್ಯಕ್ಕೆ ಜಾಮೀನು ಮೇಲೆ ಹೊರಗಿದ್ದು, ತನ್ನ ವಂಚನೆಯ ಕೆಲಸಗಳನ್ನು ಮುಂದುವರಿಸಿದ್ದಾರೆ. ಇವರ ಬಗ್ಗೆ ಚಿತ್ರರಂಗದವರು ಗಮನ ಹರಿಸಬೇಕು. ಇವರ ಮೋಸದ ಮಾತುಗಳಿಗೆ ಯಾರೂ ತುತ್ತಾಗಬಾರದು ಎಂದು ಪ್ರಶಾಂತ್‌ ಸಂಬರಗಿ ಕೇಳಿಕೊಂಡಿದ್ದಾರೆ. ಇತ್ತೀಚೆಗೆ ಬೇಬಿ ಕೃಷ್ಣ ಅವರು ದುನಿಯಾ ಸೂರಿ ನಿರ್ದೇಶನದ ‘ಟಗರು’ ಚಿತ್ರದಲ್ಲಿ ಪಾತ್ರ ಮಾಡಿದ್ದರು.