ಕೋಲ್ಕತಾ[ಜು.11]: 2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲ್ಲಿಸುವ ಹೊಣೆ ಹೊತ್ತಿರುವ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌, ಇದೀಗ ರಾಜ್ಯದ 5 ಲಕ್ಷ ಯುವಕರನ್ನು ರಾಜಕೀಯಕ್ಕೆ ಕರೆತರುವ ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ.

ರಾಜಕೀಯದಲ್ಲಿ ಯುವಕರು’ ಎಂಬ ಈ ಯೋಜನೆಯಡಿ ಪ್ರತಿ ದಿನ 5000 ಯುವಕರನ್ನು ಪಕ್ಷಕ್ಕೆ ಸೇರಿಸುವ ಗುರಿ ಹಾಕಿಕೊಳ್ಳಲಾಗಿದೆ. ಮುಂದಿನ ಸೆಪ್ಟೆಂಬರ್‌ ವೇಳೆ ಈ ಸದಸ್ಯತ್ವ ನೋಂದಣಿ ಮೂಲಕ ಒಟ್ಟು 5 ಲಕ್ಷ ಯುವಕರನ್ನು ಪಕ್ಷಕ್ಕೆ ಸೇರಿಸಿಕೊಳಲು ಉದ್ದೇಶಿಸಲಾಗಿದೆ. ಬಳಿಕ ಈ ಎಲ್ಲಾ 5 ಲಕ್ಷ ಯುವಕರಿಗೆ ಚುನಾವಣೆ ಗೆಲ್ಲುವ ರಣತಂತ್ರದ ಕುರಿತು ಮುಂದಿನ 15 ತಿಂಗಳ ಅವಧಿಯಲ್ಲಿ ತರಬೇತಿ ನೀಡಲಾಗುವುದು. ತರಬೇತಿ ಬಳಿಕ ಈ ಯುವಕರು ತಾವು ಬಯಸಿದ ಯಾವುದೇ ರಾಜಕೀಯ ಪಕ್ಷವನ್ನು ಸೇರಿಕೊಳ್ಳಬಹುದಾಗಿದೆ.

ಮೋದಿಗೆ ಹೆದರಿದ ದೀದಿ: ಬಂಗಾಳ ಉಳಿಸಿಕೊಳ್ಳಲು ಚುನಾವಣಾ ತಂತ್ರಗಾರನ ಮೊರೆ!

ಈ ನೇಮಕಾತಿ ನೇರವಾಗಿ ಟಿಎಂಸಿಗೆ ಸೇರಿದ್ದು ಎಂದು ಪ್ರಶಾಂತ್‌ ಕಿಶೋರ್‌ ಹೇಳಿಲ್ಲವಾದರೂ, ಈ ಯುವ ಪಡೆ ಮುಂದಿನ ದಿನಗಳಲ್ಲಿ ಟಿಎಂಸಿಗೆ ಹೊಸ ಶಕ್ತಿಯಾಗಿ ಸೇರ್ಪಡೆಯಾಗಲಿದೆ ಎಂಬ ವಿಶ್ವಾಸವಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 42 ಸ್ಥಾನಗಳ ಪೈಕಿ ಬಿಜೆಪಿ 18 ಸ್ಥಾನ ಗೆಲ್ಲುವ ಮೂಲಕ ಟಿಎಂಸಿಗೆ ಆಘಾತ ನೀಡಿತ್ತು. ಹೀಗಾಗಿ ಟಿಎಂಸಿ, ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಶಾಂತ್‌ ಕಿಶೋರ್‌ ಅವರ ತಂಡದ ನೆರವು ಪಡೆಯಲು ನಿರ್ಧರಿಸಿತ್ತು.