Asianet Suvarna News Asianet Suvarna News

ಮೋದಿಗೆ ಹೆದರಿದ ದೀದಿ: ಬಂಗಾಳ ಉಳಿಸಿಕೊಳ್ಳಲು ಚುನಾವಣಾ ತಂತ್ರಗಾರನ ಮೊರೆ!

ಬಂಗಾಳ ಅಧಿಕಾರ ಉಳಿಸಿಕೊಳ್ಳಲು ಚುನಾವಣಾ ತಂತ್ರಗಾರನಿಗೆ ದೀದಿ ಮೊರೆ| ಮೋದಿ, ನಿತೀಶ್, ಜಗನ್ ಗೆಲ್ಲಿಸಿದವನಿಗೆ ದೀದಿ ಮಣೆ

mamata Banerjee Hires Poll Strategist Prashant Kishor
Author
Bangalore, First Published Jun 7, 2019, 8:50 AM IST

ಕೋಲ್ಕತಾ[ಜೂ.07]: ಪಶ್ಚಿಮ ಬಂಗಾಳದಲ್ಲಿ ದಿಢೀರ್‌ ಬಲ ವೃದ್ಧಿಸಿಕೊಂಡಿರುವ, 2021ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ತಂತ್ರಗಾರ ಖ್ಯಾತಿಯ ಪ್ರಶಾಂತ್‌ ಕಿಶೋರ್‌ ಮೊರೆ ಹೋಗಿದ್ದಾರೆ.

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್ಸಾರ್‌ ಕಾಂಗ್ರೆಸ್‌ ಮುಖ್ಯಸ್ಥ ಜಗನ್ಮೋಹನ ರೆಡ್ಡಿ ದಿಗ್ವಿಜಯದ ಹಿಂದೆ ಪ್ರಶಾಂತ್‌ ಕಿಶೋರ್‌ ಪಾತ್ರವೂ ಇದೆ. ಈ ಹಿನ್ನೆಲೆಯಲ್ಲಿ ಗುರುವಾರ ಕೋಲ್ಕತಾಗೆ ಪ್ರಶಾಂತ್‌ ಕಿಶೋರ್‌ ಅವರನ್ನು ಕರೆಸಿಕೊಂಡಿರುವ ತೃಣಮೂಲ ಕಾಂಗ್ರೆಸ್‌ ಅಧಿನಾಯಕಿಯೂ ಆಗಿರುವ ಮಮತಾ ಬ್ಯಾನರ್ಜಿ, ಸುಮಾರು 2 ತಾಸು ಮಾತುಕತೆ ನಡೆಸಿದ್ದಾರೆ. ಕಿಶೋರ್‌ ಅವರಿಂದ ಸಹಾಯ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯುನ ನಿತೀಶ್‌ ಕುಮಾರ್‌ ಅವರಿಗೆ ಪ್ರಶಾಂತ್‌ ಕಿಶೋರ್‌ ನೆರವಾಗಿದ್ದರು. 2017ರ ಪಂಜಾಬ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದರ ಹಿಂದೆ ಕಿಶೋರ್‌ ಶ್ರಮವಿತ್ತಾದರೂ, ಉತ್ತರಪ್ರದೇಶದಲ್ಲಿ ಅವರ ಯಾವುದೇ ತಂತ್ರ ಫಲ ನೀಡದೇ ಕಾಂಗ್ರೆಸ್‌ ಹೀನಾಯ ಸೋಲು ಕಂಡಿತ್ತು. ಆಂಧ್ರದಲ್ಲಿ ಜಗನ್ಮೋಹನ ರೆಡ್ಡಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿದ್ದಂತೆ ಪ್ರಶಾಂತ್‌ ಕಿಶೋರ್‌ ಅವರಿಗೆ ಬೇಡಿಕೆ ಹೆಚ್ಚಾಗತೊಡಗಿದೆ.

mamata Banerjee Hires Poll Strategist Prashant Kishor

2014ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಕೇವಲ 2ರಲ್ಲಿ ಮಾತ್ರವೇ ಗೆದ್ದಿದ್ದ ಬಿಜೆಪಿ ಈ ಬಾರಿ 18 ಸ್ಥಾನಗಳನ್ನು ಕಬಳಿಸಿತ್ತು. 34 ಸ್ಥಾನಗಳನ್ನು ಹೊಂದಿದ್ದ ತೃಣಮೂಲ ಕಾಂಗ್ರೆಸ್ಸಿನ ಬಲ 22ಕ್ಕೆ ಇಳಿಕೆಯಾಗಿತ್ತು. 294 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಬಹುಮತಕ್ಕೆ 148 ಸ್ಥಾನಗಳು ಬೇಕು. ಆದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 130 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಇದು ಮಮತಾ ಅವರ ಚಿಂತೆಗೆ ಕಾರಣವಾಗಿದೆ. 2021ಕ್ಕೆ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ.

Follow Us:
Download App:
  • android
  • ios