ನವದೆಹಲಿ (ಡಿ.26): ಮಾಜಿ ರಾಷ್ಟ್ರಪತಿಗಳಿಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಹೊಗಳಿಕೆಯ ಮಳೆ ಸುರಿಸಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಎರಡು ಪ್ರತ್ಯೇಕ ಪೋಸ್ಟ್‌ಗಳಲ್ಲಿ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್‌ ಮತ್ತು ಪ್ರಣಬ್‌ ಮುಖರ್ಜಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ ಎಂದು ಹೇಳಲಾಗಿದೆ. ‘ನಾನು ಕಾಂಗ್ರೆಸ್‌ ಪಕ್ಷದವಳಾಗಿದ್ದರೂ ಭಾರತದ ಒಬ್ಬ ಸಮಾಜ ಸೇವಕಿಯಾಗಿ ನರೇಂದ್ರ ಮೋದಿ ಒಬ್ಬರೇ ದೇಶವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಬಲ್ಲರು ಎಂದು ಹೇಳುತ್ತೇನೆ. ಕಾರಣ ಅವರಲ್ಲಿ ಭಾರತೀಯರಿಗೆ, ಭಾರತಕ್ಕೆ ಸಹಾಯವಾಗುವ ಸಮರ್ಥ ನಿರ್ಣಯ ತೆಗೆದುಕೊಂಡು ಅದನ್ನು ಜಾರಿ ಮಾಡುವ ಮಹತ್ತರ ಶಕ್ತಿ ಇದೆ’ ಎಂದು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಹೇಳಿದ್ದಾರೆ ಎನ್ನಲಾದ ಸಂದೇಶವು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇದೇ ರೀತಿ ‘ಸರಿಯಾದ ಸಮಸ್ಯೆ ಮೋದಿ ಪ್ರಧಾನಿಯಾಗದೆ ಇದ್ದಿದ್ದರೆ ಕಾಂಗ್ರೆಸ್‌ ಪಕ್ಷ ಇಡೀ ದೇಶವನ್ನು ನಾಶ ಮಾಡಿಬಿಡುತ್ತಿತ್ತು’ ಎಂದು ಪ್ರಣಬ್‌ ಮುಖರ್ಜಿ ಹೇಳಿದ್ದಾರೆ ಎಂಬ ಸಂದೇಶ ಕೂಡ ವೈರಲ್‌ ಆಗುತ್ತಿದೆ. ಆದರೆ ಮಾಜಿ ರಾಷ್ಟ್ರಪತಿಗಳಿಬ್ಬರು ನಿಜಕ್ಕೂ ಹೀಗೆ ಹೇಳಿದ್ದಾರೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ದಿ ಕ್ವಿಂಟ್‌ ಇಬ್ಬರು ಮಾಜಿ ರಾಷ್ಟ್ರಪತಿಗಳ ಕಚೇರಿಯಲ್ಲಿ ಸ್ಪಷ್ಟೀಕರಣ ಪಡೆದಿದ್ದು, ‘ಈ ಸುದ್ದಿ ಸಂಪೂರ್ಣ ಸುಳ್ಳು’ ಎಂದು ಎರಡೂ ಮಾಜಿ ರಾಷ್ಟ್ರಪತಿಗಳ ಕಚೇರಿ ಸ್ಪಷ್ಟಪಡಿಸಿದೆ. ಅಲ್ಲಿಗೆ ಪ್ರಣಬ್‌ ಮುಖರ್ಜಿ ಮತ್ತು ಪ್ರತಿಭಾ ಪಾಟೀಲ್‌ ಮೋದಿ ಅವರನ್ನು ಹೊಗಳಿದ್ದಾರೆ ಎಂಬ ಸುದ್ದಿ ಸುಳ್ಳು.

-ವೈರಲ್ ಚೆಕ್