ಪ್ರಧಾನಿ ಮೋದಿ ವಿರುದ್ಧ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌರಿ ಹತ್ಯೆ ವಿಷಯದಲ್ಲಿ ಮೋದಿ ಮೌನವಾಗಿದ್ದಾರೆ. ಮೋದಿ ಫಾಲೋಯರ್ಸ್ ಗೌರಿ ಸಾವನ್ನು ಸಂಭ್ರಮಿಸಿದ್ದಾರೆಂದು ಕಿಡಿಕಾರಿದ್ದಾರೆ. ಈ ಸಂಬಂಧ ತಮಗೆ ಬಂದಿರುವ ಪ್ರಶಸ್ತಿಗಳನ್ನೆಲ್ಲ ವಾಪಸ್ ನೀಡ್ತಾರೆ ಎಂದು ಹಬ್ಬಿದ್ದ ವದಂತಿಗೆ ಪ್ರಕಾಶ್ ರಾಜ್ ತೆರೆ ಎಳೆದಿದ್ದಾರೆ.
ಬೆಂಗಳೂರು(ಅ.03): ಗೌರಿ ಲಂಕೇಶ್ ಹತ್ಯೆಯ ನಂತರ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಭಾರೀ ಸುದ್ದಿಯಲ್ಲಿದ್ದಾರೆ. ಅದರಲ್ಲೂ ನಿನ್ನೆ ನಡೆದ ಡಿವೈಎಫ್ಐ ಸಂಘಟನೆಯ ಸಮಾವೇಶದಲ್ಲಿ ಪ್ರಕಾಶ್ ರಾಜ್ ಆಡಿದ ಮಾತು, ಬಲಪಂಥೀಯರನ್ನ ಕೆರಳಿಸಿದೆ. ಮೋದಿಯವರ ಹೆಸರನ್ನ ಗೌರಿ ಹತ್ಯೆ ಕೇಸ್'ನಲ್ಲಿ ಎಳೆದುತಂದಿರುವುದು ಹಲವರನ್ನ ಕೆರಳಿಸಿದೆ. ಇದು ಎಡ-ಬಲ ಸಂಘರ್ಷಕ್ಕೆ ಕಾರಣವಾಗಿದೆ.
ಮೋದಿ ವಿರುದ್ಧ ಗರಂ..!
ಗೌರಿ ಲಂಕೇಶ್ ಹತ್ಯೆ ವಿಚಾರ ತುಂಬಾ ನೋವು ತಂದಿದೆ ಎಂದಿರುವ ನಟ ಪ್ರಕಾಶ್ ರಾಜ್, ಮೋದಿ ಫಾಲೋಯರ್ಸ್ ಗೌರಿ ಸಾವನ್ನ ಸಂಭ್ರಮಿಸಿದ್ದಾರೆ. ಇಷ್ಟಾದರೂ ಪ್ರಧಾನಿ ಮೋದಿ ಗೌರಿ ಹತ್ಯೆ ಬಗ್ಗೆ ಯಾಕೆ ಮೌನವಹಿಸಿದ್ದಾರೆ ಅಂತಾ ಗೊತ್ತಾಗ್ತಿಲ್ಲ, ಮೋದಿ ನನಗಿಂತ ದೊಡ್ಡ ನಟ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು, ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುವ ವಿಕೃತ ಮನಸ್ಸುಳ್ಳವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ ಅಂತಾ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿನಾನು ನನ್ನ ಪ್ರಶಸ್ತಿಗಳನ್ನ ವಾಪಸ್ ಕೊಡ್ತೇನೆ ಅಂತಾ, ನಟ ಪ್ರಕಾಶ್ ರಾಜ್ ಹೇಳಿದ್ದಾರೆಂಬ ವದಂತಿ ಹಬ್ಬಿತ್ತು. ಈ ವದಂತಿಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, ಪ್ರಶಸ್ತಿಗಳು ನನ್ನ ಕೆಲಸಕ್ಕೆ, ನನ್ನ ಶ್ರಮಕ್ಕೆ ಸಂದ ಗೌರವ. ಪ್ರಶಸ್ತಿಗಳನ್ನು ವಾಪಸ್ ಕೊಡುವಷ್ಟು ದಡ್ಡ ನಾನಲ್ಲ ಎಂದು ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆಯ ಬಳಿಕ ಅಂತಿಮ ಸಂಸ್ಕಾರದ ದಿನ ಕಣ್ಣೀರಿಟ್ಟಿದ್ದ ಪ್ರಕಾಶ್ ರಾಜ್, ಗೌರಿ ಸಾವಿಗೆ ನ್ಯಾಯ ಸಿಗಬೇಕೆಂದು ಹೋರಾಟದಲ್ಲಿ ಭಾಗಿಯಾಗಿದ್ರು. ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನ ಗೌರಿ ಹತ್ಯೆಯನ್ನ ಸಂಭ್ರಮಿಸಿದ್ದವರ ವಿರುದ್ಧ ಅಂದಿನಿಂದ ಗುಡುತ್ತಲೇ ಇದ್ದಾರೆ. ಅಲ್ಲದೇ ನಾನು ಗೌರಿ ಸಮಾವೇಶದಲ್ಲೂ ಪಾಲ್ಗೊಂಡಿದ್ರು.
ಗೌರಿ ಲಂಕೇಶ್ ಹತ್ಯೆಯ ನಂತರ ಎಡ-ಬಲ ಸಮರಕ್ಕೆ ಕಾರಣರಾಗಿದ್ದು ಪ್ರಕಾಶ್ ರಾಜ್.. ಅದರಲ್ಲೂ ಇದೀಗ, ಮೋದಿ ವಿರುದ್ಧವೇ ಬೊಟ್ಟು ಮಾಡಿರುವ ರಾಜ್ ವಿರುದ್ಧ ಮೋದಿ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ರಾಜ್ಯ ಸರ್ಕಾರ ವಿರುದ್ಧ ಮಾತನಾಡುವುದನ್ನ ಬಿಟ್ಟು ಮೋದಿ ಮೇಲೇಕೆ ನಿಮ್ಮ ಮುನಿಸು ಎಂದು ಪ್ರಶ್ನಿಸಿದ್ದಾರೆ. ನಾಡು ನುಡಿಯ ವಿಷಯ ಬಂದಾಗ ಇಲ್ಲದ ನಿಮ್ಮ ಬೆಂಬಲ ಈಗೇಕೆ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ.
ಗೌರಿ ಹತ್ಯೆಯ ನಂತರ ಜೋರಾಗಿರುವ ಎಡ-ಬಲ ಸಂಘರ್ಷಕ್ಕೆ ಇದೀಗ ಪ್ರಕಾಶ್ ರೈ ಹೇಳಿಕೆಗಳು ಕಿಚ್ಚು ಹಚ್ಚಿದೆ. ಲೆಫ್ಟ್ VS ರೈಟ್ ಗುದ್ದಾಟ ಜೋರಾಗಿದೆ.
