Asianet Suvarna News Asianet Suvarna News

ನಮ್ಮ ಸ್ವಾರ್ಥಕ್ಕಾದರೂ ಕಾಡು ರಕ್ಷಿಸೋಣ: ಪ್ರಕಾಶ್ ರೈ

ಸರ್ಕಾರದ ಬಿಗಿ ಕ್ರಮಗಳಿಂದಾಗಿ ಹುಲಿ, ಆನೆ ಮತ್ತಿತರ ವನ್ಯಜೀವಿಗಳ ಸಂತತಿ ಹೆಚ್ಚಳಗೊಂಡಿದೆ. ಒಂದು ಕಾಲದಲ್ಲಿ ಇವೆಲ್ಲವೂ ಅವನತಿಯಾಗಿಯೇ ಬಿಟ್ಟಿತು ಎನ್ನುವ ಆತಂಕ ನಮ್ಮಲ್ಲಿ ಮನೆ ಮಾಡಿತ್ತು. ಆದರೆ, ಉತ್ತಮ ಸಂರಕ್ಷಣಾ ಕ್ರಮಗಳಿಂದಾಗಿ ಈಗ ಅವುಗಳ ಸಂತತಿ ಅಭಿವೃದ್ಧಿಯಾಗಿದೆ. ಆದರೆ, ಈಗ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳಗೊಂಡಿದೆ. ಇದಕ್ಕೆ ತುರ್ತು ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ರೈ ಹೇಳಿದರು.

prakash rai in save wildlife campaign at kollegal
  • Facebook
  • Twitter
  • Whatsapp

ಬೆಂಗಳೂರು: ನಮ್ಮ ಕೃಷಿ, ನಮ್ಮ ಆಹಾರ, ನಮ್ಮ ಸಂಸ್ಕೃತಿಯ ಜತೆಗೆ ನಮ್ಮನ್ನು ನಾವು ಉಳಿಸಿಕೊಳ್ಳುವ ಸ್ವಾರ್ಥಕ್ಕಾದರೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಖ್ಯಾತ ನಟ ಪ್ರಕಾಶ್‌ ರೈ ಅಭಿಪ್ರಾಯಪಟ್ಟರು.

‘ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌', ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಅರಣ್ಯ ಇಲಾಖೆ ಸಹಕಾರದಲ್ಲಿ ಹಮ್ಮಿಕೊಂಡಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ ಅಂಗವಾಗಿ ಕೊಳ್ಳೇಗಾಲ ತಾಲೂಕಿನ ಒಡೆಯರಪಾಳ್ಯ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಸರ್ಕಾರದ ಬಿಗಿ ಕ್ರಮಗಳಿಂದಾಗಿ ಹುಲಿ, ಆನೆ ಮತ್ತಿತರ ವನ್ಯಜೀವಿಗಳ ಸಂತತಿ ಹೆಚ್ಚಳಗೊಂಡಿದೆ. ಒಂದು ಕಾಲದಲ್ಲಿ ಇವೆಲ್ಲವೂ ಅವನತಿಯಾಗಿಯೇ ಬಿಟ್ಟಿತು ಎನ್ನುವ ಆತಂಕ ನಮ್ಮಲ್ಲಿ ಮನೆ ಮಾಡಿತ್ತು. ಆದರೆ, ಉತ್ತಮ ಸಂರಕ್ಷಣಾ ಕ್ರಮಗಳಿಂದಾಗಿ ಈಗ ಅವುಗಳ ಸಂತತಿ ಅಭಿವೃದ್ಧಿಯಾಗಿದೆ. ಆದರೆ, ಈಗ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳಗೊಂಡಿದೆ. ಇದಕ್ಕೆ ತುರ್ತು ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ರೈ ಹೇಳಿದರು.

ನಾವು ಶತಮಾನಗಳಿಂದಲೂ ವನ್ಯಜೀವಿಗಳ ಜತೆ ಜತೆಗೆ ಬಾಳುತ್ತಾ ಬಂದಿದ್ದೇವೆ. ಈಗ ಮಾತ್ರ ನಿಮ್ಮ ಆನೆ-ನಮ್ಮ ದನ, ನಿಮ್ಮ ಹುಲಿ-ನಮ್ಮ ಕುರಿ ಎನ್ನುತ್ತಾ ವನ್ಯಜೀವಿಗಳ ಬಗ್ಗೆ ವಿಪರೀತ ಅಸಹನೆ ತುಂಬಿಕೊಳ್ಳುತ್ತಿದ್ದೇವೆ. ಸಹಬಾಳ್ವೆ ಅತ್ಯಂತ ಮುಖ್ಯ. ಅರಣ್ಯ ಉಳಿಸಿಕೊಂಡು ವನ್ಯಜೀವಿಗಳನ್ನು ಕಾಪಾಡಿಕೊಂಡು ಹೋಗುವುದರಿಂದ ನಮ್ಮ ಭವಿಷ್ಯವೂ ಚೆನ್ನಾಗಿರಲಿದೆ. ಪರಿಸರದ ಉಳಿವಿನಿಂದ ಮಾತ್ರ ಮನುಕುಲದ ಉಳಿವು ಸಾಧ್ಯ. ನಮ್ಮ ಸ್ವಾರ್ಥಕ್ಕಾದರೂ ನಾವು ಪರಿಸರ ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ ಎಂದರು.

prakash rai in save wildlife campaign at kollegal

ದುಪ್ಪಟ್ಟು ಸಂಕಷ್ಟ: ಕಾಡಂಚಿನ ಗ್ರಾಮಗಳಲ್ಲಿ ಬದುಕುತ್ತಿರುವ ನಮ್ಮ ರೈತಾಪಿ ಮಂದಿ ತಾಳ್ಮೆಯುಳ್ಳ ವರು. ಕೃಷಿ ಮಾಡುವ ವಿಚಾರದಲ್ಲಿ ಉಳಿದ ರೈತರಿಗಿಂತ ದುಪ್ಪಟ್ಟು ಪ್ರಮಾಣದ ಸಂಕಷ್ಟವನ್ನು ಈ ರೈತರು ಎದುರಿಸುತ್ತಿದ್ದಾರೆ. ಆದರೂ, ಸಹನೆಯಿಂದ ಕೃಷಿ ಮಾಡಿ ಅರಣ್ಯ ಮತ್ತು ವನ್ಯಜೀವಿಗಳ ಜತೆಗೆ ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ ಎಂದು ಶಾಸಕ ಆರ್‌. ನರೇಂದ್ರ ಇದೇ ಸಂದರ್ಭದಲ್ಲಿ ಹೇಳಿದರು.

ಅರಣ್ಯ ಇಲಾಖೆ ಕೆಲ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಕಾಡಂಚಿನ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಪಟ್ಟಿಮಾಡಿ ಆದ್ಯತೆ ಮೇರೆಗೆ ಪರಿಹರಿಸಬೇಕು ಎಂದು ನರೇಂದ್ರ ತಿಳಿಸಿದರು.

ಚಿತ್ರನಟಿ ಮಯೂರಿ ಮಾತನಾಡಿ, ಇದೇ ಮೊದಲ ಬಾರಿಗೆ ಇಂತಹ ಅಭಿಯಾನದಲ್ಲಿ ಪಾಲ್ಗೊ ಳ್ಳುತ್ತಿದ್ದೇನೆ. ನಮ್ಮಲ್ಲಿ ಅನೇಕರು ವನ್ಯಜೀವಿಗಳು, ಅರಣ್ಯ ಸಂರಕ್ಷಣೆ ಬಗ್ಗೆ ಮಾತನಾಡುವುದನ್ನು ರೂಢಿ ಮಾಡಿಕೊಂಡಿದ್ದೇವೆ. ನಾವು ಈ ಅಭಿಯಾನದಲ್ಲಿ ಪಾಲ್ಗೊಂಡ ಮೇಲೆ ಅರಣ್ಯ ಸಂರಕ್ಷಣೆಯ ಸವಾಲುಗಳು, ಕಾಡಂಚಿನ ಗ್ರಾಮಗಳಲ್ಲಿನ ನಿತ್ಯ ಸಂಕಷ್ಟದ ಸಮಸ್ಯೆಗಳು ಅರಿವಿಗೆ ಬಂದವು.

ಎರಡು ದಿನಗಳ ಈ ಅಭಿಯಾನದ ಅಂಗವಾಗಿ ಚಿತ್ರನಟ ಪ್ರಕಾಶ್‌ ರೈ ಮತ್ತು ಮಯೂರಿ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಕೆ.ಗುಡಿ ವಲಯದಲ್ಲಿ ಸಫಾರಿ ಮಾಡಿದ ಗಣ್ಯರು ನಾನಾ ಕಡೆಗೆ ಭೇಟಿ ಕಾಡಿನ ಪರಿಚಯ ಮಾಡಿಕೊಂಡರು. ನಂತರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಾರ್ಡ್‌, ವಾಚರ್‌, ಡಿಆರ್‌ಎಫ್‌ಒ ಮತ್ತು ವಲಯ ಅರಣ್ಯಾಧಿಕಾರಿಗಳ ಜತೆ ಸಂವಾದ ನಡೆಸಿದರು. ಅರಣ್ಯ ಸಿಬ್ಬಂದಿ ತಾವು ಎದುರಿಸುತ್ತಿರುವ ಸವಾಲುಗಳು ಹಾಗೂ ಸಂಕಷ್ಟಗಳನ್ನು ಈ ವೇಳೆ ತಂಡದ ಜತೆಗೆ ಹಂಚಿಕೊಂಡರು. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಹಾಗೂ ವನ್ಯಜೀವಿ ಮಂಡಳಿ ಸದಸ್ಯರಾಗಿದ್ದ ಮಲ್ಲೇಶಪ್ಪ ಇದ್ದರು.

ಸೋಲಿಗರ ಕಾಲೊನಿಗೆ ರೈ ಭೇಟಿ: ನಂತರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಕನ್ನೇರಿ ಸೋಲಿಗರ ಕಾಲೊನಿಗೆ ಪ್ರಕಾಶ್‌ ರೈ ಮತ್ತು ಮಯೂರಿ ಭೇಟಿ ಕೊಟ್ಟರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರಸ್ವಾಮಿ, ಕೆ.ಗುಡಿ ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್‌ ಮತ್ತು ಬೈಲೂರು ವಲಯ ಅರಣ್ಯಾಧಿಕಾರಿ ಮಂಜುನಾಥ ಈ ಸಂದರ್ಭದಲ್ಲಿ ಹಾಜರಿದ್ದರು.

ಹುತ್ತೂರು ಗ್ರಾಪಂಗೆ ಪ್ರಶಸ್ತಿ
ಕೊಳ್ಳೇಗಾಲ ತಾಲೂಕಿನ ಹುತ್ತೂರು ಗ್ರಾಪಂಗೆ ಇದೇ ಸಂದರ್ಭದಲ್ಲಿ ‘ಅತ್ಯುತ್ತಮ ಅರಣ್ಯ ಸ್ನೇಹಿ ಗ್ರಾಮ ಪಂಚಾಯ್ತಿ' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಕಾಶ್‌ ರೈ, ಹನೂರು ಶಾಸಕರಾದ ಆರ್‌. ನರೇಂದ್ರ ಮತ್ತು ಚಿತ್ರನಟಿ ಮಯೂರಿ ಪ್ರದಾನ ಮಾಡಿದರು. ಹುತ್ತೂರು ಗ್ರಾಪಂ ಅಧ್ಯಕ್ಷರಾದ ಬಸವಣ್ಣ ಹಾಗೂ ಉಪಾ ಧ್ಯಕ್ಷರಾದ ಶಾಂತಿ ಪ್ರಶಸ್ತಿ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios