ಸಾಮಾಜಿಕ ಜಾಲ ತಾಣ ಟ್ವಿಟರ್‌ನಲ್ಲಿ ಪ್ರಧಾನಿಯನ್ನು ಫಾಲೋ ಮಾಡುವವರು ಪತ್ರಕರ್ತೆ ಗೌರಿ ಲಂಕೇಶ್‌ರ ಹತ್ಯೆಬಗ್ಗೆ ಸಂಭ್ರಮಿಸುತ್ತಿದ್ದರೂ ನರೇಂದ್ರ ಮೋದಿ ಮೌನಕ್ಕೆ ಶರಣಾಗಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಟೀಕಿಸಿದ್ದಾರೆ.

ಬೆಂಗಳೂರು: ಸಾಮಾಜಿಕ ಜಾಲ ತಾಣ ಟ್ವಿಟರ್‌ನಲ್ಲಿ ಪ್ರಧಾನಿಯನ್ನು ಫಾಲೋ ಮಾಡುವವರು ಪತ್ರಕರ್ತೆ ಗೌರಿ ಲಂಕೇಶ್‌ರ ಹತ್ಯೆಬಗ್ಗೆ ಸಂಭ್ರಮಿಸುತ್ತಿದ್ದರೂ ನರೇಂದ್ರ ಮೋದಿ ಮೌನಕ್ಕೆ ಶರಣಾಗಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಟೀಕಿಸಿದ್ದಾರೆ.

ಭಾನುವಾರ ನಗರದಲ್ಲಿ ಆಯೋಜಿಸಿದ್ದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) 11ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಗೌರಿ ಹತ್ಯೆ ಮಾಡಿದವರು ಯಾರೆಂದು ಗೊತ್ತಿಲ್ಲ. ಆದರೆ, ಹತ್ಯೆಯನ್ನು ಸಂಭ್ರಮಿಸಿದವರು ಯಾರೆಂಬುದು ಎಲ್ಲರಿಗೂ ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಇದ್ದರೂ ಪ್ರಧಾನಿ ಕಣ್ಣು ಮುಚ್ಚಿ ಕುಳಿತು ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹಣ ಬಲ, ಜಾತಿ ಬಲ ಹಾಗೂ ತೋಳ್ಬಲದಿಂದ ಚುನಾವಣೆಗಳಲ್ಲಿ ಗೆಲ್ಲಬಹುದು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಟಿವಿ ಮುಂದೆ ಕುಳಿತು ನಿಯಮಗಳ ಬಗ್ಗೆ ಚರ್ಚೆಯಾಗುತ್ತಿದೆ. ನಮ್ಮ ಜೀವನ ಪ್ರತಿ ಆಗುಹೋಗುಗಳಿಗೆ ರಾಜಕಾರಣವೇ ಕಾರಣವಾಗಿದ್ದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ಮಕ್ಕಳಿಗೆ ಹಾಲು ಕೊಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ಕೆಲ ಪೋಷಕರಿದ್ದಾರೆ. ಇಂತಹ ಸಂದರ್ಭದಲ್ಲಿ ನಟ ನಟಿಯರ ಭಾವ ಚಿತ್ರಗಳಿಗೆ ಹಾಲಿನ ಅಭಿಷೇಕ ಮಾಡುತ್ತಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಇದೇ ವೇಳೆ ರೈ ಪ್ರಶ್ನಿಸಿದರು.

24 ಬಾರಿ ಪೆಟ್ರೋಲ್ ಏರಿಕೆ: ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ ಮಹಮ್ಮದ್ ರಿಯಾಜ್ ಮಾತನಾಡಿ, ಪ್ರಸ್ತುತ ಅಪಾಯಕರ ಸನ್ನಿವೇಶದಲ್ಲಿ ನಾವು ಜೀವಿಸುತ್ತಿದ್ದೇವೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಮೇಲೆ ದಾಳಿ ನಡೆಯುತ್ತಿದೆ. ಅಸಹಿಷ್ಣುತೆ ವ್ಯಾಪಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ ಮೂರು ವರ್ಷದಲ್ಲಿ 24 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಚುನಾವಣೆ ವೇಳೆ ಮೋದಿ ಬೆಲೆ ಏರಿಕೆ ನಿಯಂತ್ರಿಸುವುದಾಗಿ ಹೇಳಿದರು. ಆದರೆ, ಬೆಲೆ ಏರಿಕೆ ಬಗ್ಗೆ ಈಗ ಮಾತನಾಡುತ್ತಿಲ್ಲ ಎಂದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಾಳ್ಳ ಮಾತನಾಡಿ, ಕರಾವಳಿ ಯುದ್ಧಭೂಮಿಯಾಗಿ ಪರಿವರ್ತನೆಯಾಗುತ್ತಿದ್ದು, ಕೋಮುವಾದ ಬಿತ್ತಲಾಗುತ್ತಿದೆ. ಅದರ ವಿರುದ್ಧ ಹೋರಾಡಬೇಕಾಗಿದೆ ಎಂದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಡಿವೈಎಫ್‌ಐ ಅಖಿಲ ಭಾರತ ಉಪಾಧ್ಯಕ್ಷರಾದ ದೀಪಾ, ರಾಜ್ಯ ಕಾರ್ಯದರ್ಶಿ ಬಿ. ರಾಜಶೇಖರ ಮೂರ್ತಿ, ರಾಜ್ಯ ಸಮಿತಿ ಸದಸ್ಯರು ಸಂತೋಷ್ ಬಜಾಲ್, ರಾಜ್ಯ ಸಮಿತಿ ಸದಸ್ಯ ಬಸವರಾಜ ಪೂಜಾರ್ ಹಾಜರಿದ್ದರು. ಸೌಹಾರ್ದ ಮೆರವಣಿಗೆ: ಸಮ್ಮೇಳನಕ್ಕೂ ಮುನ್ನ ಮೈಸೂರು ಬ್ಯಾಂಕ್ ವೃತ್ತದ ಐತಿಹಾಸಿಕ ಹುತಾತ್ಮ ಸ್ಮಾರಕದಿಂದ ಸೌಹಾರ್ದ ಮೆರವಣಿಗೆ ನಡೆಯಿತು.