ಚಾಮರಾಜನಗರ(ಮೇ 30): ಕಾಡು ಹಾಗೂ ಕಾಡು ಪ್ರಾಣಿಗಳ ಬಗ್ಗೆ ಕಾಡಂಚಿನ ಜನರಿಗೆ ಹರಿವು ಮೂಡಿಸುವ ಕಾರ್ಯಕ್ರಮವೇ ಸೇವ್ ವೈಲ್ಡ್'ಲೈಫ್ ಅಭಿಯಾನ.  ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ದಿನಪತ್ರಿಕೆ ಜೊತೆಯಾಗಿ ಅರಣ್ಯ ಇಲಾಖೆ ನಡೆಸುತ್ತಿರುವ ಅಭಿಯಾನ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತಾರಣ್ಯದ ಕೆ.ಗುಡಿ ಅರಣ್ಯದಲ್ಲಿ ನಡೆಯಿತು.

ಮೊದಲಿಗೆ ಅರಣ್ಯ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ ನಟ ಪ್ರಕಾಶ್ ರೈ ಕನ್ನೇರಿ ಕಾಲೋನಿಗೆ ತೆರಳಿ  ಸೋಲಿಗರೊಂದಿಗೂ ಸಹ ಚರ್ಚಿಸಿದರು. ನಟಿ ಮಯೂರಿ "ಅರಣ್ಯ ಸಂರಕ್ಷಣೆ" ಅಭಿಯಾನದ ಬಗ್ಗೆ ಸಂತಸ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು. ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಕಾಳಜಿಗೆ ಅಭಿನಂದನೆ ಸಲ್ಲಿಸಿದರು. ಅರಣ್ಯ ಸಿಬ್ಬಂದಿ ಸಹ ಈ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುವರ್ಣ ನ್ಯೂಸ್ ಹಾಗು ಕನ್ನಡಪ್ರಭದ ಅರಣ್ಯ ಕಾಳಜಿಯನ್ನು ಶ್ಲಾಘಿಸಿದ್ದಾರೆ.

ಇನ್ನು, ಕಾಡಂಚಿನ ಗ್ರಾಮದಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಗ್ರಾಮ ಪಂಚಾಯ್ತಿಗಳನ್ನು ಪತ್ತೆ ಹಚ್ಚಿ ಪ್ರಶಸ್ತಿ ನೀಡುವ ಮೂಲಕ ಮತ್ತಷ್ಟು ಹುರುಪು ತುಂಬುವ ಕೆಲಸ ಸಹ ಮಾಡಲಾಗುತ್ತಿದೆ.  ಚಾಮರಾಜನಗರ  ಜಿಲ್ಲೆ ಕೊಳ್ಳೇಗಾಲ  ತಾಲೂಕಿನ ಹುತ್ತೂರು ಗ್ರಾಮಪಂಚಾಯ್ತಿಯನ್ನು ಅರಣ್ಯಸ್ನೇಹಿ ಗ್ರಾಮಪಂಚಾಯ್ತಿ ಎಂದು ಗುರುತಿಸಲಾಗಿದ್ದು, ನಟ ಪ್ರಕಾಶ್ ರೈ, ನಟಿ ಮಯೂರಿ ಹಾಗೂ ಶಾಸಕ ಆರ್.ನರೇಂದ್ರ ಹುತ್ತೂರು ಗ್ರಾಮಪಂಚಾಯ್ತಿಗೆ ಅರಣ್ಯಸ್ನೇಹಿ ಗ್ರಾಮಪಂಚಾಯ್ತಿ ಎಂದು ಪ್ರಶಸ್ತಿ ಪ್ರಧಾನ ಮಾಡಿದರು.

ಒಟ್ಟಾರೆ, ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಪ್ರತಿವರ್ಷ ಇದೇ ರೀತಿಯ ವಿಶೇಷ ಅಭಿಯಾನಗಳನ್ನು ಮಾಡಿಕೊಂಡು ಬರುತ್ತಿದ್ದು, ಈ ಬಾರಿ ಕಾಡನ್ನು ಉಳಿಸುವ  ಸೇವ್ ವೈಲ್ಡ್'ಲೈಫ್ ಅಭಿಯಾನ ಹಮ್ಮಿಕೊಂಡಿದೆ. ಇದರ ಮೂಲಕವಾದರೂ ಜನರು ಕಾಡಿನ ಮಹತ್ವ ಅರಿತುಕೊಳ್ಳುವಂತಾಗಲಿ ಎಂಬುದೇ ನಮ್ಮ ಆಶಯ.

- ಶಶಿಧರ ಕೆ.ವಿ., ಸುವರ್ಣ ನ್ಯೂಸ್, ಚಾಮರಾಜನಗರ