ನನ್ನ ವಿರುದ್ಧ ಆರೋಪ ಮಾಡುವ ಮೊದಲು ವಾಸ್ತವಾಂಶವನ್ನು ಅರಿತುಕೊಳ್ಳಬೇಕು ಎಂದು ಕೇಂದ್ರ ಸಚಿವರೂ ಆಗಿರುವ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಡಿ.26): ನನ್ನ ವಿರುದ್ಧ ಆರೋಪ ಮಾಡುವ ಮೊದಲು ವಾಸ್ತವಾಂಶವನ್ನು ಅರಿತುಕೊಳ್ಳಬೇಕು ಎಂದು ಕೇಂದ್ರ ಸಚಿವರೂ ಆಗಿರುವ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ತಿರುಗೇಟು ನೀಡಿದ್ದಾರೆ.
ಸೋಮವಾರ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಡಿನೋಟಿಫಿಕೇಶನ್ ದೂರಿಗೆ ಸಂಬಂಧಿಸಿದಂತೆ ನಾನು ರಾಜಭವನವನ್ನು ದುರ್ಬಳಕೆ ಮಾಡಿಕೊಂಡಿದ್ದೇನೆ ಎಂಬ ಆರೋಪವನ್ನು ಮಾಡಿದ್ದಾರೆ. ರಾಜ್ಯಪಾಲರುಶನಿವಾರವೇ ನಾಲ್ಕು ದಿನಗಳ ಗುಜರಾತ್ ಪ್ರವಾಸಕ್ಕಾಗಿ ತೆರಳಿದ್ದಾರೆ.
ಹೀಗಿರುವಾಗ ನಾನು ಹೇಗೆ ಭೇಟಿಯಾಗಿ ಚರ್ಚಿಸಲು ಸಾಧ್ಯ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ದಿನೇಶ್ ಗುಂಡೂರಾವ್ ಅವರ ಹೇಳಿಕೆ ಅತಿರೇಕದಿಂದ ಕೂಡಿದೆ. ಕಾಂಗ್ರೆಸ್ಸಿಗರಿಗೆ ಸೋಲುವ ಭೀತಿ ಉಂಟಾಗಿದೆ. ಹೀಗಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಕನಿಷ್ಠ ಪಕ್ಷ ಸುಳ್ಳು ಆರೋಪ ಮಾಡುವ ಮೊದಲು ವಾಸ್ತವಾಂಶವನ್ನಾದರೂ ಅರಿತುಕೊಳ್ಳಬೇಕುಎಂದು ತೀಕ್ಷ್ಣವಾಗಿ ಹೇಳಿದರು.
ರಾಜಭವನದಲ್ಲೇ ಜಾವಡೇಕರ್ ವಾಸ್ತವ್ಯ: ಮೂರು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿರುವ ಪ್ರಕಾಶ್ ಜಾವಡೇಕರ್ ರಾಜಭವನದಲ್ಲೇ ವಾಸ್ತವ್ಯ ಹೂಡಿದ್ದಾರೆ. ಭಾನುವಾರ ಸಂಜೆ ನಗರಕ್ಕೆ ಆಗಮಿಸಿದ ಅವರು ನೇರವಾಗಿ ರಾಜ ಭವನಕ್ಕೆ ತೆರಳಿದ್ದರು. ಸೋಮವಾರವೂ ಅಲ್ಲಿಯೇ ತಂಗಿರುವ ಅವರು ಮಂಗಳವಾರ ಸಂಜೆ ದೆಹಲಿಗೆ ವಾಪಸಾಗಲಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯಪಾಲರು ಶನಿವಾರದಿಂದ ನಾಲ್ಕು ದಿನಗಳ ಪ್ರವಾಸದಲ್ಲಿ ಇರುವ ಕಾರಣದಿಂದ ಮತ್ತು ಹೋಟೆಲ್‌ನಲ್ಲಿ ವಾಸ್ತವ್ಯಕ್ಕಾಗಿ ದುಂದು ವೆಚ್ಚ ಮಾಡುವುದನ್ನು ತಡೆಯಬೇಕು ಎಂಬ ಉದ್ದೇಶದಿಂದ ಜಾವಡೇಕರ್ ಅವರು ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.
