Asianet Suvarna News Asianet Suvarna News

ಅಲ್ಪಸಂಖ್ಯಾತರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದ ಮೋದಿ

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಮೋದಿಜೀ ಮಾಡಿದ ಮೂರು ಭಾಷಣಗಳನ್ನು ಕೇಳಿದರೆ ಜಾತ್ಯತೀತತೆ ಹಾಗೂ ಪ್ರಗತಿಪರ ಚಿಂತನೆಯ ಜಪ ಮಾಡುವವರಿಗಿಂತ ಮೋದಿಯವರ ದೃಷ್ಟಿಕೋನವು ಹೆಚ್ಚು ಜಾತ್ಯತೀತವಾಗಿದೆ ಮತ್ತು 21ನೇ ಶತಮಾನಕ್ಕೆ ಸೂಕ್ತವಾಗಿದೆ ಎಂಬುದು ಅರ್ಥವಾಗುತ್ತದೆ. 

Prakash Javadekar speaks about PM Modi Speech on after Loksabha result
Author
Bengaluru, First Published May 28, 2019, 5:09 PM IST
  • Facebook
  • Twitter
  • Whatsapp

ನವದೆಹಲಿ (ಮೇ. 28): 2019ರ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಕೇಂದ್ರ ಸಚಿವ ಸಂಪುಟ ಸಭೆ, ಬಿಜೆಪಿಯ ಮುಖ್ಯ ಕಾರಾರ‍ಯಲಯ ಮತ್ತು ಎನ್‌ಡಿಎ ಪಾರ್ಲಿಮೆಂಟರಿ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಮೂರು ಭಾಷಣಗಳು ಅವರ ದೂರದೃಷ್ಟಿಯನ್ನು ಸ್ಪಷ್ಟವಾಗಿ ಹೇಳುವಂತಿವೆ.

ಈ ತೀರ್ಪು ಒಂದು ಐತಿಹಾಸಿಕ ಜಯ ಎಂದು ಪ್ರಧಾನಿ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಜನರೇ ಸ್ಪರ್ಧಿಸಿದ್ದರು. ಇದು ನಿಜವಾದ ಜನಾದೇಶ. ಇಲ್ಲಿ ಜಾತಿ ಆಧಾರದ ಮೇಲೆ ಜನ ತೀರ್ಪು ನೀಡಿಲ್ಲ, ಸರ್ಕಾರದ ಸಾಧನೆಯ ಆಧಾರದಲ್ಲಿ ತೀರ್ಪು ನೀಡಿದ್ದಾರೆ. ಈ ತೀರ್ಪು ಬಿಜೆಪಿಗೆ ಶಕ್ತಿ ತುಂಬಿದೆ.

2 ಸೀಟಿನಿಂದ 2 ಅವಧಿಯವರೆಗೆ

ಫಲಿತಾಂಶ ಪ್ರಕಟವಾದ ದಿನ ಮಾತನಾಡಿದ್ದ ನರೇಂದ್ರ ಮೋದಿ, ಕೇವಲ 2 ಸೀಟುಗಳನ್ನು ಪಡೆದು ಬೆಳೆಯುತ್ತಾ ಬಂದ ಬಿಜೆಪಿ ಹಲವು ದಶಕಗಳ ಬಳಿಕ ಈಗ ಸಂಪೂರ್ಣ ಬಹುಮತದೊಂದಿಗೆ 2ನೇ ಅವಧಿಗೆ ಲೋಕಸಭೆಯಲ್ಲಿ ಅಧಿಕಾರ ಪಡೆಯುತ್ತಿದೆ ಎಂಬುದನ್ನು ಒತ್ತಿ ಹೇಳಿದರು. ಇದು ಬಿಜೆಪಿಯ ಜನಪ್ರಿಯತೆಯನ್ನು ಪ್ರತಿಬಿಂಬಿಸಿತ್ತು.

1984ರಲ್ಲಿ ಕೇವಲ ಇಬ್ಬರೇ ಇಬ್ಬರು ಬಿಜೆಪಿ ಸಂಸದರು ಸಂಸತ್‌ ಪ್ರವೇಶಿಸಿದ್ದರು. ಆದರೆ 2014 ಮತ್ತು 2019ರಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬಂದಿದೆ. ಸಮಾಜದ ಕಡುಬಡವರಿಗೆ ಈ ಸರ್ಕಾರ ಮೀಸಲು ಎಂದು 2014ರಲ್ಲಿ ನರೇಂದ್ರ ಮೋದಿ ಹೇಳಿದ್ದರು. ಇವತ್ತು ಅದೇ ಕಡುಬಡವರು ಬಿಜೆಪಿಗೆ ಐತಿಹಾಸಿಕ ಜನಾದೇಶ ದೊರಕಿಸಿಕೊಡುವಲ್ಲಿ ಸಹಾಯ ಮಾಡಿದ್ದಾರೆ. ವಾಸ್ತವವಾಗಿ ಬಿಜೆಪಿಗೆ ಸಮಾಜದ ಎಲ್ಲ ವರ್ಗದ ಜನರೂ ಬೆಂಬಲ ನೀಡಿ ಗೆಲ್ಲಿಸಿದ್ದಾರೆ.

ಸಬ್‌ ಕಾ ವಿಶ್ವಾಸ್‌ ಮಂತ್ರ

ಸಂಸದೀಯ ನಾಯಕನಾಗಿ ಚುನಾಯಿತರಾದ ಬಳಿಕ ಎನ್‌ಡಿಎ ಸದಸ್ಯರು ಮತ್ತು ಸಂಸತ್‌ ಸದಸ್ಯರ ಸಮ್ಮುಖದಲ್ಲಿ ನರೇಂದ್ರ ಮೋದಿ ಮಾಡಿದ ಭಾಷಣವು ಅವರ ದೂರದೃಷ್ಟಿ, ಜನರು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅವರಿಗಿರುವ ಬದ್ಧತೆಯನ್ನು ಸಾರಿತ್ತು. ಈ ಭಾಷಣದಲ್ಲಿ 4 ಪ್ರಮುಖ ಅಂಶಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದರು. ಮೊದಲನೆಯದಾಗಿ ಸರ್ಕಾರವು ತನ್ನ ‘ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌’ ಧ್ಯೇಯಕ್ಕೆ ಬದ್ಧವಾಗಿರಬೇಕು ಎಂದು ಪ್ರತಿಪಾದಿಸಿದರು.

ಅಂದರೆ ಬಿಜೆಪಿಗೆ ಮತ ಹಾಕಿದವರು ಮತ್ತು ಹಾಕದವರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿರಬೇಕು. ಇದೇ ಧ್ಯೇಯವನ್ನು ‘ಸಬ್‌ ಕಾ ವಿಶ್ವಾಸ್‌’ ಎಂದೂ ವಿಸ್ತರಿಸಿದರು. ಅಂದರೆ ಹಲವು ದಶಕಗಳಿಂದ ಅಲ್ಪಸಂಖ್ಯಾತರಲ್ಲಿ ಕೆಲ ತಪ್ಪುಕಲ್ಪನೆ ತುಂಬಲಾಗಿದೆ. ಅವರನ್ನು ಕೇವಲ ವೋಟ್‌ ಬ್ಯಾಂಕ್‌ ಆಗಿ ಮಾತ್ರ ನೋಡಲಾಗುತ್ತಿದೆ. ಮುಂದಿನ 5 ವರ್ಷದ ನಮ್ಮ ಪ್ರಯತ್ನ, ಕೆಲಸ ಕಾರ‍್ಯಗಳು ಅವರ ವಿಶ್ವಾಸ ಗಳಿಸುವಂತಾಗಬೇಕು, ಅವರ ಹೃದಯದಲ್ಲಿ ಮನೆ ಮಾಡುವಂತಾಗಬೇಕು.

ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್‌ ಮತ್ತಿತರ ರಾಜಕೀಯ ಪಕ್ಷಗಳಿಂದ ದ್ರೋಹಕ್ಕೆ ಒಳಗಾಗಿವೆ. ಅವರು ಅಲ್ಪಸಂಖ್ಯಾತರ ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಸಬಲೀಕರಣವನ್ನು ಕಡೆಗಣಿಸಿದ್ದಾರೆ. ಹಾಗಾಗಿ ಮುಂದಿನ 5 ವರ್ಷದಲ್ಲಿ ಅವರ ನಂಬಿಕೆ ಗಳಿಸುವುದು ಬಿಜೆಪಿಯ ಬದ್ಧತೆಯಾಗಬೇಕು ಎಂದು ಕರೆ ನೀಡಿದ್ದಾರೆ.

ಬಹುಮತವಿದ್ದರೂ ಮಿತ್ರರು ಬೇಕು

ಎರಡನೆಯದಾಗಿ, ಬಿಜೆಪಿ ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಪಡೆದಿದೆ. ಎನ್‌ಡಿಎ ಮೈತ್ರಿಕೂಟದೊಂದಿಗೆ ಸರ್ಕಾರ ರಚನೆಯಾಗುತ್ತದೆ. ಅವರೆಲ್ಲರಿಗೂ ಮೋದಿ ಎನ್‌ಎಆರ್‌ಎ- ‘ರಾಷ್ಟ್ರೀಯ ಹಿತಾಸಕ್ತಿ ಮತ್ತು ಪ್ರಾದೇಶಿಕ ಆಕಾಂಕ್ಷೆ’ ಎಂಬ ಟಾರ್ಗೆಟ್‌ ನೀಡಿದ್ದಾರೆ.

ಇದು ನರೇಂದ್ರ ಮೋದಿ ಅವರಿಗೆ ಕೋ-ಆಪರೇಟಿವ್‌ ಫೆಡರಲ್‌ ವ್ಯವಸ್ಥೆಯ ಬಗೆಗಿರುವ ಕಾಳಜಿ, ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಬಿಜೆಪಿಗೆ ಸಂಪೂರ್ಣ ಬಹುಮತ ಬಂದಿದ್ದರೂ ಎಲ್ಲರನ್ನೂ ಒಳಗೊಳ್ಳಬೇಕೆಂಬ ಅವರ ಅಭಿಲಾಷೆ ಮೆಚ್ಚಬೇಕಾದ್ದು.

ಅಧಿಕಾರದ ಗರ್ವ ಬೇಡ

ಮೂರನೆಯದಾಗಿ, ಅಧಿಕಾರದ ಗರ್ವದಲ್ಲಿ ಕೆಲಸ ಮಾಡದೆ, ಸೇವಾ ಮನೋಭಾವದಲ್ಲಿ ಕೆಲಸ ಮಾಡಬೇಕೆಂಬ ದೊಡ್ಡ ಮಂತ್ರವನ್ನು ಮೋದಿ ಜಪಿಸಿದ್ದಾರೆ. ಮತ್ತು ನೂತನ ಸಂಸದರಿಗೆ ‘ವಿಐಪಿ’ ಸಂಸ್ಕೃತಿಯನ್ನು ತ್ಯಜಿಸಲು ಹೇಳಿದ್ದಾರೆ. ಜನರು ನಮ್ಮ ಸೇವಾ ಮನೋಭಾವ ನೋಡಿ ನಮ್ಮನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಜನರ ಸೇವೆಗಾಗಿ ತಮ್ಮನ್ನು ತಾವು ಮೀಸಲಿಡಬೇಕು ಎಂದು ಕರೆ ನೀಡಿದ್ದಾರೆ.

ಅದೇ ಕಾರಣಕ್ಕೆ 2014ರ ಚುನಾವಣೆ ಬಳಿಕ ಅವರು ತಮ್ಮನ್ನು ತಾವು ‘ಪ್ರಧಾನ ಮಂತ್ರಿ’ ಎನ್ನುವ ಬದಲು ‘ಪ್ರಧಾನ ಸೇವಕ’ ಎಂದು ಕರೆದುಕೊಂಡಿದ್ದರು. ಜೊತೆಗೆ ಸಂಸತ್ತಿನ ಎಲ್ಲ ಸದಸ್ಯರು ದೇಶದ ಜನರನ್ನು ಪರಾನುಭೂತಿಯಿಂದ ಮತ್ತು ಸಮಾನತೆಯಿಂದ ಕಾಣಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ.

ಜನರ ಸಹಭಾಗಿತ್ವ

ನಾಲ್ಕನೆಯದು ಜನರ ಸಹಭಾಗಿತ್ವದ ಬಗ್ಗೆ. 2014ರಿಂದಲೂ ಮೋದಿ ಜನರ ಸಹಭಾಗಿತ್ವಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಅದಕ್ಕೆ ಅತ್ಯುತ್ತಮ ಉದಾಹರಣೆ ‘ಸ್ವಚ್ಛ ಭಾರತ ಅಭಿಯಾನ’. ಸ್ವಚ್ಛ ಭಾರತ ಅಭಿಯಾನ ಸರ್ಕಾರದ ಕಾರ‍್ಯಕ್ರಮವಾಗಿ ಉಳಿದಿಲ್ಲ. ಬದಲಾಗಿ ಜನರ ಕಾರ‍್ಯಕ್ರಮವಾಗಿ ಬದಲಾಗಿದೆ. ಸರ್ಕಾರದ ಕಾರ‍್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾದರೆ ಅಲ್ಲಿ ಪ್ರಜೆಗಳ ಸಹಭಾಗಿತ್ವವೂ ಮುಖ್ಯ ಎಂಬುದು ಸರ್ಕಾರದ ಉದ್ದೇಶ.

ಮೋದಿ ಬಗ್ಗೆ ಜನ ಏನೆನ್ನುತ್ತಾರೆ?

2019ರ ಲೋಕಸಭಾ ಚುನಾವಣೆಯಲ್ಲಿ ಜನರು ತಮ್ಮದೇ ಆದ ಮಾನದಂಡದ ಮೂಲಕ ಅಭಿಪ್ರಾಯವನ್ನು ಸ್ಪಷ್ಟಪಡಿಸಿಕೊಂಡಿದ್ದರು. ಅವರು ಬಿಜೆಪಿಯ ಪ್ರಾಮಾಣಿಕತೆ ಮತ್ತು ಪಾರದರ್ಶಕ ಆಡಳಿತಕ್ಕೆ ಮತ ಹಾಕಿ ಮತ್ತೊಮ್ಮೆ ಗೆಲ್ಲಿಸಿದ್ದಾರೆ. ರಾಜಸ್ಥಾನದಲ್ಲಿ ದಿನಗೂಲಿಯೊಬ್ಬರನ್ನು ನಾನು ಮಾತನಾಡಿಸಿದ್ದೆ.

ಅವರು ‘ನಾನು ಮೋದಿಗೆ ಮತ ಹಾಕುತ್ತೇನೆ. ಅವರು ಪರಿಶ್ರಮಿ, ಸ್ವಾರ್ಥವಿಲ್ಲದವರು ಮತ್ತು ಒಂದು ದಿನವೂ ಬಿಡುವು ಪಡೆದುಕೊಳ್ಳದೆ ದಿನದ 24 ಗಂಟೆ ಅವಿರತವಾಗಿ ದೇಶಕ್ಕಾಗಿ ಕೆಲಸ ಮಾಡುವವರು’ ಎಂದಿದ್ದರು. ಹಾಗೆಯೇ ಬಡ ಮಹಿಳಾ ರೈತರೊಬ್ಬರು, ‘ನಾನು ಮೋದಿಜೀಗೇ ಮತ ಹಾಕುತ್ತೇನೆ. ಅವರೂ ಬಡ ಕುಟುಂಬದಿಂದ ಬಂದವರು. ಹಾಗಾಗಿ ಅವರು ಯಾವಾಗಲೂ ಬಡವರ ಕಾಳಜಿ ವಹಿಸುತ್ತಾರೆ’ ಎಂದಿದ್ದರು.

ರಾಜಸ್ಥಾನದ ತೀರಾ ಹಿಂದುಳಿದ ಹಳ್ಳಿಯ ಬುಡಕಟ್ಟು ಜನಾಂಗದ ಯುವಜನರು, ‘ಈ ಮುಂಚೆ ಯಾರಾದರೂ ಸೈನಿಕರು ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದಿದ್ದರೆ, ಅವರ ಮೃತದೇಹ ಭಾರತಕ್ಕೆ ವಾಪಸ್ಸಾಗುತ್ತಿತ್ತು. ಆದರೆ ಮೋದಿಜೀ ಅತಿ ಬುದ್ಧಿವಂತರು. 24 ಗಂಟೆಯ ಒಳಗಾಗಿ ವಾಯುಪಡೆಯ ಪೈಲಟ್‌ನನ್ನು ಜೀವಂತವಾಗಿ ವಾಪಸ್‌ ಕರೆತರುವಲ್ಲಿ ಯಶಸ್ವಿಯಾದರು’ ಎಂದಿದ್ದರು. ಮೋದಿ ಸರ್ಕಾರವು ಜಾರಿಗೆ ತಂದ ನೇರ ನಗದು ವರ್ಗಾವಣೆಯಂತಹ ಹಲವು ಯೋಜನೆಗಳ ಫಲ ಪಡೆದ ಪ್ರತಿಯೊಬ್ಬರೂ ಮೋದಿಜೀ ಅವರ ಮೇಲೆ ವಿಶ್ವಾಸವಿಟ್ಟಿದ್ದಾರೆ. ಹಾಗಾಗಿಯೇ ಬಿಜೆಪಿಗೆ ಹೆಚ್ಚು ಜನಾದೇಶ ಬಂದಿದೆ.

ನರೇಂದ್ರ ಮೋದಿ ತಮ್ಮ ಭಾಷಣದ ಮೂಲಕ ಭವಿಷ್ಯದ ಭಾರತದ ಬಗ್ಗೆ ತಮ್ಮ ದೃಷ್ಟಿಕೋನ ಏನೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ಮೋದಿಜೀ ಅವರ ಈ ಮೂರು ಭಾಷಣ ಕೇಳಿದ ನಂತರ ಜಾತ್ಯತೀತತೆ, ಪ್ರಗತಿಪರ ಚಿಂತನೆಯ ಜಪ ಮಾಡುವವರಿಗಿಂತ ಮೋದಿ ಅವರ ದೃಷ್ಟಿಕೋನವು ಹೆಚ್ಚು ಎಲ್ಲರನ್ನೂ ಒಳಗೊಳ್ಳುವ ಚಿಂತನೆಯದ್ದಾಗಿದೆ, ಜಾತ್ಯತೀತವಾಗಿದೆ ಮತ್ತು 21ನೇ ಶತಮಾನಕ್ಕೆ ಸೂಕ್ತವಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.

- ಪ್ರಕಾಶ್ ಜಾವಡೇಕರ್ 

ನಿರ್ಗಮಿತ ಕೇಂದ್ರ ಸಚಿವರು 

Follow Us:
Download App:
  • android
  • ios