ಚುನಾವಣೆಗೆ ಸ್ಪರ್ಧಿಸಲು ಆಗದಿದ್ದರೆ ದೇವೇಗೌಡರ ವಾರಸುದಾರನಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ನಿಮ್ಮನ್ನು - ಕಣಕ್ಕಿಳಿಸಲಾಗುತ್ತದಂತೆ?ಉ:  ನನಗೆ ಆ ಬಗ್ಗೆ ಮಾಹಿತಿಯಿಲ್ಲ. ನನಗೇನಿದ್ದರೂ ರಾಜ್ಯ ರಾಜಕಾರಣದಲ್ಲೇ ಸೇವೆ ಮಾಡಬೇಕು ಎಂಬ ಆಸೆಯಿದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸದ್ಯಕ್ಕೆ ಯಾವ ಯೋಚನೆಯನ್ನೂ ಮಾಡಿಲ್ಲ.  

- ದಯಾಶಂಕರ ಮೈಲಿ
ಹಾಸನ(ಜ.23): ‘ಮುಂಬರುವ ವಿಧಾನಸಭೆ ಚುನಾವಣೆ​ಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ಅಥವಾ ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರ​ದಲ್ಲಿ ಸ್ಪರ್ಧಿಸುವಾಸೆ ಇದೆ. ಚುನಾವಣೆಗೆ ನಿಲ್ಲು​ವುದು ಬೇಡ ಎಂದರೆ ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ನೀಡುತ್ತೇನೆ.'
ಇದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಅವರ ಸ್ಪಷ್ಟಮಾತು.
‘ನಮ್ಮ ಕುಟುಂಬವೊಂದೇ ಕುಟುಂಬ ರಾಜ​ಕಾರಣ ಮಾಡುತ್ತಿದೆ ಎಂದು ಏಕೆ ಟೀಕೆ ಮಾಡಲಾ​ಗುತ್ತಿದೆಯೋ ಗೊತ್ತಿಲ್ಲ. ರಾಷ್ಟ್ರ ಮಟ್ಟದಲ್ಲಿ ನೆಹರು ಕುಟುಂಬದಿಂದ ಹಿಡಿದು ರಾಜ್ಯದಲ್ಲಿ ಯಡಿಯೂರಪ್ಪ ಮತ್ತವರ ಪುತ್ರ ಸೇರಿದಂತೆ ಆನೇಕ ರಾಜಕಾರಣಿಗಳ ಕುಟುಂಬದ​ವರು ಸಕ್ರಿಯ ​ರಾಜಕಾರಣ ಮಾಡುತ್ತಿದ್ದಾರೆ. ಇದು ಕುಟುಂಬ ರಾಜಕಾರಣವಲ್ಲವೇ?' ಎಂದೂ ಅವರು ಪ್ರಶ್ನಿಸಿದ್ದಾರೆ. 
ಎಂಜಿನಿಯರಿಂಗ್‌ ಪದವೀಧರರಾಗಿರುವ 25 ವರ್ಷ ವಯಸ್ಸಿನ ಪ್ರಜ್ವಲ್‌ ರೇವಣ್ಣ ಹುಟ್ಟುತ್ತಲೇ ರಾಜಕೀಯ ವಾತಾವರಣವನ್ನು ಕಂಡವರು. ಅದರೊಂದಿಗೇ ಆಡಿ ಬೆಳೆದವರು. ವಿದ್ಯಾಭ್ಯಾಸ ಮುಗಿದ ಕೂಡಲೇ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಅವರು ನಾಲ್ಕೈದು ವರ್ಷಗಳಿಂದ ಯುವಕರನ್ನು ಸಂಘಟಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ತಾತ ದೇವೇಗೌಡ, ತಂದೆ ರೇವಣ್ಣ ಮತ್ತು ತಾಯಿ ಭವಾನಿ ಅವರ ಒಡನಾಟದಲ್ಲಿ ರಾಜಕೀಯ ಪಾಠ ಮತ್ತು ಪಟ್ಟುಗಳನ್ನು ಕಲಿಯುತ್ತಿರುವ ಪ್ರಜ್ವಲ್‌ ಮುಂಬರುವ 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸುವರ್ಣ ನ್ಯೂಸ್ ಸೋದರ ಪತ್ರಿಕೆ ‘ಕನ್ನಡಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಹೀಗಿದೆ:
1) ಚುನಾವಣೆಗೆಸಿದ್ಧತೆ ಆರಂಭಿಸಿದ್ದೀರಿ?
ಉ: ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಜಿಲ್ಲೆ ಹುಣಸೂರು ಅಥವಾ ಹಾಸನ ಜಿಲ್ಲೆ ​ಬೇಲೂರು ಕ್ಷೇತ್ರದಲ್ಲಿ ಸ್ಪರ್ಧಿ​ಸು​ವಾಸೆ ಇದೆ. ಎಂಜಿನಿಯರಿಂಗ್‌ ಓದು​ತ್ತಿರುವಾಗಿನಿಂದಲೇ ಜನರಿಗೆ ನನ್ನ ಇತಿಮಿ​ತಿಯಲ್ಲಿ ಕೈಲಾದಷ್ಟುಸೇವೆ ಮಾಡಿ​ಕೊಂಡು ಬಂದಿ​ದ್ದೇನೆ. ಹಾಸನ ಜಿಲ್ಲೆಗೆ ಮಾತ್ರವೇ ಅಲ್ಲ, ಮೈಸೂರು ಸೇರಿದಂತೆ ಎಲ್ಲಾ ಜಿಲ್ಲೆಗಳ ಕಾರ್ಯಕರ್ತರು, ಮುಖಂಡರು ಮತ್ತು ​ಜನರ ಒಡ​ನಾಟ​ ಇಟ್ಟುಕೊಂಡಿದ್ದೇನೆ. ಈ ಹಿನ್ನೆಲೆ​ಯಲ್ಲಿ ಸ್ಪರ್ಧಿಸಬೇಕು ಎಂದುಕೊಂಡಿದ್ದೇನೆ.
2) ಮತ್ತೆನಿಮ್ಮ ಚಿಕ್ಕಪ್ಪ ಅವರು ನಮ್ಮ ಕುಟುಂಬದಿಂದ ಇಬ್ಬರು ಬಿಟ್ಟರೆ ಇನ್ಯಾರೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ?
ಉ:ಹೌದು. ಚಿಕ್ಕಪ್ಪ ಹಾಗೆ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಹೇಳಿರಬಹುದು. ಈಗ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲಾ ವರ್ಗಗಳ ರಾಜಕೀಯ ಮುಖಂಡರು ಪಕ್ಷವನ್ನು ಸಂಘಟಿಸುವ ಕಾರ್ಯಕ್ಕೆ ಸಾಥ್‌ ನೀಡಲಿದ್ದಾರೆ. ಏನೇ ಇರಲಿ, ನಾನು ವಿಧಾನಸಭೆ ಚುನಾವಣೆಗೆ ನಿಲ್ಲಬೇಕೋ ಬೇಡವೋ ಎಂಬುದು ದೇವೇಗೌಡರು, ಕುಮಾರಸ್ವಾಮಿ ಮತ್ತು ರೇವಣ್ಣನವರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ನಿಂತಿದೆ. ಮೂವರೂ ಬೇಡವೆಂದರೆ ಸ್ಪರ್ಧಿಸುವುದಿಲ್ಲ. ಮೂವರ ತೀರ್ಮಾನಕ್ಕೆ ನಾನು ಕಟಿಬದ್ಧ.
3)ಸ್ಪರ್ಧಿಸುವುದು ಬೇಡ ಎಂದರೆ ಆಗ ನಿಮ್ಮ ಮುಂದಿನ ರಾಜಕೀಯ ನಡೆ ಏನು?
ಉ: ಚುನಾವಣೆಗೆ ನಿಲ್ಲುವುದು ಬೇಡವೆಂದರೆ ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ನೀಡುತ್ತೇನೆ. ಬಂಡಾಯ ಪಂಡಾಯ ಎಂಬುದು ನನಗೆ ಗೊತ್ತಿಲ್ಲ. ಅಂತಿಮವಾಗಿ ಜೆಡಿಎಸ್‌ ಅನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿರುತ್ತದೆ. ಇನ್ನೂ ಹೆಚ್ಚು ಜನರೊಡನೆ ಬೆರೆಯುತ್ತೇನೆ. 2023ರಲ್ಲಿ ನಡೆಯುವ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಳ್ಳಲು ಯತ್ನಿಸುತ್ತೇನೆ.
4) ಒಂದುವೇಳೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸದಿದ್ದರೆ ಮುಂದೆ ವಿಧಾನಪರಿಷತ್ತಿಗೆ ಪ್ರವೇಶಿಸುವ ಸಾಧ್ಯತೆ ಇದೆಯೇ?
ಉ: ಯಾವುದೇ ಕಾರಣಕ್ಕೂ ಹಿಂಬಾಗಿಲಿನ ರಾಜಕಾರಣ ಮಾಡುವುದಿಲ್ಲ. ನಮ್ಮ ಕುಟುಂಬಕ್ಕೆ ಹಿಂಬಾಗಿಲ ರಾಜಕಾರಣ ಅಂದ್ರೆ ಏನು ಎಂಬುದೇ ಗೊತ್ತಿಲ್ಲ. ಜನರಿಂದಲೇ ಆಯ್ಕೆಯಾಗಬೇಕು. ನಮ್ಮ ತಂದೆ ಮತ್ತು ಚಿಕ್ಕಪ್ಪನವರನ್ನು ವಿಧಾನಪರಿಷತ್ತಿಗೋ, ರಾಜ್ಯಸಭೆಗೂ ಆಯ್ಕೆ ಮಾಡುವುದು ದೇವೇಗೌಡರಿಗೆ ಕಷ್ಟವಾಗುತ್ತಿರಲಿಲ್ಲ. 15ರಿಂದ 20 ವರ್ಷ ಜನಸೇವೆ ಮಾಡಿಸಿ, ದುಡಿದ ನಂತರವೇ ವಿಧಾನಸಭೆಗೆ ತಮ್ಮ ಮಕ್ಕಳನ್ನು ದೇವೇಗೌಡರು ನಿಲ್ಲಿಸಿದ್ದಾರೆಯೇ ಹೊರತು ಹಿಂಬಾಗಿಲಿನಿಂದ ರಾಜಕಾರಣಕ್ಕೆ ಪ್ರವೇಶ ಮಾಡಿಸಿಲ್ಲ. ನಾನು ಚುನಾವಣೆ ಮೂಲಕವೇ ವಿಧಾನಸಭೆ ಪ್ರವೇಶ ಮಾಡುತ್ತೇನೆ.