ಬೆಂಗಳೂರು : ಪುಲ್ವಾಮಾದಲ್ಲಿ ಯೋಧರ ಮೇಲೆ ಉಗ್ರರ ದಾಳಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಬರಹ ಪ್ರಕಟಿಸುವ ಕಿಡಿಗೇಡಿಗಳ ಕೃತ್ಯ ಮುಂದುವರಿದಿದ್ದು, ಈಗ ‘ಪಾಕಿಸ್ತಾನ ಸೈನ್ಯ’ಕ್ಕೆ ಜೈಕಾರ ಹಾಕಿದ ಆರೋಪದ ಮೇರೆಗೆ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಜೈಲು ಸೇರುವಂತಾಗಿದೆ.

ಗದಗ ಜಿಲ್ಲೆಯ ಮಹಮದ್‌ ಗೌಸುದ್ದೀನ್‌ ಬಂಧಿತ. ವಾಯು ಸೇನೆ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಪಾಕಿಸ್ತಾನದ ವಶದಲ್ಲಿದ್ದಾಗ ‘ಪಾಕಿಸ್ತಾನ್‌ ಆರ್ಮಿ ಜಿಂದಾಬಾದ್‌’ ಎಂದು ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿದ್ದ ತಪ್ಪಿಗೆ ಆತನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಲಹಂಕದ ಸಮೀಪದ ಜಾಲ ಹೋಬಳಿಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಗೌಸುದ್ದೀನ್‌ ಟೀಂ ಲೀಡರ್‌ ಆಗಿದ್ದಾನೆ. ಈತನ ವಿರುದ್ಧ ಅದೇ ಹೋಬಳಿಯ ಎನ್‌ ಜಗದೀಶ್‌ ಎಂಬುವರು ಗುರುವಾರ ದೂರು ಕೊಟ್ಟಿದ್ದರು. ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಫೇಸ್‌ಬುಕ್‌ನ ‘ಐಐಆರ್‌ಸಿ’ ಪೇಸ್‌ನಲ್ಲಿ ಭಾರತೀಯ ಮಾಧ್ಯಮಗಳ ವಿರುದ್ಧವಾಗಿ ಅಭಿನಂದನ್‌ ಮಾತನಾಡಿದರು ಎನ್ನಲಾದ ವಿಡಿಯೋವೊಂದು ಇತ್ತು. ಇದಕ್ಕೆ ಗೌಸುದ್ದೀನ್‌, ‘ಅಭಿನಂದನ್‌ ದೇಶದ ಮಾಧ್ಯಮಗಳಿಗೆ ಸರಿಯಾಗಿಯೇ ಕಪಾಳ ಮೋಕ್ಷ ಮಾಡಿದರು. ಪಾಕಿಸ್ತಾನಕ್ಕೆ ಜಿಂದಾಬಾದ್‌, ಪಾಕ್‌ ಆರ್ಮಿಗೆ ಜಿಂದಾಬಾದ್‌’ ಎಂದು ಪ್ರತಿಕ್ರಿಯಿಸಿದ್ದ. ಈ ಸ್ಟೇಟಸ್‌ ಅನ್ನು ಸ್ನೇಹಿತರ ಮೂಲಕ ತಿಳಿದುಕೊಂಡು ಪೊಲೀಸರಿಗೆ ದೂರು ನೀಡಿದೆ ಎಂದು ಜಗದೀಶ್‌ ಹೇಳಿದ್ದಾರೆ.