ಯಾವುದೋ ದೇಶಕ್ಕೆ ಹೋಗಿ ತಾಯ್ನಾಡಿನ ವಿರುದ್ಧ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ರಾಹುಲ್‌ ಈ ರೀತಿ ಮಾತನಾಡುವುದು ಅಕ್ಷಮ್ಯ ಅಪರಾಧವಲ್ಲವೇ? ಹೀಗಾಗಿ ಈ ಕೂಡಲೇ ಅವರು ಭಾರತದ ಜನರ ಮುಂದೆ ಕ್ಷಮೆ ಯಾಚಿಸಬೇಕು

ಹುಬ್ಬಳ್ಳಿ(ಆ.26): ಭಾರತದಲ್ಲಿ ನಿರುದ್ಯೋಗದಿಂದಾಗಿ ಯುವಕರು ಭಯೋತ್ಪಾದನಾ ಸಂಘಟನೆಗಳಿಗೆ ಸೇರುತ್ತಿದ್ದಾರೆ ಎಂದು ಹೇಳಿ ಅಕ್ಷಮ್ಯ ಅಪರಾಧ ಎಸಗಿರುವ ರಾಹುಲ್‌ ಗಾಂಧಿ ಕೂಡಲೇ ರಾಷ್ಟ್ರದ ಜನತೆ ಮುಂದೆ ಕ್ಷಮೆ ಯಾಚಿಸಬೇಕು ಎಂದು ಸಂಸದ ಪ್ರಹ್ಲಾದ್‌ ಜೋಶಿ ಒತ್ತಾಯಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೋ ದೇಶಕ್ಕೆ ಹೋಗಿ ತಾಯ್ನಾಡಿನ ವಿರುದ್ಧ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ರಾಹುಲ್‌ ಈ ರೀತಿ ಮಾತನಾಡುವುದು ಅಕ್ಷಮ್ಯ ಅಪರಾಧವಲ್ಲವೇ? ಹೀಗಾಗಿ ಈ ಕೂಡಲೇ ಅವರು ಭಾರತದ ಜನರ ಮುಂದೆ ಕ್ಷಮೆ ಯಾಚಿಸಬೇಕು. ನಮ್ಮ ವಿರೋಧಿ ರಾಷ್ಟ್ರಗಳಿಗೆ ಅನುಕೂಲವಾಗುವಂತಹ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪೆದ್ದ ಎಂದು ಕರೆಯದೇ ಮತ್ತಿನ್ನೇನೆಂದು ಕರೆಯಬೇಕು? ಇನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಗಿದ್ದಾರೋ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಸಹ ಹಾಗೆಯೇ ಇದ್ದಾರೆ ಎಂದರು.

ಇನ್ನು ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಗೊಂದಲದಲ್ಲೇ ಕಾಲ ಕಳೆಯುತ್ತಿದೆ. ಮೈತ್ರಿ ಸರ್ಕಾರದ ಆಡಳಿತ ಸಂಪೂರ್ಣ ನೆಲಕಚ್ಚಿದೆ. ಮೈತ್ರಿ ಸರ್ಕಾರಕ್ಕೆ ತಮ್ಮ ಬೆಂಬಲ ಇದೆಯೋ ಇಲ್ಲವೋ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ರಾಜ್ಯದಲ್ಲಿ ಸರಿಯಾಗಿ ಆಡಳಿತ ನಡೆಸುವ ಇಚ್ಛೆ ಇದ್ದರೆ ನಡೆಸಲಿ. ಇಲ್ಲವಾದಲ್ಲಿ ಕುಮಾರಸ್ವಾಮಿ ರಾಜಿನಾಮೆ ನೀಡಿ ಮನೆಗೆ ತೆರಳಲಿ ಎಂದು ಹೇಳಿದರು.