ಬೆಂಗಳೂರು (ಮೇ. 30): ಜೂನ್‌ 1ರಿಂದ ರಾಜ್ಯಾದ್ಯಂತ ವಿದ್ಯುತ್‌ ದರ ಪ್ರತಿ ಯೂನಿಟ್‌ಗೆ ಸುಮಾರು 30ರಿಂದ 50 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಗುರುವಾರ ಅಧಿಕೃತವಾಗಿ ದರ ಹೆಚ್ಚಿಸಿ ಆದೇಶ ಹೊರಡಿಸಲಿದೆ.

ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂಗಳು) ಪ್ರತಿ ಯೂನಿಟ್‌ಗೆ ಕನಿಷ್ಠ 1 ರು.ನಿಂದ ಗರಿಷ್ಠ 1.65 ರು.ವರೆಗೆ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಈ ಬಗ್ಗೆ ಗ್ರಾಹಕರು, ವಿವಿಧ ಸಂಘಟನೆಗಳ ಅಹವಾಲು ಆಲಿಸಿದ್ದ ಕೆಇಆರ್‌ಸಿ ಅಂತಿಮವಾಗಿ ದರ ಪರಿಷ್ಕರಿಸಿ ಆದೇಶ ಪ್ರಕಟಿಸಲಿದೆ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ), ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಮೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ (ಚೆಸ್ಕಾಂ), ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ), ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ), ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘ, ಮಂಗಳೂರು ಎಸ್‌ಇಝಡ್‌ ಮತ್ತು ಏಕಸ್‌ ಎಸ್‌ಇಝುಡ್‌ (ಒಟ್ಟು 8 ವಿದ್ಯುತ್‌ ಸರಬರಾಜು ಕಂಪನಿ)ಗಳು 2019-20 ವರ್ಷಕ್ಕೆ ಅನ್ವಯವಾಗುವಂತೆ ವಿದ್ಯುತ್‌ ದರ ಪರಿಷ್ಕರಣೆ ಮಾಡುವಂತೆ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿದ್ದವು.

ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿ 8 ಜಿಲ್ಲೆಗಳಿಗೆ ವಿದ್ಯುತ್‌ ಪೂರೈಸುತ್ತಿರುವ ಬೆಸ್ಕಾಂ, ಪ್ರತಿ ಯೂನಿಟ್‌ಗೆ 1 ರು. ಹಾಗೂ ಜೆಸ್ಕಾಂ ಪ್ರತಿ ಯೂನಿಟ್‌ಗೆ 1.65 ರು. ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಉಳಿದಂತೆ ಚೆಸ್ಕಾಂ, ಮೆಸ್ಕಾಂ ಹಾಗೂ ಹೆಸ್ಕಾಂ ಪ್ರತಿ ಯೂನಿಟ್‌ಗೆ 1.30 ರು.ನಿಂದ 1.45 ರು. ವರೆಗೆ ದರ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದವು.

ಈಗಿರುವ ದರ ಎಷ್ಟು?:

ಬೆಸ್ಕಾಂ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತನ್ನ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಆರು ಸ್ಲಾ್ಯಬ್‌ಗಳನ್ನು 4 ಸ್ಲಾ್ಯಬ್‌ಗಳಿಗೆ ಇಳಿಸಲು ಉದ್ದೇಶಿಸಿದೆ. ಇದರ ಪ್ರಕಾರ 50 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡುವ ಗ್ರಾಹಕರು ಪ್ರತಿ ಯೂನಿಟ್‌ಗೆ 3.90 ರು. 50ಕ್ಕಿಂತ ಅಧಿಕ ಹಾಗೂ 100ಕ್ಕಿಂತ ಕಡಿಮೆ ಯೂನಿಟ್‌ ವಿದ್ಯುತ್‌ ಬಳಕೆಗೆ 4.95 ರೂ. ಪಾವತಿಸಬೇಕಾಗುತ್ತದೆ.

ಸದ್ಯ ಗ್ರಾಹಕರು 30 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆಗೆ ಪ್ರತಿ ಯೂನಿಟ್‌ಗೆ 3.5 ರು. ಹಾಗೂ 31ರಿಂದ 100 ಯೂನಿಟ್‌ವರೆಗೆ ವಿದ್ಯುತ್‌ ಬಳಕೆಗೆ ಪ್ರತಿ ಯೂನಿಟ್‌ಗೆ 4.95 ರು. ಪಾವತಿಸುತ್ತಿದ್ದಾರೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.