Asianet Suvarna News Asianet Suvarna News

ಕಲ್ಲಿದ್ದಲು ಬರ: ಇದು ಎಚ್ಚರಿಕೆಯ ಕರೆಘಂಟೆ..!

ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ಭಾರೀ ಪ್ರಮಾಣದಲ್ಲಿ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿವೆ. ಇದಕ್ಕೆ ಪ್ರಮುಖ ಕಾರಣ ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಲಭ್ಯತೆ ಇಳಿಮುಖವಾಗಿರುವುದು. ಕಲ್ಲಿದ್ದಲನ್ನು ಭಾರತ ತಾನೇ ಗಣಿಗಾರಿಕೆ ಮಾಡುತ್ತದೆ. ಅಲ್ಲದೆ ವಿದೇಶದಿಂದಲೂ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಹಲವು ತಿಂಗಳಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

Power production dips in India due to dearth of coal Karnataka too be affected
Author
Bengaluru, First Published Oct 29, 2018, 12:53 PM IST

ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ. ಹೀಗಾಗಿ ದೇಶದ ಕೈಗಾರಿಕೆ, ಗೃಹಬಳಕೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ವಿದ್ಯುತ್ ಅತ್ಯವಶ್ಯಕ. ಆದರೆ ಕೆಲ ತಿಂಗಳಿಂದ ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ ತಾರಕಕ್ಕೇರಿದೆ. ಭಾರತವು ಹೆಚ್ಚಾಗಿ ಕಲ್ಲಿದ್ದಲನ್ನು ಆಧರಿಸಿದ ಶಾಖೋತ್ಪನ್ನ ವಿದ್ಯುತ್ತನ್ನು ಅವಲಂಬಿಸಿದೆ. ಜಲವಿದ್ಯುತ್ ಮೂಲಗಳಿದ್ದರೂ ಅವು ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಸ್ಥಗಿತಗೊಳ್ಳುತ್ತವೆ. ಅಣು ಸ್ಥಾವರಗಳು ಬೆರಳೆಣಿಕೆಯ ಸಂಖ್ಯೆಯಲ್ಲಿದ್ದು, ಅವು ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಸುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಇತ್ತೀಚೆಗೆ ಎದುರಾಗಿರುವ ಕಲ್ಲಿದ್ದಲಿನ ಸಮಸ್ಯೆಯಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ.

1 ದಿನಕ್ಕೆ ಸಾಲುವಷ್ಟೂ ಕಲ್ಲಿದ್ದಲಿಲ್ಲ..!
ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ಭಾರೀ ಪ್ರಮಾಣದಲ್ಲಿ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿವೆ. ಇದಕ್ಕೆ ಪ್ರಮುಖ ಕಾರಣ ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಲಭ್ಯತೆ ಇಳಿಮುಖವಾಗಿರುವುದು. ಕಲ್ಲಿದ್ದಲನ್ನು ಭಾರತ ತಾನೇ ಗಣಿಗಾರಿಕೆ ಮಾಡುತ್ತದೆ. ಅಲ್ಲದೆ ವಿದೇಶದಿಂದಲೂ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಹಲವು ತಿಂಗಳಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಹಿಂದೆ ನಮ್ಮ ದೇಶದಲ್ಲಿ ವರ್ಷಕ್ಕೆ 66 ಕೋಟಿ ಟನ್ ಕಲ್ಲಿದ್ದಲನ್ನು ಗಣಿಗಾರಿಕೆ ಮಾಡಿ ತೆಗೆಯಲಾಗುತ್ತಿತ್ತು. ಆದರೆ ಕೆಲ ತಿಂಗಳಿನಿಂದ 40 ಕೋಟಿ ಮೆಟ್ರಿಕ್ ಟನ್ ಮಾತ್ರ ಸಿಗುತ್ತಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆಗೆ ಸಾಕಾಗುವಷ್ಟು ಕಲ್ಲಿದ್ದಲು ಸಿಗುತ್ತಿಲ್ಲ. ದೇಶದ ಶಾಖೋತ್ಪನ್ನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲನ್ನು 15 ದಿನಗಳಿಗೆ ಆಗುವಷ್ಟು ದಾಸ್ತಾನು ಇಟ್ಟುಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಈಗ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಒಂದು ದಿನಕ್ಕೂ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇಲ್ಲ. ಇದಕ್ಕೆ ಪ್ರಮುಖ ಕಾರಣ ಕಲ್ಲಿದ್ದಲು ಗಣಿಗಳಿಂದ ಪೂರೈಕೆ ಆಗುತ್ತಿಲ್ಲ. ಗಣಿಗಳಲ್ಲಿ ಗಣಿಗಾರಿಕೆ ಮಾಡಲು ಹಲವು ಸಮಸ್ಯೆಗಳು ಎದುರಾಗಿವೆ. ಹೀಗಾಗಿ ಬೇಡಿಕೆಯ ಅರ್ಧದಷ್ಟು ಮಾತ್ರ ಕಲ್ಲಿದ್ದಲು ತೆಗೆಯಲಾಗುತ್ತಿದೆ.

ಎಲ್ಲೆಲ್ಲಿ ವಿದ್ಯುತ್ ಸಮಸ್ಯೆ?
ಭಾರತದಲ್ಲಿ 114 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿವೆ. ಅವುಗಳಲ್ಲಿ 32 ಸ್ಥಾವರಗಳು (17 ಸ್ಥಾವರಗಳು ಕೊರತೆ, 17 ತೀವ್ರ ಕೊರತೆ) ಕಲ್ಲಿದ್ದಲಿನ ಕೊರತೆ ಎದುರಿಸುತ್ತಿವೆ. ಉಳಿದ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆಯಾದರೂ, ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಭಾರತದಲ್ಲಿ ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಗಣಿ (ಆಂಧ್ರ ಪ್ರದೇಶದಲ್ಲಿದೆ) ಕಲ್ಲಿದ್ದಲು ಪೂರೈಕೆ ಮಾಡುವ ಪ್ರಮುಖ ಕೇಂದ್ರಗಳಾಗಿವೆ. ಕಲ್ಲಿದ್ದಲು ಸಮಸ್ಯೆಯಿಂದ ದೆಹಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಕರ್ನಾಟಕದಲ್ಲಿ ತೀವ್ರ ವಿದ್ಯುತ್ ಅಭಾವ ತಲೆದೋರಿದೆ. ಸೋಲಾರ್, ಜಲ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಇದೆ. ಸದ್ಯಕ್ಕೆ ವಿದ್ಯುತ್ ಕೊರತೆಯನ್ನು ಜಲವಿದ್ಯುತ್ ತಗ್ಗಿಸಿದೆ. ಸೋಲಾರ್ ಪವರ್ ಪ್ಲ್ಯಾಂಟ್‌ಗಳು ಬೆಳಗ್ಗಿನ ವಿದ್ಯುತ್ ಸಮಸ್ಯೆಗೆ ಪರಿಹಾರ ಒದಗಿಸುತ್ತಿವೆ. ಆದರೆ ಸಂಜೆ ವೇಳೆಯಲ್ಲಿ ಸೋಲಾರ್ ಪ್ಲ್ಯಾಂಟ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸಂಜೆ 6ರಿಂದ ರಾತ್ರಿ 9.30 ರವರೆಗಿನ ವಿದ್ಯುತ್ ಬೇಡಿಕೆ ಪೂರೈಸುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಕಲ್ಲಿದ್ದಲು ಗಣಿಗಳು ಎಲ್ಲಿವೆ?
ಕೋರ್ಬಾ (ಛತ್ತೀಸ್‌ಗಢ), ಸಿಂಗರೇಣಿ (ತೆಲಂಗಾಣ), ಜರಿಯಾ (ಜಾರ್ಖಂಡ್), ನಾಗಪುರ (ಮಹಾರಾಷ್ಟ್ರ), ರಾಣಿಗಂಜ್ (ಪಶ್ಚಿಮ ಬಂಗಾಳ), ನೈವೇಲಿ (ತಮಿಳುನಾಡು), ಸಿಂಗ್ರೌಲಿ, ಉಮಾರಿಯಾ (ಮಧ್ಯಪ್ರದೇಶ)ಗಳಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತದೆ. ದೇಶದಲ್ಲಿ ಗಣಿಗಾರಿಕೆ ಮಾಡುವ ಒಟ್ಟು ಕಲ್ಲಿದ್ದಲಿನ ಶೇ.72ರಷ್ಟನ್ನು ವಿದ್ಯುತ್ ಉತ್ಪಾದನೆಗೇ ಬಳಸಲಾಗುತ್ತದೆ. ದೇಶದಲ್ಲಿ ಕಲ್ಲಿದ್ದಲಿನಿಂದ ವರ್ಷಕ್ಕೆ 1,86,492 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ತಿತಲಿ ಚಂಡಮಾರುತದ ಎಫೆಕ್ಟ್!
ಬಂಗಾಳ ಕೊಲ್ಲಿಯ ತೀರ ಪ್ರದೇಶಗಳಿಗೆ ಅಪ್ಪಳಿಸಿದ ತಿತಲಿ ಚಂಡಮಾರುತದಿಂದ ಇತ್ತೀಚೆಗೆ ಅತಿ ಹೆಚ್ಚು ಮಳೆಯಾಗಿದೆ. ಇದರಿಂದ ಕಲ್ಲಿದ್ದಲು ಗಣಿಗಾರಿಕೆ ಮಾಡಲು ಕಷ್ಟವಾಗುತ್ತಿದೆ.
ಅಂತರ್ಜಲ ಮಟ್ಟ ಏರುವುದು, ಗಣಿಗಳಿಗೆ ನುಗ್ಗುವ ನೀರನ್ನು ಹೊರಹಾಕಿ ಗಣಿಗಾರಿಕೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರ ಒಟ್ಟಾರೆ ಪರಿಣಾಮ ಒಣ ಕಲ್ಲಿದ್ದಲು ಪೂರೈಕೆ ಕಡಿಮೆಯಾಗಿದೆ.

ಕಲ್ಲಿದ್ದಲು ಮಾಫಿಯಾದ ಪಾತ್ರ?
ದೇಶದಲ್ಲಿ ಕಲ್ಲಿದ್ದಲು ಪೂರೈಕೆಯನ್ನೂ ಭ್ರಷ್ಟಾಚಾರ ಬಿಟ್ಟಿಲ್ಲ. ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿಗಾರಿಕೆಯನ್ನು ಇಂತಿಷ್ಟು ವರ್ಷಕ್ಕೆ ಎಂದು ಹರಾಜು ಹಾಕುತ್ತದೆ. ಆದರೆ ಗುತ್ತಿಗೆ ಪಡೆಯುವ ಉದ್ದೇಶದಿಂದ ಖಾಸಗಿ ವ್ಯಕ್ತಿಗಳು/ ಕಂಪನಿಗಳು, ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ಕರೆಯುವ ಕಲ್ಲಿದ್ದಲಿನ ಟೆಂಡರ್‌ನಲ್ಲಿ ಭಾಗವಹಿಸುತ್ತವೆ. ಅದರೆ ಎಲ್ಲವೂ ಪಾರದರ್ಶಕವಾಗಿ ನಡೆಯುವುದಿಲ್ಲ ಎನ್ನುವ ಆರೋಪವಿದೆ. ಕಲ್ಲಿದ್ದಲು ಗಣಿಗಾರಿಕೆ ಹಿಂದೆ ದೊಡ್ಡ ಮಾಫಿಯಾವೇ ಇದೆ. ಇದು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ₹1.86 ಲಕ್ಷ ಕೋಟಿ ಅವ್ಯವಹಾರ ನಡೆದಿತ್ತು ಎಂದು ಹೇಳಲಾಗಿತ್ತು. ಈಗ ಶೇ.80 ಕಲ್ಲಿದ್ದಲನ್ನು ಸಿಐಎಲ್ (ಕೋಲ್ ಇಂಡಿಯಾ ಲಿಮಿಟೆಡ್) ಪೂರೈಸುತ್ತಿದೆ. ಶೇ.20 ಕಲ್ಲಿದ್ದಲು ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿದೆ. ಇನ್ನು, ಖಾಸಗಿ ವಿದ್ಯುತ್ ಉತ್ಪಾದನಾ ವಲಯದಲ್ಲೂ ಕಲ್ಲಿದ್ದಲಿನ ಸಮಸ್ಯೆ ತಲೆದೋರಿದೆ. ಇದರಿಂದ ಅದಾನಿ ವಿದ್ಯುತ್ ಘಟಕಗಳು ಸೇರಿದಂತೆ ಹಲವು ಖಾಸಗಿ ಕಂಪನಿಗಳು ಸ್ಥಗಿತಗೊಂಡಿವೆ ಎನ್ನಲಾಗಿದೆ. ಆದರೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ದೇಶಕ್ಕೆ ಆಮದಾಗುವ ಕಲ್ಲಿದ್ದಲು ದರ ಏರಿಕೆ?
ವಿದೇಶದಿಂದಲೂ ಭಾರತ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತದೆ. ಇಂಡೋನೇಷ್ಯಾ ಭಾರತಕ್ಕೆ ಕಲ್ಲಿದ್ದಲು ಅತಿ ಹೆಚ್ಚು ಕಲ್ಲಿದ್ದಲು ಪೂರೈಕೆ ಮಾಡುತ್ತದೆ. ಆದರೆ ಕಲ್ಲಿದ್ದಲಿನ ದರವನ್ನು ಏರಿಕೆ ಮಾಡಬೇಕು ಎಂದು ಇಂಡೋನೇಷ್ಯಾ ಚಿಂತಿಸುತ್ತಿದೆ. ಇದರಿಂದ ವಿದೇಶಕ್ಕೆ ಕಲ್ಲಿದ್ದಲು ಪೂರೈಕೆಯನ್ನು ಕಡಿಮೆ ಮಾಡಿದೆ. ವಿಶ್ವದ ಪ್ರಮುಖ ವಿದ್ಯುತ್ ಬಳಕೆದಾರ ಭಾರತ ಭಾರತ ದೇಶವು ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ವಿದ್ಯುತ್ ಬಳಕೆದಾರ ದೇಶವಾಗಿದೆ. 2015ರಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿ ಮೂರನೇ ಸ್ಥಾನ ಪಡೆದುಕೊಂಡಿದೆ. ದೇಶದ ಒಟ್ಟು ವಿದ್ಯುತ್ ಬೇಡಿಕೆಯ ಶೇ.65ರಷ್ಟನ್ನು ಕಲ್ಲಿದ್ದಲು ಆಧರಿತ ಶಾಖೋತ್ಪನ್ನ ಘಟಕಗಳು ಪೂರೈಸುತ್ತಿದ್ದು, ಸೋಲಾರ್, ಜಲ ವಿದ್ಯುತ್, ಅಣು ವಿದ್ಯುತ್ ಸ್ಥಾವರಗಳು ನಂತರದ ಸ್ಥಾನ ಪಡೆದಿವೆ.

ರೈಲಿನಲ್ಲೇ ಕಲ್ಲಿದ್ದಲು ಪೂರೈಕೆ: ಅದೂ ದೊಡ್ಡ ಸಮಸ್ಯೆ 
ದೇಶದಲ್ಲಿ ಕಲ್ಲಿದ್ದಲನ್ನು ಕೇವಲ ರೈಲಿನ ರ‍್ಯಾಕ್’ಗಳಲ್ಲಿ (ವ್ಯಾಗನ್) ವಿದ್ಯುತ್ ಘಟಕಗಳಿಗೆ ಕಳುಹಿಸಿಕೊಡಲಾಗುತ್ತದೆ. ಆದರೆ ದೇಶದಲ್ಲಿ ಅಗತ್ಯ ವಿರುಷ್ಟು ರ‍್ಯಾಕ್’ಗಳು ಲಭ್ಯವಿಲ್ಲ. ಕರ್ನಾಟಕ ಸೇರಿದಂತೆ ಹೆಚ್ಚಿನ ರಾಜ್ಯಗಳು ರೈಲು ರ‍್ಯಾಕ್‌ಗಳನ್ನು ಸೇವೆಗೆ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲದೇ ಇನ್ನಿತರ ಸಾರಿಗೆ ವ್ಯವಸ್ಥೆಗಳ ಮೂಲಕ (ದೊಡ್ಡ ದೊಡ್ಡ ಲಾರಿಗಳು) ಕಲ್ಲಿದ್ದಲು ಸಾಗಾಣಿಕೆ ಮಾಡಲು ಕೇಂದ್ರ ಒಪ್ಪಿಗೆ ನೀಡುತ್ತಿಲ್ಲ. ಇದಕ್ಕೆ ರಸ್ತೆ ಹಾಳಾಗುವುದು, ವಾತಾವರಣ ಮಾಲಿನ್ಯ ಇನ್ನಿತರ ಕಾರಣ ನೀಡಲಾಗುತ್ತಿದೆ.

ರಾಜ್ಯದ ಸ್ಥಿತಿ ಎಷ್ಟು ಹದಗೆಟ್ಟಿದೆ..?
ರಾಜ್ಯದಲ್ಲಿ ರಾಯಚೂರಿನ 8 (1720 ಮೆಗಾವ್ಯಾಟ್), ಬಳ್ಳಾರಿಯ 3 (1700 ಮೆ.ವ್ಯಾ.), ಯರಮರಸ್‌ನ 2 ಘಟಕಗಳು (1600 ಮೆ.ವ್ಯಾ) ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದಿಸುತ್ತವೆ. ಕಲ್ಲಿದ್ದಲಿನ ಸಮಸ್ಯೆಯಿಂದ ರಾಯಚೂರಿನ ವಿದ್ಯುತ್ ಘಟಕದಲ್ಲಿ ಕೇವಲ 590 ಮೆ.ವ್ಯಾ. ಮಾತ್ರ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇತರ ಘಟಕಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲೂ ಅವುಗಳ ಸಾಮರ್ಥ್ಯದ ಅರ್ಧಕ್ಕಿಂತ ಕಡಿಮೆ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರತಿ ಗಂಟೆಗೂ ವಿದ್ಯುತ್ ಬೇಡಿಕೆ ವ್ಯತ್ಯಯವಾಗುತ್ತದೆ.
ರಾಜ್ಯವು ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಇರುವುದರಿಂದ ಹಗಲು ವೇಳೆ ಅಲ್ಲಿಂದ ಪಡೆದು ಪೂರೈಸುವುದರಿಂದ ಸಮಸ್ಯೆ ದೊಡ್ಡ ಮಟ್ಟದಲ್ಲಿ ತಲೆದೋರಿಲ್ಲ. ಸಂಜೆ ವೇಳೆ ಕಾಳಿ ವಿದ್ಯುತ್ ಯೋಜನೆ ಸೇರಿದಂತೆ ಉಳಿದ ಮೂಲಗಳಿಂದ ಪಡೆಯಲಾಗುತ್ತಿದೆ. ಆದರೂ ಒಟ್ಟಾರೆ ಬೇಡಿಕೆ ಪೂರೈಸಲು ಇಷ್ಟು ವಿದ್ಯುತ್ ಸಾಕಾಗುತ್ತಿಲ್ಲ. ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ಜಲ ವಿದ್ಯುತ್ ಉತ್ಪಾದನೆ ಉತ್ತಮ ಸ್ಥಿತಿಯಲ್ಲಿದೆ. ಹಾಗಾಗಿ ಪರಿಸ್ಥಿತಿ ತೀರಾ ಹದಗೆಟ್ಟಿಲ್ಲ. ಆದರೆ, ಕಲ್ಲಿದ್ದಲು ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಕತ್ತಲು ಕವಿಯಲಿದೆ.

ಲೇಖನ: ಪ್ರಶಾಂತ್ ಕೆ.ಪಿ, ಕನ್ನಡಪ್ರಭ

Follow Us:
Download App:
  • android
  • ios