ಬೇಸಿಗೆಯಲ್ಲಿ ರಾಜ್ಯಕ್ಕೆ ವಿದ್ಯುತ್‌ ಉತ್ಪಾದಿಸುವ ಗುರುತರ ಜವಾಬ್ದಾರಿ ಹೊಂದಿರುವ ಜಿಲ್ಲೆಯ ಎರಡು ಶಾಖೋತ್ಪನ್ನ ಕೇಂದ್ರಗಳ ಒಟ್ಟು 10 ಘಟಕಗಳ ಪೈಕಿ 4 ಘಟಕಗಳು ಸ್ಥಗಿತಗೊಂಡಿದ್ದು, ಈ ಎರಡೂ ಘಟಕಗಳಿಂದ ಬೇಸಿಗೆ ಆರಂಭದಲ್ಲಿ ರಾಜ್ಯ ಜಾಲಕ್ಕೆ 2020 ಮೆಗಾವ್ಯಾಟ್‌ ವಿದ್ಯುತ್‌ ಕೊರತೆಯಾಗಲಿದ್ದು, ಇದರಿಂದ ವಿದ್ಯುತ್‌ ಕ್ಷಾಮದ ಭೀತಿ ಎದುರಾಗಿದೆ.

ರಾಮಕೃಷ್ಣ ದಾಸರಿ ರಾಯಚೂರು

ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ(ಆರ್‌ಟಿಪಿಎಸ್‌)ದ 1720 ಮೆ.ವ್ಯಾ ಸಾಮರ್ಥ್ಯದ 8 ಘಟಕಗಳ ಪೈಕಿ 1 ಮತ್ತು 2ನೇ ಘಟಕಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿವೆ. ಈ ಎರಡು ಘಟಕಗಳಿಂದ ನಿತ್ಯ ತಲಾ 210 ಮೆ.ವ್ಯಾ. ನಂತೆ ಒಟ್ಟು 420 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಕುಂಠಿತಗೊಳ್ಳಲಿದೆ. ಇದೇ ಕೇಂದ್ರದ ಉಳಿದ 6 ಘಟಕಗಳು ವಿದ್ಯುತ್‌ ಉತ್ಪಾದಿಸುತ್ತಿವೆ.

ಇನ್ನು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೋಕಾರ್ಪಣೆ ಯರಮರಸ್‌ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ(ವೈಟಿಪಿಎಸ)ದ 2 ಘಟಕಗಳೂ ಸ್ಥಗಿತಗೊಂಡಿವೆ. ಇವುಗಳಿಂದ ನಿತ್ಯ ತಲಾ 800 ಮೆ.ವ್ಯಾ.ನಂತೆ ಒಟ್ಟು 1600 ಮೆ.ವ್ಯಾ. ಉತ್ಪಾದನೆಯಾಗುತ್ತದೆ. ಇವೂ ಸ್ಥಗಿತಗೊಂಡಿದ್ದರಿಂದ ರಾಯಚೂರು ಜಿಲ್ಲೆ ಒಂದರಿಂದಲೇ ರಾಜ್ಯ ಘಟಕಕ್ಕೆ ಒಟ್ಟು 2020 ಮೆ.ವ್ಯಾ. ವಿದ್ಯುತ್‌ ಕೊರತೆಯಾಗಲಿದೆ.

ರಾಜ್ಯದ ಎಲ್ಲ ಶಾಖೋತ್ಪನ್ನ ಕೇಂದ್ರಗಳಿಂದ ನಿತ್ಯ 10,536 ಮೆ.ವ್ಯಾ. ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, ಈ ಪೈಕಿ ಸದ್ಯ 4642 ಮೆ.ವ್ಯಾ. ವಿದ್ಯುತ್‌ ಕೊರತೆಯಾಗಿದೆ. ಇದರ ಅರ್ಧದಷ್ಟುಪಾಲು ರಾಯಚೂರಿನ ಎರಡೂ ಶಾಖೋತ್ಪನ್ನ ಕೇಂದ್ರಗಳಿಂದ ಕೊರತೆ ಎದುರಾಗಲಿದೆ.

ಸದ್ಯ ಆರ್‌ಟಿಪಿಎಸ್‌ನ 6 ಘಟಕಗಳಿಂದ ವಿದ್ಯುತ್‌ ಉತ್ಪಾದಿಸುತ್ತಿದ್ದು, 1 ಮತ್ತು 2ನೇ ಘಟಕಗಳನ್ನು ನಾನಾ ಕಾರಣಗಳಿಂದ ಸ್ಥಗಿತಗೊಳಿಸಲಾಗಿದೆ. ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ಈ ಘಟಕಗಳಿಂದಲ್ಲೂ ವಿದ್ಯುತ್‌ ಉತ್ಪಾದಿಸಲಾಗುವುದು.

-ಸಿ.ವೇಣುಗೋಪಾಲ, ಕಾರ್ಯನಿರ್ವಾಹಕ ನಿರ್ದೇಶಕ, ಆರ್‌ಟಿಪಿಎಸ್‌, ರಾಯಚೂರು