ಕಲ್ಲಿದದ್ದಲು ಪೂರೈಕೆ ಕುಂಠಿತ, ಜಲಸಂಗ್ರಹ ಕುಸಿತ | ಮತ್ತೆ ಲೋಡ್‌ಶೆಡ್ಡಿಂಗ್ ಆತಂಕ ?ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ದಿನದಿಂದ ದಿನಕ್ಕೆ ಇಳಿಮುಖ

ಬೆಂಗಳೂರು: ಕುಸಿದ ಕಲ್ಲಿದ್ದಲು ಪೂರೈಕೆ, ವಿದ್ಯುತ್ ಜಲಾಶಯಗಳಲ್ಲಿ ಕಡಿಮೆಯಾದ ನೀರಿನ ಸಂಗ್ರಹದ ಪರಿಣಾಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಕುಸಿಯುತ್ತಿದ್ದು, ಲೋಡ್ ಶೆಡ್ಡಿಂಗ್ ಭೀತಿ ಎದುರಾಗಿದೆ.

ಚುನಾವಣೆ ವರ್ಷದಲ್ಲಿ ಈ ರೀತಿ ವಿದ್ಯುತ್ ಕ್ಷಾಮ ತಲೆದೋರುತ್ತಿರುವುದು ಸಹಜವಾಗೇ ಸಿದ್ದರಾಮಯ್ಯ ಸರ್ಕಾರದಲ್ಲಿ ಆತಂಕ ಮೂಡಿಸಿದೆ. ರಾಜ್ಯದ ಬೆಳಕು ನೀಡುವ ಪ್ರಮುಖ ವಿದ್ಯುತ್ ಮೂಲವಾದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕ (ಆರ್’ಟಿಪಿಎಸ್) ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ (ಬಿಟಿಪಿಎಸ್), ಯರಮರಸ್ ಶಾಖೋತ್ಪನ್ನ ವಿದ್ಯುತ್ ಘಟಕ (ವೈಟಿಪಿಎಸ್)ಗಳಿಗೆ ಅಗತ್ಯ ಪ್ರಮಾಣದ ಕಲ್ಲಿದ್ದಲು ಪೂರೈಕೆ ಆಗದ ಕಾರಣ ವಿದ್ಯುತ್ ಉತ್ಪಾದನೆ ದಿನದಿಂದ ಕಡಿಮೆ ಆಗುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಸದ್ಯಕ್ಕೆ ಒಂದು ದಿನಕ್ಕೆ ಅಗತ್ಯವಿದ್ದಷ್ಟೇ ಕಲ್ಲಿದ್ದಲು ಪೂರೈಕೆ ಮಾಡುತ್ತಿದೆ, ಕೈಯಿಂದ ಬಾಯಿಗೆ ಎಂಬಂತೆ ಪೂರೈಕೆ ಮಾಡಲಾಗುತ್ತಿದೆ. ಆದರೆ ಪೂರೈಕೆಯಲ್ಲಿ ಕೊಂಚ ವ್ಯತ್ಯಾಸವಾದರೂ ಮೂರು ಶಾಖೋತ್ಪನ್ನ ಕೇಂದ್ರಗಳ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.

ವಿದ್ಯುತ್ ಪರಿಸ್ಥಿತಿ ಇನ್ನಷ್ಟು ಹದಗೆಡದಂತೆ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ಉನ್ನತ ಅಧಿಕಾರಿಗಳ ಸಭೆ ನಡೆಯಿತು.

ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಲೋಡ್ ಶೆಡ್ಡಿಂಗ್ ಸಾಧ್ಯತೆಯ ಸುಳಿವು ನೀಡಿದರು. ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಬರುವ ದಿನಗಳಲ್ಲಿ ವಿದ್ಯುತ್ ಅಭಾವ ಎದುರಾಗುವ ಆತಂಕವಿದೆ, ಆಯಾ ದಿನಕ್ಕೆ ಅಗತ್ಯವಾದ ಕಲ್ಲಿದ್ದಲು ಪೂರೈಸುವ ಬದಲು ಹೆಚ್ಚುವರಿಯಾಗಿ ಕಲ್ಲಿದ್ದಲು ನೀಡಿ ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರೂ ಕೇಂದ್ರ ಸರ್ಕಾರ ರೈಲು ಹೊರತುಪಡಿಸಿ ಬೇರೆ ಯಾವ ಮೂಲದಿಂದಲೂ ಕಲ್ಲಿದ್ದಲು ಕಳುಹಿಸುವುದಿಲ್ಲ ಎಂಬ ಹಟಕ್ಕೆ ಬಿದ್ದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣ ತ್ವರಿತ ಇತ್ಯರ್ಥಕ್ಕೆ ಮನವಿ: ‘ಕಲ್ಲಿದ್ದಲು ಪೂರೈಕೆ ಸಂಬಂಧ ಕೆಲವು ವ್ಯಾಜ್ಯಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರಕ್ಕೆ ಕಾರಣ ಕೇಳಿ ನೋಟಿಸ್ ಸಹ ಬಂದಿದೆ. ಕೋರ್ಟ್ ಸರದಿಯ ಮೇಲೆ ಪ್ರಕರಣಗಳ ವಿಚಾರಣೆ ಮಾಡಲಾಗುತ್ತಿದೆ ಎನ್ನುತ್ತಿದೆ. ಆದರೆ ನಮಗೆ ಪ್ರಕರಣ ಬೇಗ ಇತ್ಯರ್ಥವಾದರೆ ಹೆಚ್ಚುವರಿ ಕಲ್ಲಿದ್ದಲು ಪೂರೈಕೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವಂತೆ ವಕೀಲರ ಮೂಲಕ ಕೋರ್ಟ್‌ಗೆ ಮನವಿ ಮಾಡಿಕೊಳ್ಳುವ ಸಂಬಂಧ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಈಗಾಗಲೇ ಮಳೆಗಾಲ ಮುಗಿದಿದ್ದು, ಬಿಸಿಲಿನ ತಾಪ ಹೆಚ್ಚಾಗಿ, ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿದ್ಯುತ್ ಜಲಾಶಯಗಳ ನೀರಿನ ಸಂಗ್ರಹ ಮಟ್ಟ ಕೂಡಾ ಕಡಿಮೆ ಇದೆ. ಆದ್ದರಿಂದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸಲು ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಜಾಸ್ತಿ ಮಾಡಲೇ ಬೇಕಾಗಿದೆ. ಒಂದು ವೇಳೆ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾದರೂ ವಿದ್ಯುತ್ ಲೋಡ್‌ಶೆಡ್ಡಿಂಗ್ ಜಾರಿಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.

ಪಕ್ಷಕ್ಕೆ ಹಾನಿ ಆತಂಕ: ರಾಜ್ಯ ವಿಧಾನಸಭಾ ಚುನಾವಣೆ ಬರುವ ಮಾರ್ಚ್, ಏಪ್ರಿಲ್‌ನಲ್ಲಿ ನಡೆಯುವ ಸಾಧ್ಯತೆ ಇದೆ, ಈ ತಿಂಗಳು ಬೇಸಿಗೆ ಹೆಚ್ಚಾಗಿ ವಿದ್ಯುತ್ ಬೇಡಿಕೆ ಕೂಡಾ ಜಾಸ್ತಿ ಇರುತ್ತದೆ, ಇಂತಹ ಸಂದರ್ಭದಲ್ಲಿ ಲೋಡ್ ಶೆಡ್ಡಿಂಗ್ ಜಾರಿಯಾದರೆ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾರೆ, ಅಷ್ಟೇ ಅಲ್ಲ ಚುನಾವಣೆ ಮೇಲೆ ಪರಿಣಾಮ ಬೀರಿ ಪಕ್ಷಕ್ಕೆ ಹಾನಿಯಾಗುವ ಆತಂಕವನ್ನು ಸಚಿವರು ಮುಖ್ಯ ಮಂತ್ರಿಗಳಲ್ಲಿ ವ್ಯಕ್ತಪಡಿಸಿದರೆಂದು ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ತಕ್ಷಣ ಕಲ್ಲಿದ್ದಲು ಪೂರೈಸುವ ಸಂಬಂಧ ಕೇಂದ್ರ ಕಲ್ಲಿದ್ದಲು ಸಚಿವರಿಗೆ ಪತ್ರ ಬರೆಯುವಂತೆ ಸಚಿವ ಶಿವಕುಮಾರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಅನಿವಾರ್ಯವಾಗಿ ವಿದ್ಯುತ್ ಖರೀದಿಸಿದರೂ ಅದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವುದರಿಂದ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೆಂದು ಗೊತ್ತಾಗಿದೆ.