ಕೋಲ್ಕತಾ : ದೇಶದಲ್ಲಿ ಉದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ ಎನ್ನುವ ವಿಚಾರ ಹೊರಬಿದ್ದಿದೆ. ಇದರ ಬೆನ್ನಲ್ಲೇ ಕೋಲ್ಕತಾ ಯುವಕನೋರ್ವನ ಕಥೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. 

ಕಾಮರ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೀರಜ್ ಎಂಬ ಯುವಕ ಆಹಾರ ವಿತರಿಸುವ  ಜೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. 

ಫುಡ್ ಆ್ಯಪ್ ನಲ್ಲಿ ಅಪ್ಲೋಡ್ ಮಾಡಿರುವ ಬಯೊಡೇಟಾದಲ್ಲಿ ತಮ್ಮ ಶೈಕ್ಷಣಿಕ ಅರ್ಹತೆ ಪ್ರಕಟಿಸಿದ್ದು, ಇದನ್ನು ನೋಡಿರುವ ಗ್ರಾಹಕರೋರ್ವರು  ತಮ್ಮ ಫೇಸ್ ಬುಕ್ ನಲ್ಲಿ  ಈ ವಿಚಾರ ಹಂಚಿಕೊಂಡಿದ್ದಾರೆ. 

ಶೌವಿಕ್ ದತ್ತಾ ಎನ್ನುವ ಪದವಿ ವಿದ್ಯಾರ್ಥಿ ಆನ್ ಲೈನ್ ನಲ್ಲಿ   ಫುಡ್ ಆರ್ಡರ್ ಮಾಡಲು  ಜೊಮ್ಯಾಟೋ ಆ್ಯಪ್ ನೋಡಿದಾಗ ಈ ಅಚ್ಚರಿ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಶೌವಿಕ್ ಇದರ ಸ್ಕ್ರೀನ್ ಶಾಟ್ ತೆಗೆದು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.  

ಅಲ್ಲದೇ ಈ ವಿಚಾರ ಕಣ್ಣಿಗೆ ಬೀಳುತ್ತಿದ್ದಂತೆ ಮೊದಲ ಬಾರಿ ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡಲು ನನಗೆ ಮರುಕವಾಯ್ತು ಎಂದು ಹೇಳಿಕೊಂಡಿದ್ದಾರೆ. 

ಮೀರಜ್ ನಮ್ಮ ಮನೆಗೆ ಫುಡ್ ಡೆಲಿವರಿಗೆ ಬಂದಾಗ ಅವರ ಮುಖದಲ್ಲಿ ನಗುವೊಂದಿತ್ತು.  ಈ ವೇಳೆ ನಮ್ಮ ನಡುವೆ ಸಣ್ಣ ಮಾತುಕತೆಯೊಂದು ನಡೆದಿದ್ದು, ಅವರು ಕೋಲ್ಕತಾ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ ಪದವಿ ಪಡೆದಿದ್ದು, ಫೈನಾನ್ಸ್ ಮತ್ತು ಇನ್ವೆಸ್ಟ್ ಬ್ಯಾಂಕಿಂಗ್ ನಲ್ಲಿ ಪಿಜಿ ಡಿಪ್ಲೊಮೊ ಮಾಡಿರುವುದು ಗೊತ್ತಾಯ್ತು ಎಂದು ಶೌವಿಕ್ ಹೇಳಿಕೊಂಡಿದ್ದಾರೆ. 

ಅಲ್ಲದೇ ಇದೇ ವೇಳೆ ಸಂದೇಶವೊಂದನ್ನು ನೀಡಿದ್ದು, ಈ ದೇಶ ಬದಲಾಗುವ ಅಗತ್ಯವಿದೆ.  ರಾಜ್ಯದ ಸ್ಥಿತಿಯೂ  ಕೂಡ ಬದಲಾಗಬೇಕಿದೆ. ಅತ್ಯಂತ ಕಷ್ಟದಲ್ಲಿ ನಾವೆಲ್ಲಾ ಬದುಕು ನಡೆಸುತ್ತಿದ್ದೇವೆ. ಬದಲಾವಣೆ ಅಗತ್ಯ ಹೆಚ್ಚಿದೆ ಎಂದು ಬರೆದುಕೊಂಡಿದ್ದಾರೆ.