ರಾಂಚಿ (ಸೆ.24): ಮಹಿಳಾ ರೋಗಿಗೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ನೆಲದ ಮೇಲೆ ಊಟ ಬಡಿಸಿರುವ ಅಘಾತಕಾರಿ ಘಟನೆ ರಾಂಚಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಕೈಮುರಿತಕ್ಕೊಳಗಾಗಿ ರಾಂಚಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಾಖಲಾಗಿದ್ದ ಪಲ್ಮತಿ ದೇವಿ ಎಂಬಾಕೆ ಸಿಬ್ಬಂದಿಯ ಬಳಿ ಊಟ ಕೊಡುವಂತೆ ಕೇಳಿಕೊಂಡಿದ್ದಾಳೆ. ಊಟ ಕೊಡಲು ಸಿಬ್ಬಂದಿ ಮೊದಲು ನಿರಾಕರಿಸಿದ್ದಾರೆ. ಬಳಿಕ ತಟ್ಟೆಗಳು ಇಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ನೆಲದ ಮೇಲೆಯೇ ಊಟ ಬಡಿಸಿದ್ದಾರೆ.

ಹಸಿವಿನಿಂದ ಕಂಗಾಲಾಗಿದ್ದ ದೇವಿ ಬೇರೆ ವಿಧಿಯಿಲ್ಲದೇ ನೆಲದ ಮೇಲೆಯೇ ಬಡಿಸಿದ ಅನ್ನ-ಸಾರನ್ನು ತಿಂದಿದ್ದಾಳೆ.

ಪಲ್ಮತಿ ದೇವಿ ನೆಲದ ಮೇಲೆ ಬಡಿಸಲಾದ ಊಟಮಾಡುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜನರು ಆಸ್ಪತ್ರೆ ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತದನಂತರ ಆಸ್ಪತ್ರೆ ನಿರ್ದೇಶಕ ಘಟನೆಯ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.