ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಸಮುದಾಯ ವನ್ನೇ ಗುರಿಯಾಗಿಸಿಕೊಂಡು ವಂಚಿಸುವ ಕಂಪನಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಇದರ ಸಾಲಿಗೆ ಹೊಸ ಸೇರ್ಪಡೆ ಐಎಂಎ ಸಂಸ್ಥೆಯಾಗಿದೆ.

ಆ್ಯಂಬಿಡೆಂಟ್ ಕಂಪನಿ ಕೃತ್ಯ 2017 ರಲ್ಲಿ ಅಧಿಕ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ ಒಂದು ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಸಂಗ್ರಹಿಸಿದ್ದ ದೇವರಜೀವನ ಹಳ್ಳಿಯ ಆ್ಯಂಬಿಡೆಂಟ್ ಕಂಪನಿಯ ವಂಚನೆಯ ಕೃತ್ಯ ಬೆಳಕಿಗೆ ಬಂದಿತ್ತು. ಈ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಬಂಧನವಾಗಿತ್ತು.

ಇಸ್ಲಾಮಿಕ್ ಮತ್ತು ಹಲಾಲ್ ಬ್ಯಾಂಕಿಂಗ್ ಹೆಸರಿನಲ್ಲಿ ಮುಸ್ಲಿಂ ಸಮುದಾಯವರಿಗೆ ಮಂಕುಬೂದಿ ಎರೆಚಿ ಹಣ ವಸೂಲಿ ಮಾಡಿದ ಆಪಾದನೆಗೆ ಆ್ಯಂಬಿಡೆಂಟ್ ಕಂಪನಿ ತುತ್ತಾಗಿತ್ತು. 2015 ರಲ್ಲಿ ಡಿ.ಜೆ.ಹಳ್ಳಿಯಲ್ಲಿ ಆ್ಯಂಬಿಡೆಂಟ್ ಕಂಪನಿಯನ್ನು ಸ್ಥಾಪಿಸಿದ ಸೈಯದ್ ಅಹಮದ್ ಫರೀದ್, ಕೆಲ ತಿಂಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಸಿ ಜನರಿಗೆ ನಾಮ ಹಾಕಿದ್ದ. ಈ ಬಗ್ಗೆ ತನಿಖೆ ನಡೆಸಿದ ಸಿಸಿಬಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಹ ಸಲ್ಲಿಸಿದೆ. ಹಾಗೆಯೇ ತನಿಖೆ ಸಹ ಮುಂದುವರಿಸಿದೆ. 

ಅಜ್ಮೇರಾ ಕಂಪನಿಯ ಮೋಸ

ಆ್ಯಂಬಿಡೆಂಟ್ ವಂಚನೆ ಬಯಲಾದ ಕೆಲವೇ ದಿನಗಳಲ್ಲಿ ಜಯನಗರದ ಅಜ್ಮೇರಾ ಕಂಪನಿಯ ದೋಖಾ ಬೆಳಕಿಗೆ ಬಂದಿತ್ತು. ಈ ಕಂಪನಿ ಸಹ ಹೆಚ್ಚಿನದಾಗಿ ಮುಸ್ಲಿಂ ಸಮುದಾಯವನ್ನೇ ಟಾರ್ಗೆಟ್ ಮಾಡಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿ ಕೊಂಡ ಸಿಸಿಬಿ, ಬೆಂಗಳೂರು ಮತ್ತು ಮೈಸೂರಿ ನಲ್ಲಿ ಕಂಪನಿಗೆ ಸೇರಿದ 33  ಕೋಟಿ ಮೌಲ್ಯದ ಆಸ್ತಿ ಜಪ್ತಿಯಾಗಿತ್ತು. ಕಂಪನಿ ನಿರ್ದೇಶಕರಾದ ತಬ್ರೇಜ್ ಪಾಷ ಮತ್ತು ತಬ್ರೇಜ್‌ವುಲ್ಲಾ ಷರೀಫ್‌ರನ್ನು ಸಹ ಸಿಸಿಬಿ ಬಂಧಿಸಿತ್ತು. 

ಇಝಾ ಕಂಪನಿ ಮಂಕುಬೂದಿ

ಲಾಭ ಆಸೆ ತೋರಿಸಿ ಜನರಿಗೆ ಮೋಸಗೊಳಿಸಿದ ಆರೋಪ ಹೊತ್ತು ವಿದೇಶಕ್ಕೆ ಪರಾರಿ ಯಾಗಿರುವ ಆರ್.ಟಿ.ನಗರದ ಇಝಾ ಕಂಪನಿ  ಆಡಳಿತ ಮಂಡಳಿ ಸದಸ್ಯರ ಪತ್ತೆಗೆ ಸಿಸಿಬಿ ತನಿಖೆ ನಡೆಸುತ್ತಿದೆ. ಈ ಕಂಪನಿ ಸಹ ಅಧಿಕ ಬಡ್ಡಿ ಆಮಿಷವೊಡ್ಡಿ ಸಾರ್ವಜನಿಕರಿಗೆ 89 ಕೋಟಿ ಮೋಸಗೊಳಿಸಿದೆ. ಈ ಬಗ್ಗೆ ಪ್ರಕರಣ ದಾಖಲಾದ ಕೂಡಲೇ ಆರೋಪಿಗಳು ತಪ್ಪಿಸಿಕೊಂ ಡಿದ್ದು, ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ. 

ಡಿ.ಜೆ.ಹಳ್ಳಿಯ ಬುರಾಕ್ ಕಂಪನಿ

ದುಬಾರಿ ಲಾಭ ಆಮಿಷವೊಡ್ಡಿ ಜನರಿಗೆ ವಂಚಿಸಿದ ಮೋಸದ ಕಂಪನಿಗಳ ಸಾಲಿಗೆ ಬುರಾಕ್ ಸಂಸ್ಥೆ ಸಹ ಸೇರಿದೆ. ಜನರಿಗೆ ಸುಮಾರು 16 ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆ ಕಂಪನಿಯ ನಿರ್ದೇಶಕರ ವಿರುದ್ಧ ಸಿಸಿಬಿ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾಂಗೋಲಿಯಾ ಧೋಖಾ 

2018 ರಲ್ಲಿ ಬೆಳಕಿಗೆ ಬಂದ ಮತ್ತೊಂದುವಂಚನೆ ಕಂಪನಿಯೇ ಮಾಂಗೋಲಿಯಾ. ಈ ಸಂಸ್ಥೆ ಸಹ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿಗೆ ಹಣ ವಸೂಲಿಗೆ ಮಾಡಿ ನಾಮ ಹಾಕಿದ ಆ ಆರೋಪಕ್ಕೆ ತುತ್ತಾಗಿದೆ. ಈ ಪ್ರಕರಣದ ಆರೋಪಿಗಳು ಸಹ ವಿದೇಶದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.