ಒಟ್ಟು 68 ವಿಧಾನಸಭಾ ಸ್ಥಾನಗಳ ಪೈಕಿ ಪ್ರಸ್ತುತ ಆಡಳಿತರೂಢ ಕಾಂಗ್ರೆಸ್ 36 ಸ್ಥಾನಗಳನ್ನು ಗೆದ್ದಿದ್ದರೆ, ಪ್ರತಿಪಕ್ಷ ಬಿಜೆಪಿ 26 ಶಾಸಕರ ಬಲ ಹೊಂದಿದೆ.

ಹಿಮಾಚಲ ಪ್ರದೇಶ(ನ.09): ಗುಡ್ಡಗಾಡು ರಾಜ್ಯ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಎಲ್ಲ 68 ಕ್ಷೇತ್ರಗಳಲ್ಲಿಯೂ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ ಸ್ಪರ್ಧಿಸುತ್ತಿದ್ದು ಒಟ್ಟು 337 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಶಾಂತಿಕಾಪಾಡಲು ಒಟ್ಟು 11 ಸಾವಿರ ಪೊಲೀಸರು, ಹಾಗೂ ಪ್ಯಾರಾಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ.

ಹಿಮಾಚಲ ಪ್ರದೇಶದ 62 ಶಾಸಕರು ಪುನರಾಯ್ಕೆ ಬಯಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಎಸ್‌'ಪಿ 42, ಸಿಪಿಎಂ 14 ಮತ್ತು ಸ್ವಾಭಿಮಾನ ಪಾರ್ಟಿ ಮತ್ತು ಎಲ್‌'ಜಿಪಿ ತಲಾ ಆರು ಮತ್ತು ಸಿಪಿಐ 3 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಒಟ್ಟು 19 ಮಹಿಳೆಯರು ಈ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

Scroll to load tweet…
Scroll to load tweet…

ಝಂದುತಾ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದರೆ ಧರ್ಮಶಾಲಾದಲ್ಲಿ ಗರಿಷ್ಠ 12 ಅಭ್ಯರ್ಥಿಗಳಿದ್ದಾರೆ. ರಾಷ್ಟ್ರೀಯ ಪಕ್ಷಗಳು 12 ದಿನಗಳ ಕಾಲ ಅಬ್ಬರದ ಪ್ರಚಾರ ನಡೆಸಿದ್ದವು. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು 450 ರ‍್ಯಾಲಿಗಳನ್ನು ಸಂಘಟಿಸಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಏಳು ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಆರು ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮೂರು ಸಮಾವೇಶಗಳಲ್ಲಿ ಭಾಗವಹಿಸಿ ಮಾತನಾಡಿದ್ದರು. ಯಾವುದೇ ಪಕ್ಷದ ಸರ್ಕಾರ ಸತತ ಎರಡು ಬಾರಿ ಇಲ್ಲಿ ಅಧಿಕಾರಕ್ಕೆ ಏರಿದ ನಿದರ್ಶನವಿಲ್ಲ. ಹಾಗಿದ್ದರೂ, ಆರು ಬಾರಿ ಮುಖ್ಯಮಂತ್ರಿಯಾಗಿರುವ 85ರ ವೀರಭದ್ರ ಸಿಂಗ್‌ ಅವರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಚುನಾವಣಾ ಪ್ರಚಾರದ ಮಧ್ಯದಲ್ಲಿ ಪ್ರೇಮಕುಮಾರ್‌ ಧುಮಾಲ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿತು. ಇದು ಪಕ್ಷಕ್ಕೆ ಹೆಚ್ಚಿನ ಬಲ ತಂದು ಕೊಟ್ಟಿದೆ ಎಂದು ವಿಶ್ಲೇಷಕರ ಲೆಕ್ಕಾಚಾರ.

ಒಟ್ಟು 68 ವಿಧಾನಸಭಾ ಸ್ಥಾನಗಳ ಪೈಕಿ ಪ್ರಸ್ತುತ ಆಡಳಿತರೂಢ ಕಾಂಗ್ರೆಸ್ 36 ಸ್ಥಾನಗಳನ್ನು ಗೆದ್ದಿದ್ದರೆ, ಪ್ರತಿಪಕ್ಷ ಬಿಜೆಪಿ 26 ಶಾಸಕರ ಬಲ ಹೊಂದಿದೆ.