ಪಂಚರಾಜ್ಯ ಚುನಾವಣೆಗಳ ಪ್ರಚಾರಕ್ಕೆ ಹೆಲಿಕಾಪ್ಟರ್ ಪೂರೈಸುತ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಭಾರಿ ಪೆಟ್ಟು ಬಿದ್ದಿದೆ.

ನವದೆಹಲಿ(ಜ.08): ದೇಶಾದ್ಯಂತ ನಡೆಯುತ್ತಿರುವ ಐಟಿ ದಾಳಿಗಳಿಗೆ ಪಂಚರಾಜ್ಯಗಳ ಚುನಾವಣೆ ಸ್ಪರ್ಧಿಗಳು ಬೆದರಿದ್ದಾರೆ ಅಂದರೆ ಅಕ್ಷರಶಃ ತಪ್ಪಾಗಲಾರದು. ಚುನಾವಣೆ ಪ್ರಚಾರಕ್ಕೆ ಹೆಲಿಕಾಪ್ಟರ್ ಬಳಸುತ್ತಿದ್ದ ರಾಜಕೀಯ ನಾಯಕರು ಇದೀಗ ನಟರಾಜ ಸರ್ವಿಸ್ ನತ್ತ ಮುಖ ಮಾಡಿದ್ದಾರೆ. ಇದನ್ನು ಖುದ್ದು ರಾಜಕೀಯ ನಾಯಕರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಾಲ್ನಡಿಗೆಯಲ್ಲಿ ಮನೆ ಮನೆಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದು ಐಷಾರಾಮಿ ಪ್ರಚಾರದಿಂದ ದೂರ ಸರಿದಿದ್ದಾರೆ.

ಪಂಚರಾಜ್ಯ ಚುನಾವಣೆಗಳ ಪ್ರಚಾರಕ್ಕೆ ಹೆಲಿಕಾಪ್ಟರ್ ಪೂರೈಸುತ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಭಾರಿ ಪೆಟ್ಟು ಬಿದ್ದಿದೆ. ಮುಂಗಡ ಹಣ ಪಾವತಿಸಿ ಹೆಲಿಕಾಪ್ಟರ್ ಬುಕ್ ಮಾಡಿದ್ದ ನಾಯಕರು ಅದನ್ನು ಕನ್'ಫರ್ಮ್​ ಮಾಡದೇ ಹಿಂದೆ ಸರಿದಿದ್ದಾರೆ. ಕಾರ್ಡ್​ ಅಥವಾ ಚೆಕ್ ನೀಡಿ ಹಣ ಪಾವತಿಸಲು ಅವಕಾಶ ಕಲ್ಪಿಸಿದ್ದರು. ಚುನಾವಣಾ ಸ್ಫರ್ಧಿಗಳು ಹೆಲಿಕಾಪ್ಟರ್ ಬಳಸಿಕೊಳ್ಳಲು ಮುಂದಾಗದಿರುವುದು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ನುಂಗಲಾರದ ತುತ್ತಾಗಿದೆ. 

ಒಂದು ಬಾರಿ ಹೆಲಿಕಾಪ್ಟರ್ ಬಳಸಬೇಕೆಂದರೆ ಅದಕ್ಕೆ ಬರೋಬ್ಬರಿ 1 ಲಕ್ಷ ರೂ. ವೆಚ್ಚ ತಗಲುತ್ತದೆ. ಅದಕ್ಕೆ 15 ಪರ್ಸೆಂಟ್ ತೆರಿಗೆ ಹಾಗೂ ಅದರಲ್ಲಿ ಆಹಾರ ಮತ್ತು ಅದರ ನಿರ್ವಾಹಣೆ ಸೇರಿದರೆ 1.75 ಲಕ್ಷ ರೂ. ಆಗುತ್ತದೆ. ಅಷ್ಟೆ ಅಲ್ಲದೆ ನಾವು ಪ್ರಚಾರಕ್ಕೆ ತೆರಳುವ ಮಾರ್ಗದಲ್ಲಿ ವಿಮಾನಗಳಿಗೆ ಬಳುಸುವ ತೈಲಗಳು ಸಿಗುವುದಿಲ್ಲ ,ಇದರಿಂದಾಗಿ ನಾವು ಇಂಧನ ಪೂರೈಕೆಗಾಗಿ ದೆಹಲಿ, ಲಖನೌ ಮತ್ತು ಚಂಡೀಗಡಕ್ಕೆ ತೆರಳಬೇಕಿರುವುದರಿಂದ ಪ್ರಯಾಣದ ದರ ಮತ್ತಷ್ಟು ದುಬಾರಿಯಾಗುತ್ತದೆ ಎಂದು ರಾಜಕೀಯ ನಾಯಕರು ಹೇಳುತ್ತಿದ್ದಾರೆ.

ಒಟ್ಟಾರೆ ಚುನಾವಣಾ ಆಯೋಗ , ಐಟಿ ಅಧಿಕಾರಿಗಳ ಭೀತಿಯಿಂದ ರಾಜಕೀಯ ನಾಯಕರು ದುಬಾರಿ ಪ್ರಯಾಣ ಎಂಬ ನೆಪವೊಡ್ಡಿ ಐಷರಾಮಿ ಪ್ರಚಾರಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಮೋದಿ ನೋಟ್ ಬ್ಯಾನ್ ನಿರ್ಧಾರ ಬಿಸಿ ಮುಟ್ಟಿಸಿದಂತು ಸುಳ್ಳಲ್ಲ.

ವರದಿ: ಗೌತಮ್ ಚಿಕ್ಕನಂಜಯ್ಯ, ಸುವರ್ಣ ನ್ಯೂಸ್