ಲಖನೌ[ಸೆ.14]: ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ ಮುಖ್ಯಮಂತ್ರಿಗಳು ಮತ್ತು ಸಚಿವರು, ಕಳೆದ 4 ದಶಕಗಳಿಂದ ತಮ್ಮ ತೆರಿಗೆ ದುಡ್ಡನ್ನೂ ಸರ್ಕಾರದಿಂದಲೇ ಪಡೆದುಕೊಳ್ಳುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಕಳೆದ 4 ದಶಕಗಳಲ್ಲಿ ರಾಜ್ಯವನ್ನು 19 ಮುಖ್ಯಮಂತ್ರಿಗಳು ಮತ್ತು ಕನಿಷ್ಠ 1000ಕ್ಕೂ ಹೆಚ್ಚು ಸಚಿವರು ಆಳಿದ್ದಾರೆ. ಇವರೆಲ್ಲರೂ ತಮ್ಮ ಆದಾಯಕ್ಕೆ ಪಾವತಿಸಬೇಕಾದ ತೆರಿಗೆ ಹಣವನ್ನು ಸರ್ಕಾರದ ಬೊಕ್ಕಸದಿಂದಲೇ ಪಾವತಿಸುತ್ತಾ ಬಂದಿದ್ದಾರೆ.

1981ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ವಿ.ಪಿ.ಸಿಂಗ್‌ ಅವರು ರಾಜ್ಯದ ಹಲವು ಸಚಿವರು ಉತ್ತಮ ಆರ್ಥಿಕ ಹಿನ್ನೆಲೆ ಹೊಂದಿರದ ಕಾರಣ, ಅವರ ತೆರಿಗೆಯನ್ನು ಸರ್ಕಾರವೇ ಭರಿಸಬೇಕು ಎಂದು ವಾದಿಸಿ, ಈ ಕುರಿತು ರಾಜ್ಯ ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಅಂಗೀಕರಿಸಿದ್ದರು. ಬಳಿಕ ರಾಜ್ಯವನ್ನು ನೂರಾರು ಕೋಟಿ ರು. ಆಸ್ತಿ ಹೊಂದಿದ ಸಚಿವರು, ಮುಖ್ಯಮಂತ್ರಿಗಳು ಆಳಿದ್ದರೂ, ಕೂಡಾ, ಅವರೆಲ್ಲಾ ತಮ್ಮ ಆದಾಯ ತೆರಿಗೆಯನ್ನು ಸರ್ಕಾರದ ಬೊಕ್ಕಸದಿಂದಲೇ ಪಡೆದುಕೊಳ್ಳುತ್ತಾ ಬರುತ್ತಿದ್ದಾರೆ.

ನೂರಾರು ಕೋಟಿ ರು. ಆಸ್ತಿ ಹೊಂದಿದ್ದರೂ, ತಾವು ಸರ್ಕಾರದಿಂದ ಪಡೆಯುವ ವೇತನ ಮತ್ತು ಭತ್ಯೆಗೆ ಬರುವ ತೆರಿಗೆಯನ್ನೂ ಸಚಿವರು ಮತ್ತು ಸಿಎಂಗಳು ಸರ್ಕಾರದ ಬೊಕ್ಕಸದಿಂದಲೇ ಪಡೆಯುತ್ತಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ. ಪ್ರಸಕ್ತ ವರ್ಷ ಸಿಎಂ ಯೋಗಿ ಆದಿತ್ಯನಾಥ್‌ ಅವರ ಸಚಿವ ಸಂಪುಟದ ತೆರಿಗೆ ಪ್ರಮಾಣವು 86 ಲಕ್ಷ ರು.ನಷ್ಟುಇದ್ದು, ಅದನ್ನು ರಾಜ್ಯ ಸರ್ಕಾರವೇ ಪಾವತಿಸಿದೆ.

ಈ ನಡುವೆ ಸಚಿವರು, ಸಿಎಂಗಳ ನಡೆಗೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ, ಈ ಬಗ್ಗೆ ಸಿಎಂ ಯೋಗಿ ಜೊತೆ ಮಾತನಾಡಿ ಸರ್ಕಾರದಿಂದ ತೆರಿಗೆ ಪಾವತಿ ವ್ಯವಸ್ಥೆಗೆ ಬ್ರೇಕ್‌ ಹಾಕುವುದಾಗಿ ಸಂಸದೀಯ ಖಾತೆ ಸಚಿವ ಸುರೇಶ್‌ ಖನ್ನಾ ತಿಳಿಸಿದ್ದಾರೆ.