'ಕಾಫಿ ಕಿಂಗ್' ಸಿದ್ಧಾರ್ಥ ಅನಿರೀಕ್ಷಿತ ಸಾವು: ಟ್ವಿಟರ್‌ನಲ್ಲಿ ಗಣ್ಯರ ಸಂತಾಪ!
ನಾಪತ್ತೆಯಾಗಿದ್ದ 'ಕಾಫಿ ರಾಜ' ಸಿದ್ಧಾರ್ಥ ಮೃತದೇಹ ಪತ್ತೆ| 36 ಗಂಟೆಗಳ ಬಳಿಕ ನೇತ್ರಾವತಿ ನದಿ ಹಿನ್ನೀರಿನಲ್ಲಿ ಪತ್ತೆಯಾದ ಮೃತದೇಹ| ಸಿದ್ಧಾರ್ಥ ಅನಿರೀಕ್ಷಿತ ಅಗಲುವಿಕೆಗೆ ಕಂಬನಿ ಮಿಡಿದ ಗಣ್ಯರು
ಬೆಂಗಳೂರು[ಜು.31]: 36 ಗಂಟೆಗಳ ಹಿಂದೆ ನಾಪತ್ತೆಯಾಗಿದ್ದ ಕಾಪೀ ಡೇ ಮಾಲೀಕನ ಮೃತದೇಹ ನೇತ್ರಾವತಿ ನದಿಯಲ್ಲಿ ಇಂದು ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ಈ ಮೂಲಕ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಬದುಕು ಕಟ್ಟಿಕೊಟ್ಟಿದ್ದ ಉದ್ಯಮಿ ಬದುಕಿ ಬರಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಅಂತಾರಷ್ಟ್ರೀಯ ಮಟ್ಟದಲ್ಲಿ ಕಾಫೀ ಕಂಪು ಪಸರಿಸಿದ್ದ 'ಕಾಫಿ ಕಿಂಗ್' ಒಡೆಯ ವಿ. ಜೆ. ಸಿದ್ಧಾರ್ಥ ಅನಿರೀಕ್ಷಿತ ಅಗಲುವಿಕೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಟ್ವೀಟ್ ಮೂಲಕ ಸಿದ್ಧಾರ್ಥ ಅಗಲುವಿಕೆಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ 'ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣ ಅವರ ಅಳಿಯ ಕೆಫೆ ಕಾಫಿ ಡೇ ಸಂಸ್ಥಾಪಕ ಹಾಗೂ ಉದ್ಯಮಿ ಸಿದ್ದಾರ್ಥ್ ಅವರ ಸಾವು ತೀವ್ರ ಆಘಾತ ಹಾಗೂ ಅಪಾರ ನೋವು ತಂದಿದೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. #OmShanti' ಎಂದಿದ್ದಾರೆ.
ಇತ್ತ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿದ್ದು, 'ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕೀಡಾಗಿದ್ದೇನೆ. ತಮ್ಮ ಪಾಲಿಗೆ ಮಗನೇ ಆಗಿದ್ದ ಸಿದ್ಧಾರ್ಥ ಅವರ ಅಗಲಿಕೆಯಿಂದ ಎಸ್.ಎಂ.ಕೃಷ್ಣ ಮತ್ತು ಕುಟುಂಬ ವರ್ಗ ಅನುಭವಿಸುತ್ತಿರುವ ನೋವು-ಸಂಕಟಗಳನ್ನು ನಾನು ಅರ್ಥಮಾಡಿಕೊಳಬಲ್ಲೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು' ಎನ್ನುವ ಮೂಲಕ ಸಂತಾಪ ಸೂಚಿಸಿದ್ದಾರೆ.
ನಾಪತ್ತೆಯಾದ ಕಾಫಿ ಡೇ ಒಡೆಯ ಮೃತದೇಹ ಪತ್ತೆ: ಸೋಮವಾರದಿಂದ ಏನೇನಾಯ್ತು?
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರೂ ಟ್ವೀಟ್ ಮಾಡಿದ್ದು, 'ವಿ.ಜಿ. ಸಿದ್ಧಾರ್ಥ ಅವರ ಸಾವಿನ ವಿಷಯ ತಿಳಿದು ಆಘಾತವಾಗಿದೆ. ಸಿದ್ಧಾರ್ಥರವರದ್ದು ತುಂಬಾ ಸರಳ ವ್ಯಕ್ತಿತ್ವ. 35 ವರ್ಷಗಳಿಂದ ಅವರನ್ನು ನಾನು ನೋಡಿದ್ದೇನೆ. ಸಾವಿರಾರು ಜನರ ಸ್ವಾಭಿಮಾನದ ಬದುಕಿಗೆ ದಾರಿಯಾಗಿದ್ದರು. ಅವರ ಈ ದಾರುಣ ಸಾವಿನ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಲಿ' ಎಂದಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ತಮ್ಮ ಆತ್ಮೀಯ ಗೆಳೆಯ ಸಿದ್ಧಾರ್ಥ ಅಗಲುವಿಕೆಗೆ ಕಂಬನಿ ಮಿಡಿದಿದ್ದಾರೆ. ಟ್ವೀಟ್ ಮಾಡಿರುವ ಎಚ್‌ಡಿಕೆ 'ಉದ್ಯಮಿ ಹಾಗೂ ಆತ್ಮೀಯ ಗೆಳೆಯ ಸಿದ್ಧಾರ್ಥ ಅವರ ನಿಧನದ ಸುದ್ದಿ ತಿಳಿದು ಆಘಾತಗೊಂಡಿದ್ದೇನೆ. ಕಳೆದ 25 ವರ್ಷಗಳ ಸ್ನೇಹಿತ ಸಿದ್ಧಾರ್ಥ ಅವರು ಕರ್ನಾಟಕದ ಕಾಫಿ ಉದ್ಯಮವನ್ನು ವಿಶ್ವಕ್ಕೆ ಪರಿಚಯಿಸಿದ್ದರು. ಸಹಸ್ರಾರು ನೌಕರರಿಗೆ ತಮ್ಮ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಿದ್ದರು. ಅವರ ನಿಧನದಿಂದ ಕರ್ನಾಟಕ ಶ್ರೇಷ್ಠ ಉದ್ಯಮಿಯೊಬ್ಬರನ್ನು ಕಳೆದುಕೊಂಡಿದೆ' ಎಂದಿದ್ದಾರೆ.