ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕ ಕೋಮತಿ ರೆಡ್ಡಿ ಸ್ಪೀಕರ್‌ ಮೇಲೆ ಮೈಕ್‌ ಎಸೆದು ಗಾಯಗೊಳಿಸಿದ ಘಟನೆ ಬೆನ್ನಲ್ಲೇ, ಗುಜರಾತ್‌ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್‌ ಮಧ್ಯೆ ಜಟಾಪಟಿ ನಡೆದು ಕೈ ಕೈ ಮಿಲಾಯಿಸಿರುವ ಘಟನೆ ನಡೆದಿದೆ
ಅಹಮದಾಬಾದ್: ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಕೋಮತಿ ರೆಡ್ಡಿ ಸ್ಪೀಕರ್ ಮೇಲೆ ಮೈಕ್ ಎಸೆದು ಗಾಯಗೊಳಿಸಿದ ಘಟನೆ ಬೆನ್ನಲ್ಲೇ, ಗುಜರಾತ್ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಮಧ್ಯೆ ಜಟಾಪಟಿ ನಡೆದು ಕೈ ಕೈ ಮಿಲಾಯಿಸಿರುವ ಘಟನೆ ನಡೆದಿದೆ.
ಸದನದಲ್ಲಿ ಅನುಚಿತ ವರ್ತನೆ ತೋರಿದ ಕಾರಣಕ್ಕಾಗಿ ಕಾಂಗ್ರೆಸ್ ಶಾಸಕರಾದ ಪ್ರತಾಪ್ ದೂಧತ್ ಮತ್ತು ಅಮರೀಶ್ ದರ್ರನ್ನು 3 ವರ್ಷ ಮತ್ತು ಮತ್ತೋರ್ವ ಕಾಂಗ್ರೆಸ್ ಶಾಸಕ ಬಲದೇವ್ ಠಾಕೂರ್ ಅವರನ್ನು 1 ವರ್ಷ ಸದನದಿಂದ ಅಮಾನತು ಮಾಡಲಾಗಿದೆ.
ಬುಧವಾರ ಚರ್ಚೆಯ ವೇಳೆ ಸ್ಪೀಕರ್ ರಾಜೇಂದ್ರ ತ್ರಿವೇದಿ, ಕಾಂಗ್ರೆಸ್ ಶಾಸಕ ವಿಕ್ರಮ್ ಮದಮ್ಗೆ ತಡೆಯೊಡ್ಡಿದ್ದು, ಆಡಳಿತ ಮತ್ತು ವಿಪಕ್ಷದ ಮಧ್ಯೆ ಜಟಾಪಟಿಗೆ ಕಾರಣವಾಯ್ತು. ಸ್ಪೀಕರ್ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಶಾಸಕರಾದ ವಿಕ್ರಮ್ ಮದಮ್ ಮತ್ತು ಅಮರೀಶ್ ದರ್ ಸದನದ ಬಾವಿಗೆ ಇಳಿದು ಪ್ರತಿಭಟಿಸಲು ಮುಂದಾದರು. ಬಳಿಕ ಸ್ಪೀಕರ್ ಅವರು ಕಾಂಗ್ರೆಸ್ ಶಾಸಕರನ್ನು ದಿನದ ಮಟ್ಟಿಗೆ ಅಮಾನತುಗೊಳಿಸಿದರು.
ಇದರಿಂದ ಕುಪಿತಗೊಂಡ ಕಾಂಗ್ರೆಸ್ ಶಾಸಕ ಪ್ರತಾಪ್ ದೂಧತ್, ಮೈಕ್ರೋ ಫೋನ್ನ ರಾಡ್ ಕಿತ್ತುಕೊಂಡು ಬಿಜೆಪಿ ಶಾಸಕ ಜಗದೀಶ್ ಪಾಂಚಾಲ್ ಅವರ ಮೇಲೆಸೆದು ಹಲ್ಲೆ ನಡೆಸಿದರು. ಅಲ್ಲದೇ ಬೆಲ್ಟ್ ಬಿಚ್ಚಿ ಪಾಂಚಾಲ್ ಮೇಲೆ ಹಲ್ಲೆ ನಡೆಸಲು ಮುಂದಾದರು.
ಇದೇ ವೇಳೆ ಹಿಂದಿನ ಬಾಗಿಲಿನ ಮೂಲಕ ಸದನವನ್ನು ಪ್ರವೇಶಿಸಿದ ಅಮರೀಶ್ ದರ್, ಪಾಂಚಾಲ್ ಮೇಲೆ ಹಲ್ಲೆ ನಡೆಸಿದರು. ಸದನದಲ್ಲಿದ್ದ ಇತರ ಬಿಜೆಪಿ ಸದಸ್ಯರು ಪಾಂಚಾಲ್ ರಕ್ಷಣೆಗೆ ಧಾವಿಸಿ ಅಮರೀಶ್ ದರ್ ಮೇಲೆ ಮೇಲೆ ಹಲ್ಲೆ ನಡೆಸಿದರು. ಇದರಿಂದಾಗಿ ಸದನಗೊಂದಲದ ಗೂಡಾಗಿತ್ತು. ಮಾರ್ಷಲ್ಗಳು ತಕ್ಷಣವೇ ಆಗಮಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು.
